Advertisement

ಭಾರತಕ್ಕಿದೆ ಮಾನವ ಸಹಿತ ಮಂಗಳಯಾನ ಸಾಮರ್ಥ್ಯ

04:58 PM Dec 03, 2018 | Team Udayavani |

ಧಾರವಾಡ: 2020-22ರೊಳಗೆ ಮಾನವ ಸಹಿತ ಮಂಗಳಯಾನ ಮಾಡಿದ 4ನೇ ದೇಶವಾಗಿ ಹೊರ ಹೊಮ್ಮವ ಸಾಮರ್ಥ್ಯ ಭಾರತಕ್ಕಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ| ಕೆ. ಕಸ್ತೂರಿ ರಂಗನ್‌ ಹೇಳಿದರು. ನಗರದ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಠ್ಠಲ ಮಕ್ಕಳ ಆಸ್ಪತ್ರೆ 40ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಸಾಧ್ಯವಾದರೆ ಕುಟುಂಬ ಸಮೇತ ಮಂಗಳ ಗ್ರಹಕ್ಕೂ ರಜೆ ದಿನ ಕಳೆಯಲು ಹೋಗುವ ದಿನಗಳು ದೂರವಿಲ್ಲ ಎಂದರು.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳಿಗೆ 2020-22ರೊಳಗೆ ಮಂಗಳ ಗ್ರಹದ ಮೇಲೆ ಮನುಷ್ಯನನ್ನು ಕಳುಹಿಸಬೇಕು ಎಂದು ತಿಳಿಸಿದ್ದಾರೆ. ಇಸ್ರೋ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವ ಸಾಮರ್ಥ್ಯ ಹೊಂದಿದ್ದು, ಅತೀ ಶೀಘ್ರ ನೆರವೇರಲಿದೆ. ಭೂಮಿ ಬಿಟ್ಟು ಬೇರೆ ಗ್ರಹಗಳ ಮೇಲೆ ಮನುಷ್ಯ ವಾಸಿಸುವ ಸರ್ವ ಲಕ್ಷಣ ಗೋಚರಿಸುತ್ತಿದೆ ಎಂದು ಹೇಳಿದರು.

ಮಕ್ಕಳಿಗೆ ಒತ್ತಡ ಬೇಡ: ಪೋಷಕರ ಒತ್ತಡದಿಂದ ಮಕ್ಕಳು ಖನ್ನತೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ. ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ಬಿಡಬೇಕು. 8 ವರ್ಷದವರೆಗೆ ಮಕ್ಕಳ ಮೆದುಳು ಸಹಜವಾಗಿ ಬೆಳೆಯಬೇಕೇ ಹೊರತು ಅದಕ್ಕೆ ಒತ್ತಡ ಹಾಕಬಾರದು. ಮಗು ನೈಸರ್ಗಿಕವಾಗಿ ಬೆಳೆಯಲು ಪೂರಕ ವಾತಾವರಣ ನಿರ್ಮಿಸಬೇಕು ಎಂದರು.

ವೈದ್ಯರ ತಂಡ ನೀಡುವಲ್ಲಿ ಕರ್ನಾಟಕ ರಾಜ್ಯ 3ನೇ ಸ್ಥಾನದಲ್ಲಿದ್ದು, ಸದ್ಯ ರಾಜ್ಯದಲ್ಲಿ 58 ಸಾವಿರ ವೈದ್ಯರಿದ್ದಾರೆ. ಆದರೆ ಇನ್ನೂ 16 ಸಾವಿರ ವೈದ್ಯರ ಕೊರತೆ ಇದೆ. ಈ ಕೊರತೆ ನೀಗಿಸುವ ಕೆಲಸವನ್ನು ಹಂತ-ಹಂತವಾಗಿ ಸರಕಾರ ಮಾಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಚ್ಚು ಒತ್ತು ನೀಡಿವೆ. ಆಯುಷ್ಮಾನ್‌ ಭಾರತ ಯೋಜನೆಗೆ ಕರ್ನಾಟಕ ಕೂಡಾ ನೆರವು ನೀಡಿದೆ. ಶಿಕ್ಷಣ ಮತ್ತು ಆರೋಗ್ಯ ವಾಣಿಜ್ಯೀಕರಣ ಆಗಬಾರದು. ಶಿಕ್ಷಣ ಸಂಸ್ಥೆಗಳು ಹಾಗೂ ಆರೋಗ್ಯ ಸಂಸ್ಥೆಗಳು ಹೆಚ್ಚು ದಾನ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

Advertisement

ಮುಂಬೈನ ಏಷಿಯನ್‌ ಕ್ಯಾನ್ಸರ್‌ ಇನ್ಸ್‌ಟಿಟ್ಯೂಟ್‌ ಚೇರ್‌ಮನ್‌ ಪದ್ಮಶ್ರೀ ಡಾ| ರಮಾಕಾಂತ ದೇಶಪಾಂಡೆ, ಎಸ್‌.ಆರ್‌. ಕೌಲಗುಡ್ಡ , ಜಿ.ಸಿ. ತಲ್ಲೂರ ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಜಿಲ್ಲಾಧಿಕಾರಿ ದೀಪಾ ಚೋಳನ್‌ ಸೇರಿದಂತೆ ಆಸ್ಪತ್ರೆಯ ಅಭಿಮಾನಿಗಳು, ದೇಶಪಾಂಡೆ ಕುಟುಂಬದ ಹಿತೈಷಿಗಳು ಇದ್ದರು.

ವಿಠ್ಠಲ ಮಕ್ಕಳ ಆಸ್ಪತ್ರೆ ಸಂಸ್ಥಾಪಕ ಡಾ| ರಾಜನ ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು. ಡಾ| ಕವನ ದೇಶಪಾಂಡೆ, ಕವಿತಾ ದೇಶಪಾಂಡೆ ಸ್ವಾಗತಿಸಿದರು. ಡಾ| ಪಲ್ಲವಿ ದೇಶಪಾಂಡೆ ಪರಿಚಯಿಸಿ, ವಂದಿಸಿದರು. ಇದಕ್ಕೂ ಮುನ್ನ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರಿಂದ ಸಂಗೀತ ಕಛೇರಿ ಜರುಗಿತು.

ಕರ್ನಾಟಕದ ಪ್ರಕೃತಿ, ಔಷಧ ಹಾಗೂ ಜಲಮೂಲಗಳ ಬಗ್ಗೆ ಕರ್ನಾಟಕ ಜ್ಞಾನ ಆಯೋಗ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದೆ. ಈ ಪೈಕಿ ಕಾವೇರಿ ಗ್ಯಾಲರಿ ಯೋಜನೆ ಸಿದ್ಧಪಡಿಸಿದ್ದು, ಕಾವೇರಿ ನದಿಯ ಸಮಗ್ರ ಮಾಹಿತಿ ದೊರೆಯಲಿದೆ. ಜೊತೆಗೆ ಮಡಿವಾಳ ಕೆರೆಯಲ್ಲಿ ಜೀವ ವೈವಿಧ್ಯ ಪಾರ್ಕ್‌ ಸಹ ಮಾಡಲಾಗುತ್ತಿದೆ.
.ಡಾ| ಕೆ. ಕಸ್ತೂರಿ ರಂಗನ್‌,
ಅಧ್ಯಕ್ಷರು, ಕರ್ನಾಟಕ ಜ್ಞಾನ ಆಯೋಗ

Advertisement

Udayavani is now on Telegram. Click here to join our channel and stay updated with the latest news.

Next