Advertisement

10 ದಿನದೊಳಗೆ ಬಸವಣ್ಣನ ಕುರಿತ ಲೋಪದೋಷ ಸರಿಪಡಿಸಿ : ಸರಕಾರಕ್ಕೆ ಮಠಾಧೀಶರ ಗಡುವು

08:09 PM Jun 07, 2022 | Team Udayavani |

ಧಾರವಾಡ : ಸಮಾಜ ಸುಧಾರಕ ಬಸವಣ್ಣನವರ ಬಗ್ಗೆ ಪಠ್ಯ ಪುಸ್ತಕದಲ್ಲಿ ಆಗಿರುವ ಲೋಪದೋಷಗಳನ್ನು ಸರ್ಕಾರ 10 ದಿನಗಳ ಒಳಗಾಗಿ ಸರಿಪಡಿಸುವಂತೆ ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ಮಠಾಧಿಶರು ಸರ್ಕಾರಕ್ಕೆ ಗಡುವು ನೀಡಿದ್ದಾರೆ.

Advertisement

ಇಲ್ಲಿನ ಕಲ್ಯಾಣ ನಗರದಲ್ಲಿರುವ ಶ್ರೀ ಸಿದ್ದರಾಮೇಶ್ವರ ಮಾರ್ಗದರ್ಶಿಯಲ್ಲಿ ಮಂಗಳವಾರ ಸುದೀರ್ಘ ಐದು ಗಂಟೆಗಳ ಸಭೆ ನಡೆಸಿದ 21 ಲಿಂಗಾಯತ ಮಠಾಧಿಶರ ಈ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ.

ಸಭೆಯ ಕುರಿತು ಮಾಧ್ಯಮಗಳಿಗೆ ತರಳಬಾಳು ಮಹಾಸಂಸ್ಥಾನ ಮಠದ ಡಾ|ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮಾಹಿತಿ ನೀಡಿ, ಬಸವಣ್ಣ ವೈದಿಕ ಪರಂಪರೆಯನ್ನು ಕಠೋರವಾಗಿ ವಿರೋಧಿಸಿ ಸಮಾನತೆ ಸಮಾಜವನ್ನು ಕಟ್ಟುವುದಕ್ಕೆ ಯತ್ನಿಸಿದರು. ಅವರದ್ದು ಅರಿವೇ ಗುರು ತತ್ವ. ಸಮಾಜದ ಎಲ್ಲಾ ಸ್ಥರದ ಜನರಿಗೂ ಸಮಾನ ಆತ್ಮಾಭಿಮಾನ ಸಿಕ್ಕಬೇಕು ಎನ್ನುವ ಉದ್ದೇಶದಿಂದಲೇ ಅವರು ಬಸವ ಧರ್ಮವನ್ನು ಹುಟ್ಟು ಹಾಕಿದರು. ಅವರ ವಚನ ಸಾಹಿತ್ಯ ಮತ್ತು ತತ್ವಗಳನ್ನು ಏಕಾಏಕಿ ತಿದ್ದುಪಡಿ ಮಾಡುವ ದುಃಸ್ಸಾಹಸ ಖಂಡಿತ ಶೋಭೆ ತರುವಂತದ್ದಲ್ಲ ಎಂದರು.

ಧಾರವಾಡದ ಸಭೆಯಲ್ಲಿ ಎಲ್ಲಾ ಮಠಾಧಿಶರು ಸೇರಿಕೊಂಡು ಆಗಿರುವ ಲೋಪದೋಷಗಳನ್ನು ಚರ್ಚಿಸಿ ಅವುಗಳನ್ನು ಸರಿಪಡಿಸಿದ್ದೇವೆ. ಇಲ್ಲಿನ ಹೊಸ ಮತ್ತು ಹಳೆ ಪಠ್ಯಗಳನ್ನು ಪರಿಶೀಲಿಸಿ ಪರಿಷ್ಕರಿಸಿದ್ದೇವೆ. ಈ ಪ್ರತಿಯನ್ನು ಸರ್ಕಾಕ್ಕೆ ಕೊಡುತ್ತೇವೆ. 10 ದಿನಗಳ ಒಳಗಾಗಿ ಅವುಗಳನ್ನು ಸರ್ಕಾರ ತಿದ್ದುಪಡಿ ಮಾಡಬೇಕು. ಇಲ್ಲವಾದರೆ ನಾಡಿನ ಎಲ್ಲಾ ಮಠಾಧಿಶರು ಒಟ್ಟಾಗಿ ಸೇರಿ ಮುಂದಿನ ಹೋರಾಟದ ಕುರಿತು ಚಿಂತನೆ ನಡೆಸಬೇಕಾಗುತ್ತದೆ ಎಂದು ಡಾ|ಪಂಡಿತಾರಾಧ್ಯ ಸ್ವಾಮೀಜಿ ಎಚ್ಚರಿಸಿದರು.

ಎಲ್ಲ ಮಹನೀಯರದ್ದು ಸರಿಯಾಗಲಿ : ಪಠ್ಯ ಪುಸ್ತಕದಲ್ಲಿ ಕೇವಲ ಬಸವಣ್ಣ ಮಾತ್ರವಲ್ಲ, ಕುವೆಂಪು, ಡಾ|ಬಿ.ಆರ್.ಅಂಬೇಡ್ಕರ್, ನಾರಾಯಣಗುರು ಸೇರಿದಂತೆ ಎಲ್ಲಾ ಮಹನೀಯರ ಕುರಿತು ಆಗಿರುವ ಲೋಪದೋಷಗಳನ್ನು ಕೂಡಲೇ ಸರ್ಕಾರ ಸರಿಮಾಡಬೇಕು. ಕೆಲವು ಸಾಹಿತಿಗಳು ಈಗಾಗಲೇ ತಮ್ಮ ಲೇಖನಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಲೋಪದೋಷ ಸರಿಪಡಿಸಿದರೆ ಅವರು ಮರಳಿ ಕೊಡುವ ವಿಶ್ವಾಸವಿದೆ ಎಂದು ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.

Advertisement

ಇದನ್ನೂ ಓದಿ : ಸಿದ್ದರಾಮಯ್ಯ ,ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಮತಿಭ್ರಮಣೆಯಾಗಿದೆ: ನಳಿನ್ ಕುಮಾರ್ ಕಟೀಲ್

ಬಸವಣ್ಣನವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಚಾರದ ಮಾತನ್ನಾಡುತ್ತಿದ್ದಾರೆ. ಅವುಗಳಿಗೆ ಸರ್ಕಾರ ಗಮನ ಕೊಡದೇ ನೇರವಾಗಿ ಬಸವತತ್ವ ಮತ್ತು ವಚನ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ಲೋಪದೋಷಗಳನ್ನು ತಿದ್ದುಪಡಿ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸ್ವಾಮೀಜಿಗಳು ಒಕ್ಕೋರಲಿನಿಂದ ಆಗ್ರಹಿಸಿದರು.

ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ|ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ಡಾ|ತೋಂಟದ ಸಿದ್ದರಾಮ ಸ್ವಾಮೀಜಿ, ನಿಡಸೋಸಿ ಮಠದ ಡಾ|ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಬಾಲ್ಕಿ ಹಿರೇಮಠದ ಡಾ|ಬಸವಲಿಂಗ ಪಟಾಧ್ಯಕ್ಷರು, ಬಸವಧರ್ಮ ಪೀಠದ ಗಂಗಾ ಮಾತಾಜಿ, ಮಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಮುಂಡರಗಿಯ ನಿಜಗುಣಪ್ರಭು ಸ್ವಾಮೀಜಿ, ಅಥಣಿಯ ಪ್ರಭುಚೆನ್ನಬಸವ ಸ್ವಾಮೀಜಿ, ಗೋಕಾಕ್‌ನ ಮರುಘರಾಜೇಂದ್ರಸ್ವಾಮೀಜಿ, ಹಾವೇರಿಯ ಹುಕ್ಕೆರಿಮಠದ ಸದಾಶಿವ ಸ್ವಾಮೀಜಿ, ಚೆನ್ನಮ್ಮನ ಕಿತ್ತೂರಿನ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ|ಅಲ್ಲಮಪ್ರಭು ಸ್ವಾಮೀಜಿ, ಲಿಂಗಸಗೂರಿನ ಸಿದ್ದಲಿಂಗ ಸ್ವಾಮೀಜಿ, ಬಟಕುರ್ಕಿಯ ಬಸವಲಿಂಗ ಸ್ವಾಮೀಜಿ, ಬೆಂಗಳೂರು ಬಸವಧರ್ಮ ಪೀಠದ ಅಕ್ಕ ನಾಗಲಾಂಬಿಕಾ ಮಾತಾಜಿ, ಕಿತ್ತೂರಿನ ಓಂ ಗುರುಜಿ, ಹಂದಿಗುಂದಿಯ ಶಿವಾನಂದ ಮಹಾಸ್ವಾಮೀಜಿ, ಇಳಕಲ್‌ನ ಗುರುಮಹಾಂತ ಸ್ವಾಮೀಜಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಸವಣ್ಣನವರ ಕುರಿತು ಪಠ್ಯದೋಷವಾಗಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಈ ಪತ್ರಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿ ಲೋಪ ಸರಿಪಡಿಸುವ ಭರವಸೆ ನೀಡಿದ್ದಾರೆ. ಬಸವಣ್ಣನವರು ಯಾರು ಕೇಳುವವರಿಲ್ಲ ಎಂದುಕೊಂಡು ಪದೆ ಪದೇ ಟಾರ್ಗೇಟ್ ಆಗುತ್ತಿದ್ದಾರೆ. ಆದರೆ ಸ್ವಾಮೀಜಿಗಳು ಬಸವ ಪರಂಪರೆ ಮುನ್ನಡೆಸುವ ಹೊಣೆ ಹೊತ್ತಿದ್ದೇವೆ. ಇನ್ನಾದರೂ ಇದನ್ನ ಅವರು ಅರಿಯಬೇಕು.
– ಡಾ|ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಸಾಣೆಹಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next