Advertisement

Dharwad: ಪ್ರಸಾದ ವಿತರಣೆ ವಿಚಾರದಲ್ಲಿ ಜಗಳ…ಬಿಜೆಪಿ ಯುವ ಮುಖಂಡನ ಹತ್ಯೆ

08:07 PM Apr 19, 2023 | Team Udayavani |

ಧಾರವಾಡ: ಗ್ರಾಮದ ಜಾತ್ರೆಯಲ್ಲಿ ಪ್ರಸಾದ ವಿತರಣೆಗೆ ನಡೆದ ಜಗಳ ಕೋಟೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ, ಬಿಜೆಪಿ ಯುವ ಮುಖಂಡ ಪ್ರವೀಣ ಕಮ್ಮಾರ ಹತ್ಯೆಯಲ್ಲಿ ಅಂತ್ಯ ಕಂಡಿದೆ.

Advertisement

ಗ್ರಾಮದ ಇನ್ನೋರ್ವ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಪಟಾತ್ ಸೇರಿ ಆರು ಜನರ ಗುಂಪು ಈ ಕೃತ್ಯ ಎಸಗಿದೆ. ಪ್ರವೀಣ ಹತ್ಯೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಶೋಧ ಕಾರ್ಯವೂ ನಡೆದಿದೆ. ಮಂಗಳವಾರ ಗ್ರಾಮದ ಉಡಚಮ್ಮದೇವಿ ಜಾತ್ರೆಯಲ್ಲಿ ಪ್ರಸಾದ ವಿತರಣೆಗೆ ಎರಡು ಗುಂಪುಗಳ ಮಧ್ಯೆ ನಡೆದ ಜಗಳವನ್ನು ಕೋಟೂರು ಗ್ರಾಪಂ ಉಪಾಧ್ಯಕ್ಷ ಪ್ರವೀಣ ಮದ್ಯ ಪ್ರವೇಶಿಸಿ ಬಗೆ ಹರಿಸಿದ್ದರು ಎಂದು ಪ್ರತ್ಯಕ್ಷದರ್ಶಿ ಗ್ರಾಮಸ್ಥರು ತಿಳಿಸಿದ್ದಾರೆ.

ಆದರೆ ನಂತರ ಕುಡಿದ ಅಮಲಿನಲ್ಲಿದ್ದ ರಾಘವೇಂದ್ರ ಪಟಾದ್ ಮತ್ತು ಸಹಚರರು ಪ್ರವೀಣಗೆ ಚಾಕುವಿನಿಂದ ಇರಿದಿದ್ದು, ತಕ್ಷಣ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಬುಧವಾರ ಪ್ರವೀಣ ಮೃತಪಟ್ಟಿದ್ದಾನೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹಾಗೂ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಕೀಯ ತಿರುವು:
ಚುನಾವಣೆಯ ಹೊತ್ತಿನಲ್ಲಿ ಪ್ರವೀಣ ಕಮ್ಮಾರ ಹತ್ಯೆ ಪ್ರಕರಣ ಇದೀಗ ರಾಜಕೀಯ ತೀರುವು ಪಡೆದಿದೆ. ಹತ್ಯೆಯ ಪ್ರಮುಖ ಆರೋಪಿ ರಾಘವೇಂದ್ರ ಪಟಾತ್ ಬಿಜೆಪಿ ಕಾರ್ಯಕರ್ತನಾಗಿದ್ದಾನೆ. ಅಲ್ಲದೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಶಾಸಕ ಅಮೃತ ದೇಸಾಯಿ ಅವರಿಗೆ ಆಪ್ತನಾಗಿದ್ದಾನೆ ಎನ್ನಲಾಗಿದೆ. ಆದರೆ ಇತ್ತಿಚೇಗೆ ಬಿಜೆಪಿ ಪಕ್ಷ ತೊರೆದ ರಾಘವೇಂದ್ರ, ಬಸವರಾಜ ಕೊರವರ ನೇತೃತ್ವದ ಜನಜಾಗೃತಿ ಹೋರಾಟ ವೇದಿಕೆ ಸೇರಿದ್ದ ಎನ್ನಲಾಗುತ್ತಿದೆ. ಪಟಾತ್, ಧಾರವಾಡ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಓಬಿಸಿ ಘಟಕದ ಉಪಾಧ್ಯಕ್ಷನಾಗಿದ್ದಾನೆ. ಜಿಲ್ಲೆಯ ಎಲ್ಲಾ ಬಿಜೆಪಿ ಹಿರಿಯ ನಾಯಕರ ಜತೆ ಒಡನಾಟ ಹೊಂದಿದ್ದಾನೆ ಎನ್ನುತ್ತಿದ್ದಾರೆ ಕೋಟೂರು ಗ್ರಾಮಸ್ತರು. ಇನ್ನೊಂದೆಡೆ ಇದು ಜಾತಿ ಜಗಳ ಎಂದು ಕೂಡ ಚರ್ಚಿಸಲಾಗುತ್ತಿದೆ.

ಬಿಜೆಪಿ ಕಾರ್ಯಕರ್ತ ಪ್ರವೀಣ ಕಮ್ಮಾರ ಹತ್ಯೆ, ರಾಜಕೀಯ ಕೊಲೆ. ಸೂಕ್ತ ತನಿಖೆಗೆ ಪೊಲೀಸರಿಗೆ ಸೂಚಿಸಿದೆ. ಪ್ರವೀಣ ಕುಟುಂಬಕ್ಕೆ ಪರಿಹಾರ ನೀಡುವ ಜತೆ ನ್ಯಾಯ ಕೊಡಿಸಲಾಗುವುದು.
– ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರು

Advertisement

ಕೋಟೂರು ಗ್ರಾಮದ ಜಾತ್ರೆಯಲ್ಲಿ ಕುಡಿದು ಕೆಲವರು ಗಲಾಟೆ ಮಾಡಿದ್ದು, ಗಲಾಟೆ ಬಿಡಿಸಲು ಹೋದ ಪ್ರವೀಣ ಕಮ್ಮಾರ ಅವರನ್ನೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಪ್ರಕರಣದಡಿ ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆದಿದೆ. ಇನ್ನೂ ಮೂವರ ಬಂಧನಕ್ಕೆ ಶೋಧ ನಡೆದಿದೆ.
– ಲೋಕೇಶ ಜಗಳಾಸರ, ಎಸ್ಪಿ,ಧಾರವಾಡ

ಗ್ರಾ.ಪಂ.ರಾಜಕೀಯಕ್ಕೆ ಕೊಲೆ
ಇನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷನಾಗಿದ್ದ ಪ್ರವೀಣ ಕಮ್ಮಾರ್ ಗುತ್ತಿಗೆ ಕಾಮಗಾರಿ ಮಾಡುತ್ತಿದ್ದ ರಾಘವೇಂದ್ರ ಪಠಾತ್‌ಗೆ ಕಾಮಗಾರಿ ಸರಿಯಾಗಿ ಮಾಡುತ್ತಿಲ್ಲ ಎಂದು ನೀಡಿರಲಿಲ್ಲ ಎನ್ನಲಾಗಿದೆ. ಅದೂ ಅಲ್ಲದೇ ಈ ಹಿಂದೆ ಗ್ರಾ.ಪಂ.ಅಧ್ಯಕ್ಷನಾಗಿದ್ದ ಶಂಕರಯ್ಯ ಮಠಪತಿ ಅವರು ಗ್ರಾ.ಪಂ.ನ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ನೇಮಿಸಿದ್ದ ಗೀತಾ ಬಾರಿಕೇರ ಎಂಬುವವರನ್ನು ಪ್ರವೀಣ ಕೆಲಸದಿಂದ ತೆಗೆದು ಹಾಕಿದ್ದ ಎನ್ನಲಾಗಿದೆ. ಇದರ ಇಂತಹ ಇನ್ನಿತರ ಗ್ರಾ.ಪಂ.ರಾಜಕೀಯ ವಿಚಾರಗಳು ಸೇಡಿನ ರೂಪತಾಳಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ: ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ವಿಧಾನ ಪರಿಷತ್ತು ಸದಸ್ಯ Ayanur Manjunath

Advertisement

Udayavani is now on Telegram. Click here to join our channel and stay updated with the latest news.

Next