Advertisement

ಅಬ್ಟಾ! ಮಸ್ತ್ ಮತದಾನ

03:39 PM Apr 24, 2019 | Naveen |

ಧಾರವಾಡ: ಸ್ಥಳೀಯ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ. 70.02 ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಹೆಚ್ಚು ಮತದಾನ ದಾಖಲಾಗಿದೆ.

Advertisement

2009ರಲ್ಲಿ ಶೇ.56.56, 2014ರಲ್ಲಿ ಶೇ. 65.98 ಮತದಾನ ಆಗಿತ್ತು. ಆದರೆ ಈ ಸಲ ಕಳೆದ ಬಾರಿಗಿಂತ ಮತದಾನದಲ್ಲಿ ಶೇ.4.04 ಹೆಚ್ಚಳವಾಗಿದೆ. ಕಲಘಟಗಿ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ.75.98) ಮತದಾನವಾಗಿದ್ದರೆ, ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ (ಶೇ.63.86)ಅತಿ ಕಡಿಮೆ ಮತದಾನವಾಗಿದೆ.

ಲೋಕಸಭಾ ಕ್ಷೇತ್ರದಲ್ಲಿ 8,75,479 ಪುರುಷ, 8,49,750 ಮಹಿಳೆ ಹಾಗೂ 106 ತೃತೀಯ ಲಿಂಗಿಗಳು ಸೇರಿ ಒಟ್ಟು 17,25,335 ಮತದಾರರು ಇದ್ದಾರೆ. ಈ ಪೈಕಿ 6,38,848 ಪುರುಷ, 5,69,265 ಮಹಿಳೆ ಹಾಗೂ 7 ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 12,08,120 ಮಂದಿ ಮತ ಚಲಾಯಿಸಿದ್ದು, ಶೇ. 70.02 ಸಾಧನೆಯಾಗಿದೆ. 2014ರಲ್ಲಿ 15,78,125 ಮತದಾರರ ಪೈಕಿ 10,41,226 ಮಂದಿ ಮತ ಚಲಾಯಿಸಿ ಶೇ. 65.98 ಸಾಧನೆಯಾಗಿತ್ತು.

ಮತದಾನ ಜಾಗೃತಿಗಾಗಿ ಸ್ವೀಪ್‌ ಸಮಿತಿ, ಜಿಲ್ಲಾಡಳಿತ ಕಳೆದ ಎರಡು ತಿಂಗಳಿನಿಂದ ಕೈಗೊಂಡ ಕ್ರಮಗಳು ಈ ಬಾರಿ ಕಳೆದ ಲೋಕಸಭೆಗಿಂತ ಮತದಾನ ಪ್ರಮಾಣ ಹೆಚ್ಚಳವಾಗಲು ಕಾರಣವಾಗಿದೆ. ಕ್ಷೇತ್ರಾದ್ಯಂತ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. ಮತದಾನ ಶಾಂತಿಯುತವಾಗಿತ್ತು.

ಕೆಲವೆಡೆ ತಾಂತ್ರಿಕ ದೋಷ: ಬೆಳಗ್ಗೆ 7 ಗಂಟೆಗೆ ಎಲ್ಲಾ 1872 ಮತಗಟ್ಟೆಗಳಲ್ಲೂ ಮತದಾನ ಪ್ರಾರಂಭವಾಯಿತು. ಆರಂಭದಲ್ಲಿ ವಿವಿಧ ಕಾರಣಕ್ಕೆ ಕೆಲವು ಮತಗಟ್ಟೆಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಲಾಯಿತು. 9 ಗಂಟೆ ನಂತರ ಮತದಾನ ಚುರುಕು ಪಡೆಯಿತು. ವಿವಿಧ ಮತಗಟ್ಟೆಗಳಲ್ಲಿರುವ ಒಟ್ಟು 14 ಮತಯಂತ್ರ, 7 ಕಂಟ್ರೋಲ್ ಯೂನಿಟ್ ಮತ್ತು 41 ವಿವಿಪ್ಯಾಟ್‌ಗಳಲ್ಲಿ ತಾಂತ್ರಿಕ ಅಡಚಣೆ ಉಂಟಾಗಿತ್ತು. ತಕ್ಷಣ ಎಂಜಿನಿಯರ್‌ಗಳ ತಂಡ ಹಾಗೂ ತಾಂತ್ರಿಕ ಸಿಬ್ಬಂದಿ ಅವುಗಳನ್ನು ಬದಲಾಯಿಸಿ ಸುಗಮ ಮತದಾನಕ್ಕೆ ಸಹಕರಿಸಿದರು.

Advertisement

ಆಯೋಗಕ್ಕೆ ವರದಿ: ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ದೀಪಾ ಚೋಳನ್‌ ನಾಯಕತ್ವದಲ್ಲಿ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿ ಮತದಾನ ಪ್ರಗತಿಯನ್ನು ಸಮರ್ಪಕವಾಗಿ ಸಂಗ್ರಹಿಸಿ, ಪ್ರತಿ ಗಂಟೆಗೊಮ್ಮೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದರು. ಇದಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಥಾಪಿಸಲಾಗಿದ್ದ ಮತದಾನ ದಿನದ ಕಾರ್ಯಗಳ ವೀಕ್ಷಣಾ ಕೇಂದ್ರದಲ್ಲಿ ಸ್ವತಃ ಜಿಲ್ಲಾಧಿಕಾರಿಗಳೇ ಉಸ್ತುವಾರಿ ವಹಿಸಿ ಸೆಕ್ಟರ್‌ ಅಧಿಕಾರಿಗಳಿಗೆ, ಸಹಾಯಕ ಚುನಾವಣಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಮತಯಂತ್ರದಲ್ಲಿ ಭವಿಷ್ಯ: ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರಗೊಂಡಿದೆ. ಜಿಲ್ಲೆಯ ವಿಧಾನಸಭಾ ಮತಕ್ಷೇತ್ರದ ಕೇಂದ್ರ ಸ್ಥಾನದಿಂದ (ಮಸ್ಟರಿಂಗ್‌ ಕೇಂದ್ರ) ಮತಯಂತ್ರಗಳು ಮಂಗಳವಾರ ರಾತ್ರಿ ಕೃಷಿ ವಿಶ್ವವಿದ್ಯಾಲಯದ ಡೀಮಸ್ಟರಿಂಗ್‌ (ಚುನಾವಣಾ ಸಾಮಗ್ರಿ ಸ್ವೀಕಾರ ಕೇಂದ್ರ) ಸ್ಥಳಕ್ಕೆ ಬಂದು ತಲುಪಿದ್ದು, ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ 19 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಇದ್ದುದರಿಂದ ಪ್ರತಿ ಮತಗಟ್ಟೆಯಲ್ಲಿ ತಲಾ 2 ರಂತೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಬಳಕೆ ಮಾಡಲಾಗಿತ್ತು. ಇದರೊಂದಿಗೆ ನೋಟಾ ಬಟನ್‌ ಕೂಡ ಸೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next