ಧಾರವಾಡ: ಜಿಲ್ಲೆಯಲ್ಲಿ ಫೆ.3ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಲಿದ್ದು, ಜಿಲ್ಲೆಯಲ್ಲಿರುವ 5 ವರ್ಷದೊಳಗಿನ ಸುಮಾರು 2,47,752 ಜನ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2018, ಫೆ.14ರಂದು ಜರುಗಿದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆ ಶೇ.100.03ರಷ್ಟು ಗುರಿ ಸಾಧಿಸಿದೆ. ಈ ಸಲವು ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ 892 ಲಸಿಕಾ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಅಲ್ಲದೆ 93 ಸಾರಿಗೆ (ಟ್ರಾಂಜಿಸ್ಟ್) ತಂಡ, 56 ಸಂಚಾರಿ (ಮೊಬೈಲ್) ತಂಡಗಳನ್ನು ರಚಿಸಲಾಗಿದೆ. 3,620 ಜನ ಸಿಬ್ಬಂದಿಗಳು 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. 192 ಜನ ಅಧಿಕಾರಿಗಳು ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಫೆ.4,5 ಮತ್ತು 6ರಂದು ಜರುಗುವ ಲಸಿಕೆ ಹಾಕುವುದಕ್ಕಾಗಿ ಮನೆ-ಮನೆ ಭೇಟಿ ಕಾರ್ಯಕ್ರಮಕ್ಕೆ ಜಿಲ್ಲೆಯ 4,22,524 ಮನೆಗಳ ಗುರಿ ಹೊಂದಲಾಗಿದೆ. ಧಾರವಾಡ ಜಿಲ್ಲೆಯ ಎಲ್ಲ ತಾಲೂಕು ಹಾಗೂ ನಗರ ಪ್ರದೇಶಗಳ ಸಂಚಾರಿ ಲಸಿಕಾ ಕೇಂದ್ರಕ್ಕಾಗಿ ಒಟ್ಟು 160 ವಾಹನಗಳನ್ನು ಬಳಸಲಾಗುತ್ತಿದೆ. ಅಗತ್ಯ ಸಿದ್ಧತೆಗಳನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಕೊಳ್ಳಲಾಗಿದ್ದು, ನೂರಕ್ಕೆ ನೂರರಷ್ಟು ಗುರಿ ಸಾಧಿಸುವ ವಿಶ್ವಾಸವಿದೆ ಎಂದರು.
ಡಾ| ಸಿದ್ಧಲಿಂಗಯ್ಯ ಮಾತನಾಡಿದರು. ಡಾ| ಎಚ್.ಆರ್. ಪುಷ್ಪಾ ಸ್ವಾಗತಿಸಿದರು. ಜಿಪಂ ಸಿಇಒ ಡಾ| ಸತೀಶ್. ಬಿ.ಸಿ., ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಆರ್.ಎಂ.ದೊಡ್ಡಮನಿ, ಜಿಲ್ಲಾ ಶಸ್ತ್ರಚಿಕಿತ್ಸತ ಡಾ| ಗಿರಿಧರ ಕುಕನೂರ, ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ| ವಿ.ಡಿ. ಕರ್ಪೂರಮಠ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜ ವರವಟ್ಟಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಾನಗರ ಪಾಲಿಕೆ, ಸಾರಿಗೆ, ಪೊಲೀಸ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಾರಿಗೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಕ್ರಿಯರಾಗಿ ತೊಡಗಿಸಿಕೊಂಡು ಅರ್ಹ ಯಾವೊಬ್ಬ ಮಗುವು ಪೋಲಿಯೋ ಅಭಿಯಾನದಿಂದ ಹೊರಗುಳಿಯದಂತೆ ಜಾಗೃತಿ ವಹಿಸಬೇಕು.•
ದೀಪಾ ಚೋಳನ್,
ಜಿಲ್ಲಾಧಿಕಾರಿ