ಹುಬ್ಬಳ್ಳಿ: ನಗರದೆಲ್ಲೆಡೆ ಮಂಗಳವಾರ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಲೋಪದೋಷ, ಸಣ್ಣ-ಪುಟ್ಟ ವಾಗ್ವಾದ ಹೊರತು ಪಡಿಸಿದರೆ ಶಾಂತಿಯುತ ಮತದಾನವಾಗಿದೆ.
ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಸಂಜೆವರೆಗೆ ನಡೆಯಿತು. ಕೆಲ ಮತಕೇಂದ್ರಗಳಲ್ಲಿ ಬೆಳಗ್ಗೆ 6:30 ಗಂಟೆಗೇ ಪಾಳಿ ಹಚ್ಚಿದ್ದರು. ಮಧ್ಯಾಹ್ನ 12 ಗಂಟೆವರೆಗೆ ಚುರುಕಾಗಿ ನಡೆದ ಮತದಾನ ನಂತರ ಬಿಸಿಲಿನ ತಾಪದ ಪರಿಣಾಮ ಮಂದವಾಗಿತ್ತು. 12 ಗಂಟೆವರೆಗೆ ಶೇ.20. 25 ಮತದಾನ ನಡೆದಿತ್ತು. ಸಂಜೆ 3:30ರ ನಂತರ ಮತ್ತೆ ಚುರುಕುಗೊಂಡಿತು. ವೃದ್ಧ ಹಾಗೂ ಅಂಗವಿಕಲ ಮತದಾರರನ್ನು ಕರೆದುಕೊಂಡು ಬರಲು 25ಕ್ಕೂ ಹೆಚ್ಚು ಓಲಾ ಕ್ಯಾಬ್‌ಗಳು ಉಚಿತವಾಗಿ ಸೇವೆ ಸಲ್ಲಿಸಿದವು.
ಚುನಾವಣಾ ಆ್ಯಪ್ ಸದ್ಬಳಕೆ: ಚುನಾವಣಾ ಆಯೋಗದಿಂದ ಮತದಾರರ ಮಾಹಿತಿ ತಿಳಿದುಕೊಳ್ಳಲು ನೀಡಿದ್ದ ಆ್ಯಪ್ ಸದ್ಬಳಕೆ ಮಾಡಿಕೊಳ್ಳಲಾಯಿತು. ಮತದಾರರಿಗೆ ಸ್ಥಳದಲ್ಲಿಯೇ ಮೊಬೈಲ್ ಮೂಲಕ ಮಾಹಿತಿ ನೋಡಿ ಅವರ ಮತದಾನ ಕೇಂದ್ರಗಳ ಕುರಿತು ಮಾಹಿತಿ ನೀಡಲಾಗುತ್ತಿತ್ತು. ನಗರದ ಬಹುತೇಕ ಮತಕೇಂದ್ರಗಳಲ್ಲಿ ಆಯಾ ಪಕ್ಷದ ಸಿಬ್ಬಂದಿ ಆಗಮಿಸುತ್ತಿದ್ದ ಮತದಾರಿಗೆ ಮಾಹಿತಿ ನೀಡುತ್ತಿರುವುದು ಕಂಡು ಬಂದಿತು.
ಶಾಲು ಕಮಾಲು: ಆಯಾ ಪಕ್ಷದವರು ಎಂದು ಗುರುತಿಸಿಕೊಳ್ಳಲು ಕಾಂಗ್ರೆಸ್ ಪಕ್ಷದವರು ಕೇಸರಿ-ಬಿಳಿ-ಹಸಿರು, ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡಿದ್ದರು. ಸಂಸದ ಪ್ರಹ್ಲಾದ ಜೋಶಿ, ಶಾಸಕ ಜಗದೀಶ ಶೆಟ್ಟರ ಸೇರಿದಂತೆ ಬಿಜೆಪಿ ಎಲ್ಲ ಮುಖಂಡರು ಕೇಸರಿ ಶಾಲು ಹಾಕಿಕೊಂಡಿದ್ದರು.
100 ಮೀಟರ್ ಸಂಬಂಧವೇ ಇಲ್ಲ ಮತ ಕೇಂದ್ರದಿಂದ 100 ಮೀ. ಒಳಗಡೆ ಯಾವುದೇ ವಾಹನ ತರುವಂತಿಲ್ಲ, ಗುಂಪು-ಗುಂಪಾಗಿ ಜನ ನಿಲ್ಲುವಂತಿಲ್ಲ ಎನ್ನುವ ನಿಯಮಗಳಿದ್ದರೂ ನಗರದ ಬಹುತೇಕ ಕೇಂದ್ರಗಳಲ್ಲಿ ಅನುಷ್ಠಾನ ಕಂಡುಬರಲಿಲ್ಲ. ಕೆಲವು ಮತ ಕೇಂದ್ರಗಳ ಮುಂಭಾಗದಲ್ಲಿ ವಾಹನ ನಿಲ್ಲಿಸಿದರೂ ಯಾರೊಬ್ಬರು ಹೇಳುವವರಿರಲಿಲ್ಲ. ಕೆಲವೆಡೆ 100 ಮೀ ಗುರುತೂ ಹಾಕಿರಲಿಲ್ಲ.
ಮತಕೇಂದ್ರಗಳಿಗೆ ಭೇಟಿ: ಬೆಳಗ್ಗೆ ಕುಟುಂಬದೊಂದಿಗೆ ಆಗಮಿಸಿ ಮತ ಚಲಾಯಿಸಿದ ಸಂಸದ ಪ್ರಹ್ಲಾದ ಜೋಶಿ ನಂತರ ಕ್ಷೇತ್ರದ ವಿವಿಧೆಡೆ ಮತ ಚಲಾವಣೆ ಕುರಿತು ಮಾಹಿತಿ ಪಡೆದರು. ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಅವರು ಪೂರ್ವ ಕ್ಷೇತ್ರದ ವಿವಿಧೆಡೆ ಸಂಚರಿಸಿ ಮತದಾನ ಮಾಹಿತಿ ಪಡೆದರು. ಕಮರಿಪೇಟೆ ಸರ್ಕಾರಿ ಶಾಲೆ ಬೂತ್‌ನಲ್ಲಿ ಪರಿಶೀಲನೆಗೆ ತೆರಳಿದ್ದ ಪ್ರಸಾದ ಅಬ್ಬಯ್ಯ ಅವರನ್ನು ಸ್ಥಳೀಯ ಯುವಕರು ಮೋದಿ ಪರ ಘೊಷಣೆ ಕೂಗಿ ಮರಳಿ ಕಳಿಸಿದ ಘಟನೆ ನಡೆದಿದೆ.