ಧಾರವಾಡ : ಇಲ್ಲಿಯ ಜ್ಯುಬಲಿ ವೃತ್ತದಲ್ಲಿ ಮೊಬೈಲ್ ಟವರ್ ಏರಿ ಕುಳಿತಿದ್ದ ಅಪರಾಧ ಹಿನ್ನಲೆವುಳ್ಳ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಒಳಗೊಂಡ ತಂಡವು ಸತತ 3 ತಾಸು ಕಾರ್ಯಾಚರಣೆ ಕೈಗೊಂಡು ಸುರಕ್ಷಿತವಾಗಿ ಕೆಳಗಡೆ ಇಳಿಸಿದ ಘಟನೆ ಮಂಗಳವಾರ ನಡೆದಿದೆ.
ಇಲ್ಲಿನ ಮಾಳಮಡ್ಡಿಯ ಜಾವೇದ ಎಂಬಾತ ಮಧ್ಯಾಹ್ನದ ಹೊತ್ತಿಗೆ ಎತ್ತರ ಮೊಬೈಲ್ ಟವರ್ ಏರಿ ಕುಳಿತು ಬಿಟ್ಟಿದ್ದಾನೆ. ಈ ವಿಷಯ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಬಂದಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಆರಂಭದಲ್ಲಿ ಮಾನಸಿಕ ಅಸ್ವಸ್ಥ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ರಕ್ಷಣಾ ಸಿಬ್ಬಂದಿ, ಟವರ್ ಏರಿ ಜಾವೇದನೊಂದಿಗೆ ಸಂವಹನ ಮಾಡಿದ ಬಳಿಕ ಜಾವೇದನ ಗುರುತು ಪತ್ತೆಯಾಗಿದೆ.
ಇದಕ್ಕೂ ಮುನ್ನ ರಕ್ಷಣೆ ಕಾರ್ಯದಲ್ಲಿ ಟವರ್ ಎರಲು ಮುಂದಾದ ಸಿಬ್ಬಂದಿಗೆ ಜಾವೇದ ತನ್ನ ಕೈಯಲ್ಲಿದ್ದ ಚಿಕ್ಕ ಕಬ್ಬಿಣದ ಸಲಾಕೆಯಿಂದ ಹೊಡೆಯುವ ಬೆದರಿಕೆ ಹಾಕಿದ್ದ. ಆದರೆ ಆತನ ಮನವೊಲಿಸಿದ ಸಿಬ್ಬಂದಿ, ಆತನೊಂದಿಗೆ ಸಂವಹನ ಮಾಡಿದಾಗ ಕೆಲ ಬೇಡಿಕೆ ಇಟ್ಟಿದ್ದಾನೆ.
ಸಿಬ್ಬಂದಿ ಕೊಟ್ಟ ನೀರು ಕುಡಿದ ಜಾವೇದ, ಬಿರಿಯಾನಿ ಕೊಡುವಂತೆ ಹೇಳಿದ್ದಾನೆ. ಅದಕ್ಕೆ ಸಮ್ಮತಿಸಿ ಬಿರಿಯಾನಿ ಸಹ ತರಿಸಿ, ನೀಡಿದರೂ ಅದನ್ನು ತಿನ್ನದೇ ಬಿಸಾಡಿದ್ದಾನೆ. ಇದಲ್ಲದೇ ಜಿಲ್ಲಾ ನ್ಯಾಯಾಧೀಶರು ಬರುವಂತೆ ಬೇಡಿಕೆ ಇಟ್ಟಿದ್ದು, ಇದಕ್ಕೂ ಸಮ್ಮತಿಸಿದಂತೆ ಹೇಳಿದ ರಕ್ಷಣಾ ಸಿಬ್ಬಂದಿಗಳು, ಕೊನೆಗೆ ಜಾವೇದನಿಗೆ ಆತನ ಪತ್ನಿ ನೊಂದು ಅಳುತ್ತಿರುವುದಾಗಿ ಹೇಳಿ ಕೆಳಗಡೆ ಇಳಿಯುವಂತೆ ಹೇಳಿದ್ದಾರೆ. ಕೊನೆಗೆ ಸಿಗರೇಟ್ ಪ್ಯಾಕೇಟ್ ಕೇಳಿದ ಜಾವೇದನಿಗೆ ಅದನ್ನೂ ಪೂರೈಸಿದ್ದು, ಟವರ್ ಮೇಲೆ ಕುಳಿತೇ ಒಂದು ಸಿಗರೇಟ್ ಸೇದಿ, ಆ ಬಳಿಕ ಕೆಳಗಡೆ ಇಳಿದಿದ್ದಾರೆ.
3 ತಾಸಿಗೂ ಹೆಚ್ಚು ಸಮಯ ಬಿಸಿಲಿನಲ್ಲಿ ಟವರ್‌ನ ತುತ್ತತುದಿಯ ಮೇಲೆ ಕುಳಿತಿದ್ದರಿಂದ ಬಳಲಿದ್ದ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯತ್ತ ಪೊಲೀಸರ ಪಡೆ ಕರೆದೊಯ್ದಿದೆ.
ಇದನ್ನೂ ಓದಿ : ಕೆಎಂಎಫ್ ವೀಲಿನಕ್ಕೆ ಮುಂದಾದರೆ ರೈತರ ಜೊತೆ ಸೇರಿ ಉಗ್ರ ಹೋರಾಟ : ಕೆಸಿಆರ್