Advertisement

ಡಾ|ಪಾಟೀಲಗೆ ಕುಂಚ ಕಲಾ ತಪಸ್ವಿ ಪ್ರಶಸ್ತಿ ಪ್ರದಾನ

05:13 PM Nov 30, 2018 | |

ಧಾರವಾಡ: ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ನೀಡುವ ಒಂದು ಲಕ್ಷ ನಗದು, ಸ್ಮರಣಿಕೆ ಒಳಗೊಂಡಿರುವ ಜೀವಮಾನ ಸಾಧನೆಯ ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿಯನ್ನು ಕಲಬುರಗಿಯ ಡಾ.ಎ.ಎಸ್‌. ಪಾಟೀಲ ಅವರಿಗೆ ನಗರದಲ್ಲಿ ಸೃಜನಾ ರಂಗಮಂದಿರದಲ್ಲಿ ಪ್ರದಾನ ಮಾಡಲಾಯಿತು. ಇದಲ್ಲದೇ 50 ಸಾವಿರ ನಗದು, ಸ್ಮರಣಿಕೆ ಒಳಗೊಂಡ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿಗೆ ಸುರೇಖಾ ಹಾಗೂ ತಲಾ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡ ಯುವ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಒಡಿಶಾದ ಸಂತೋಷಕುಮಾರ ರೌತರಾಯ್‌ ಮತ್ತು ಪರಾಗ ದಿನೇಶ ಬೋರ್ಸೆ ಅವರಿಗೆ ನೀಡಲಾಯಿತು.

Advertisement

ಪ್ರಶಸ್ತಿ ಪ್ರದಾನ ಮಾಡಿದ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಮಾತನಾಡಿ, ಡಿ.ವಿ. ಹಾಲಭಾವಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿದ್ದು, ಅದನ್ನು ಎಂದಿಗೂ ಮರೆಯಲಾಗದು. ಅವರ ಮಾರ್ಗದರ್ಶನದಲ್ಲಿ ಯುವ ಕಲಾವಿದರು ತಮ್ಮೊಳಗಿನ ಕಲೆಯನ್ನು ಹೊರ ಹಾಕುವ ಕೆಲಸ ಮಾಡಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿದ ಡಾ.ಎ.ಎಸ್‌. ಪಾಟೀಲ ಮಾತನಾಡಿ, ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಅಮೂಲ್ಯ ರತ್ನಗಳನ್ನೇ ನೀಡಿದ ಪುಣ್ಯಭೂಮಿ ಧಾರವಾಡ. ಈ ಮಣ್ಣಿನ ಗಂಧವೇ ಅಂತಹದ್ದು. ಈ ಭೂಮಿಯಲ್ಲಿ ಚಿತ್ರಕಲಾ ಶಿಲ್ಪಿ ಆಗಿ ಯುವ ಕಲಾವಿದರಿಗೆ ಮಾದರಿ ಆಗಿರುವ ಹಾಲಭಾವಿ ಅವರ ಸ್ಮರಣೆ ಅನುಕರಣೀಯ. ಕಲಾವಿದರು ಬೆಳೆಯಬೇಕಾದರೆ ಕಲಾ ಪೋಷಕರು ಬೇಕು. ಇಂತಹ ಕೆಲಸವನ್ನು ಹಾಲಭಾವಿ ಟ್ರಸ್ಟ್‌ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಹಾಲಭಾವಿ ಅವರ ಹೆಸರಿನ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಸಂತಸದೊಂದಿಗೆ ಜವಾಬ್ದಾರಿ ಹೆಚ್ಚುವಂತೆ ಮಾಡಿದೆ. ಹೀಗಾಗಿ ಮತ್ತಷ್ಟು ಕೆಲಸ ಮಾಡುವೆ. ಈಗಾಗಲೇ ನಾನೊಂದು ಟ್ರಸ್ಟ್‌ ರಚನೆ ಮಾಡಿಕೊಂಡು ಕಳೆದ 17 ವರ್ಷಗಳಿಂದ ಯುವ ಕಲಾವಿದರಿಗೆ ತಮ್ಮ ಕಲೆ ಪ್ರದರ್ಶಿಸಲು ವೇದಿಕೆ ಒದಗಿಸುವ ಕೆಲಸ ಮಾಡುತ್ತಿವೆ. ಸದ್ಯ ಈ ಪ್ರಶಸ್ತಿಯಲ್ಲಿ ದೊರೆತ ಒಂದು ಲಕ್ಷ ರೂ. ಹಣವನ್ನೂ ಕಲಾವಿದರ ಕಾರ್ಯ ಚಟುವಟಿಕೆಗೆ ಬಳಕೆ ಮಾಡುವುದಾಗಿ ತಿಳಿಸಿದರು. ಬೆಂಗಳೂರಿಗೆ ಸುರೇಖಾ ಮಾತನಾಡಿ, ಕಲಾವಿದರಿಗೆ ಸಾಕಷ್ಟು ಅಡೆತಡೆ, ಸಂಕಷ್ಟಗಳು ಇವೆ. ಇದೆಲ್ಲದರ ನಡುವೆ ಕಲಾವಿದರು ತಮ್ಮ ಕಲಾ ಆರಾಧನೆ ಮಾಡುತ್ತಿದ್ದಾರೆ. ಸರಕಾರಗಳು ಸಹ ಕಲಾವಿದರ ಸಂಕಷ್ಟ ಅರಿತು, ಅವುಗಳ ನಿವಾರಣೆ ಮಾಡಬೇಕು ಎಂದರು.

ಕಲಾವಿದರಾದ ಒಡಿಶಾದ ಸಂತೋಷಕುಮಾರ ರೌತರಾಯ್‌ ಮತ್ತು ಪರಾಗ ದಿನೇಶ ಬೋರ್ಸೆ ಅವರು ಅನಿಸಿಕೆ ಹಂಚಿಕೊಂಡರು. ಜಿಲ್ಲಾಧಿಕಾರಿ ದೀಪಾ ಚೋಳನ್‌ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮಾಜಿ ಶಾಸಕ ಎ.ಬಿ. ದೇಸಾಯಿ, ನಾಡೋಜ ಡಾ| ಮಹೇಶ ಜೋಶಿ, ಜಿಪಂ ಸಿಇಒ ಡಾ| ಬಿ.ಸಿ.ಸತೀಶ್‌, ಟ್ರಸ್ಟ್‌ ಸದಸ್ಯರಾದ ಎನ್‌.ಆರ್‌. ಬಾಳಿಕಾಯಿ, ಪಾರ್ವತಿ ಹಾಲಭಾವಿ, ಬಿ. ಮಾರುತಿ, ಎಸ್‌.ಕೆ. ಪತ್ತಾರ, ಸಿ.ಜಿ. ಪಾಟೀಲ, ಸುರೇಶ ಹಾಲಭಾವಿ, ಎಸ್‌.ಕೆ. ರಂಗಣ್ಣವರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next