Advertisement

ಸಹಕಾರಿಯಲ್ಲಿ ಸ್ವಲ್ಪ ಸಿಹಿ-ಅಲ್ಪ ಕಹಿ

03:10 PM Nov 14, 2019 | Naveen |

ಬಸವರಾಜ ಹೊಂಗಲ್‌
ಧಾರವಾಡ:
ಈ ಜಿಲ್ಲೆ ಸಹಕಾರಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ದೇಶವಷ್ಟೇ ಅಲ್ಲ ಏಷಿಯಾ ಖಂಡವೇ ಸ್ಮರಿಸುತ್ತದೆ. ಇಲ್ಲಿ ಸರ್ಕಾರಕ್ಕೂ ಮೊದಲೇ ಸಹಕಾರಿಗಳು ಹುಟ್ಟಿಕೊಂಡಿದ್ದು, ಇಂದಿಗೂ ಇಲ್ಲಿ “ಸಹಕಾರಂ ಗೆಲ್ಗೆ ಸಹಕಾರಂ ಬಾಳ್ಗೆ’ ಘೋಷಣೆ ಮೊಳಗುತ್ತಲೇ ಇದೆ.

Advertisement

ಅಖಂಡ ಧಾರವಾಡ ಜಿಲ್ಲೆ ರಾಜ್ಯ, ದೇಶ ಮಾತ್ರವಲ್ಲ, ಇಡೀ ಏಷಿಯಾ ಖಂಡಕ್ಕೆ ಮೊಟ್ಟ ಮೊದಲ ಸಹಕಾರ ಸಂಘ ಸ್ಥಾಪಿಸಿದ ಹಿರಿಮೆ ಹೊಂದಿದೆ. ಇಂದು ಗದಗ ಜಿಲ್ಲೆಯಲ್ಲಿರುವ ಕಣಗಿನಹಾಳದಲ್ಲಿ ಸಿದ್ದನಗೌಡ ಪಾಟೀಲ ಅವರು ಶತಮಾನಗಳ ಹಿಂದೆಯೇ ಸಹಕಾರಿ ಸಂಘ ಸ್ಥಾಪಿಸಿ ಸೈ ಎನಿಸಿದ್ದರು. ಆದರೆ ಸಹಕಾರ ಕ್ಷೇತ್ರದಲ್ಲಿನ ಪ್ರಾಮಾಣಿಕ ಅಧಿಕಾರಿಗಳ ಕೊರತೆ ಮತ್ತು ಉತ್ತಮ ಸಹಕಾರಿ ಸಂಘಟಕರ ಕೊರತೆಯಿಂದ ಇದೀಗ ಜಿಲ್ಲೆಯ ಸಹಕಾರಿ ಕ್ಷೇತ್ರ ತೆವಳುತ್ತ ಸಾಗುವಂತಾಗಿದೆ.

ಗ್ರಾಹಕರಿಗೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗದೇ, ನೀಡಿದ ಸಾಲ ಸಕಾಲಕ್ಕೆ ವಸೂಲಿ ಆಗದೇ ಆರ್ಥಿಕ ಮುಗ್ಗಟ್ಟು ಉಂಟಾಗಿ ಸಹಕಾರಿ ಸಂಘಗಳು ಬಾಗಿಲು ಮುಚ್ಚುವಂತಾಗಿವೆ. ಈಗಾಗಲೇ ಜಿಲ್ಲೆಯ 1034 ಸಹಕಾರ ಸಂಘಗಳ ಪೈಕಿ 77 ಸಹಕಾರ ಸಂಘಗಳು ಸಂಪೂರ್ಣ ಬಾಗಿಲು ಮುಚ್ಚಿದ್ದರೆ, 139 ಸಂಘಗಳು ತಮ್ಮ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿವೆ. 818 ಅಷ್ಟೇ ಸುಸ್ಥಿತಿ: 2019 ಮಾ.31ಕ್ಕೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1034 ಸಹಕಾರ ಸಂಘಗಳಿದ್ದು, ಈ ಪೈಕಿ 818 ಕಾರ್ಯ ನಿರ್ವಹಣೆಯಲ್ಲಿವೆ. ಉಳಿದಂತೆ 139 ಸಂಘಗಳ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡು ಮುಚ್ಚುವ ಹಂತದಲ್ಲಿದ್ದರೆ, 77 ಸಂಘಗಳು ಸ್ಥಗಿತಗೊಂಡ ಕಾರಣ ಸಹಕಾರ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಇದರ ಮಧ್ಯೆ ಹೊಸದಾಗಿ 15 ಸಹಕಾರಿ ಸಂಘಗಳು ಹೊಸದಾಗಿ ನೋಂದಣಿಯಾಗಿವೆ. ಇನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು 162 ಇದ್ದು, ಈ ಪೈಕಿ 3 ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿ ಸಮಾಪನೆ (ಬಾಗಿಲು ಮುಚ್ಚಿವೆ)ಗೊಂಡಿವೆ. 16 ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ 5 ಸಮಾಪನೆಗೊಂಡಿದ್ದರೆ, 208 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 17 ಸ್ಥಗಿತಗೊಂಡು, ಇನ್ನುಳಿದ ಮೂರು ಸಂಪೂರ್ಣ ಸಮಾಪನೆಗೊಂಡಿವೆ. ಈ ಬಗ್ಗೆ ತಾಲೂಕುವಾರು ಮಾಹಿತಿ ಇಂತಿವೆ.

ಧಾರವಾಡ: ಈ ವ್ಯಾಪ್ತಿಯಲ್ಲಿ 303 ಸಂಘಗಳಿದ್ದರೆ ಈ ಪೈಕಿ 232 ಸಂಘಗಳು ಸುಸ್ಥಿತಿಯಲ್ಲಿದ್ದು, 41 ಸ್ಥಗಿತ ಹಾಗೂ 30 ಸಮಾಪನೆಗೊಂಡ ಸ್ಥಿತಿಯಲ್ಲಿವೆ. ಈ ಪೈಕಿ 28 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಈ ಪೈಕಿ 25 ಸುಸ್ಥಿತಿಯಲ್ಲಿದ್ದರೆ 2 ಸ್ಥಗಿತ ಮತ್ತು ಒಂದು ಸಮಾಪನೆಗೊಂಡಿದೆ. ಇನ್ನೂ 5 ಪಟ್ಟಣ ಸಹಕಾರ ಸಂಘಗಳಲ್ಲಿ ಒಂದು ಸಮಾಪನೆಗೊಂಡಿದೆ. 31 ನೌಕರರ ಪತ್ತಿನ ಸಹಕಾರ ಸಂಘಗಳಲ್ಲಿ ಒಂದು ಸ್ಥಗಿತ ಸ್ಥಿತಿಯಲ್ಲಿದೆ. 59 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 6 ಸ್ಥಗಿತಗೊಂಡಿದ್ದರೆ, ಒಂದು ಸಮಾಪನೆಗೊಂಡಿದೆ. 2 ಉಣ್ಣೆ ನೇಕಾರರ ಸಹಕಾರ ಸಂಘಗಳ ಪೈಕಿ ಒಂದು ಸುಸ್ಥಿತಿಯಲ್ಲಿದ್ದರೆ, ಇನ್ನೊಂದು ಸ್ಥಗಿತಗೊಂಡಿದೆ. ಇತರೆ ಸಹಕಾರ ಸಂಘಗಳು 6 ಇದ್ದು, ಈ ಪೈಕಿ 4 ಸುಸ್ಥಿತಿಯಲ್ಲಿದ್ದರೆ, 2 ಮುಚ್ಚುವ ಹಂತದಲ್ಲಿವೆ.

Advertisement

ಹುಬ್ಬಳ್ಳಿ: ಈ ವ್ಯಾಪ್ತಿಯಲ್ಲಿರುವ ಒಟ್ಟು 358 ಸಂಘಗಳ ಪೈಕಿ 274 ಕಾರ್ಯ ನಿರ್ವಹಿಸುತ್ತಿದ್ದು, ಉಳಿದ 54 ಸ್ಥಗಿತವಾಗಿದ್ದರೆ 30 ಸಮಾಪನೆಗೊಂಡಿವೆ. ಈ ಪೈಕಿ ಸಹಕಾರ ಮುದ್ರಣಾಲಯವೂ ಒಂದಾಗಿದೆ. 31 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 1 ಸ್ಥಗಿತ ಸ್ಥಿತಿಯಲ್ಲಿದ್ದರೆ 10 ಪಟ್ಟಣ ಸಹಕಾರ ಬ್ಯಾಂಕ್‌ ಗಳಲ್ಲಿ 4 ಸಮಾಪನೆಗೊಂಡಿವೆ. ಇದಲ್ಲದೇ 2 ನೌಕರರ ಪತ್ತಿನ ಸಹಕಾರ ಸಂಘ, ಒಂದು ಸಂಸ್ಕರಣ ಸಹಕಾರ ಸಂಘಗಳು, ಒಂದು ಸಹಕಾರಿ ನೂಲಿನ ಗಿರಣಿ ಸಮಾಪನೆಗೊಂಡಿವೆ.

ಕಲಘಟಗಿ: ಈ ವ್ಯಾಪ್ತಿಯಲ್ಲಿರುವ 100 ಸಂಘಗಳಲ್ಲಿ 84 ಕಾರ್ಯ ನಿರ್ವಹಿಸುತ್ತಿವೆ. 9 ಸ್ಥಗಿತವಾಗಿದ್ದರೆ 7 ಸಮಾಪನೆಗೊಂಡಿವೆ. ಈ ಪೈಕಿ 31 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೆಲ್ಲವೂ ಸುಸ್ಥಿತಿಯಲ್ಲಿವೆ. 43 ಹಾಲು ಉತ್ಪಾದಕರ ಸಹಕಾರ ಸಂಘಗಳ ಪೈಕಿ 3 ಸ್ಥಗಿತವಾಗಿದ್ದರೆ ಒಂದು ಸಮಾಪನೆಗೊಂಡಿವೆ. ಇದಲ್ಲದೇ ಎರಡು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಗಳ ಪೈಕಿ ಒಂದು ಸಮಾಪನೆಗೊಂಡಿದೆ. ಎರಡು ಗ್ರಾಹಕರ ಸಹಕಾರ ಸಂಘಗಳ ಪೈಕಿ ಒಂದು ಮುಚ್ಚುವ ಸ್ಥಿತಿಯಲ್ಲಿದೆ.

ಕುಂದಗೋಳ: ಈ ವ್ಯಾಪ್ತಿಯಲ್ಲಿರುವ 92 ಸಂಘಗಳಲ್ಲಿ 81 ಕಾರ್ಯ ನಿರ್ವಹಿಸುತ್ತಿದ್ದು, 6 ಸ್ಥಗಿತವಾಗಿದ್ದರೆ 5 ಸಮಾಪನೆಗೊಂಡಿವೆ. 28 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೆಲ್ಲವೂ ಕಾರ್ಯ ನಿರ್ವಹಿಸುತ್ತಿವೆ. 31 ಹಾಲು ಉತ್ಪಾದಕರ ಸಹಕಾರ ಸಂಘಗಳ ಪೈಕಿ 2 ಸ್ಥಗಿತಗೊಂಡು ಮುಚ್ಚುವ ಹಂತಕ್ಕೆ ಬಂದು ನಿಂತಿವೆ. 4 ಉಣ್ಣೆ ನೇಕಾರರ ಸಹಕಾರ ಸಂಘಗಳಲ್ಲಿ 2 ಸುಸ್ಥಿತಿಯಲ್ಲಿದ್ದರೆ, 1ಸ್ಥಗಿತವಾಗಿ ಮುಚ್ಚುವ ಹಂತದಲ್ಲಿದ್ದರೆ ಮತ್ತೂಂದು ಸಮಾಪನೆಗೊಂಡಿದೆ.

ನವಲಗುಂದ: ಈ ವ್ಯಾಪ್ತಿಯಲ್ಲಿರುವ 181 ಸಂಘಗಳ ಪೈಕಿ 147 ಕಾರ್ಯ ನಿರ್ವಹಿಸುತ್ತಿವೆ. 29 ಸ್ಥಗಿತವಾಗಿದ್ದರೆ 5 ಸಂಪೂರ್ಣ ಸಮಾಪನೆಗೊಂಡಿವೆ. ಈ ಪೈಕಿ 33 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ 40 ಹಾಲು ಉತ್ಪಾದಕರ ಸಂಘಗಳಲ್ಲಿ ತಲಾ ಒಂದು ಸಂಘಗಳು ಸಮಾಪನೆಗೊಂಡಿವೆ. 57 ನೀರು ಬಳಕೆದಾರರ ಸಹಕಾರ ಸಂಘಗಳಲ್ಲಿ 19 ಸ್ಥಗಿತಗೊಂಡಿವೆ. ಇನ್ನೂ ಒಂದೇ ಇದ್ದ ಕೈಗಾರಿಕಾ ಸಹಕಾರ ಸಂಘವೂ ಈಗ ಬಾಗಿಲು ಮುಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next