Advertisement

ಧಾರವಾಡ ಮಾವು ಮೇಳಕ್ಕೆ ಉತ್ತಮ‌ ಸ್ಪಂದನೆ: 40 ಟನ್ ಮಾರಾಟ, ಮತ್ತೆ ಮೂರು ದಿನ‌ ವಿಸ್ತರಣೆ

10:23 PM May 15, 2024 | Team Udayavani |

ಧಾರವಾಡ : ಜಿಲ್ಲೆಯಲ್ಲಿ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಆಯೋಜಿಸಿರುವ ಮೂರು ದಿನಗಳ ಮಾವು ಮೇಳವು ಮತ್ತೆ ಮೂರು ದಿನಗಳಿಗೆ ವಿಸ್ತರಣೆಯಾಗಿದ್ದು, ಹೀಗಾಗಿ ಮೇ 19 ರವರೆಗೂ ಮಾವು ಮೇಳ ಇರಲಿದೆ.

Advertisement

ಜಿಲ್ಲೆಯ ಮಾವು ಮೇಳಕ್ಕೆ ದಶಕಕ್ಕಿಂತ ಹೆಚ್ಚು ನಂಟಿದ್ದು, ಮೇಳ ಆಯೋಜನೆಯಿಂದ ಇಲ್ಲಿವರೆಗೂ ಮೂರು ದಿನಗಳಿಗೆ ಅಷ್ಟೇ ಮೇಳ ಸೀಮಿತ. ಕೊನೆಯ ಕ್ಷಣದಲ್ಲಿ ರೈತರ ಒತ್ತಾಸೆಯಂತೆ ಐದು ದಿನಗಳವರೆಗೆ ವಿಸ್ತರಿಸಿದ್ದು ಇದೆ. ಆದರೆ ಇದೇ ಮೊದಲ ಬಾರಿಗೆ ಮಾವು ಮೇಳ ವಿಸ್ತರಣೆ ಮೂರು ದಿನಗಳು ಆಗಿದ್ದಲ್ಲದೇ ಬರೋಬ್ಬರಿ ಆರು ದಿನಗಳ ಕಾಲ ಮೇಳ ಆಯೋಜಿಸಿರುವುದು ಈ ಸಲದ ವಿಶೇಷತೆ ಅನ್ನುವಂತಾಗಿದೆ.

ಇಲ್ಲಿಯ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ವತಿಯಿಂದ ಮೇ 14 ರಿಂದ ಮೇ 16ರವೆರೆಗೆ ಮೂರು ದಿನಗಳ ಕಾಲ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು. ಮೇಳದ ಮೊದಲ ದಿನಕ್ಕಿಂತ 2ನೇ ದಿನ ಮೂರು ಪಟ್ಟು ಮಾವಿನ ಹಣ್ಣಿನ ಮಾರಾಟವಾಗಿದ್ದು, ಜಿಲ್ಲಾಽಕಾರಿ ದಿವ್ಯ ಪ್ರಭು ಅವರ ಸೂಚನೆ ಹಾಗೂ ಮಾವು ಬೆಳೆಗಾರರ ಒತ್ತಾಸೆ ಮೇರೆಗೆ ಮೇಳವನ್ನು ಮೂರು ದಿನ ಹೆಚ್ಚಿಸಲಾಗಿದೆ. ಈ ಹಿನ್ನಲೆಯಲ್ಲಿ ರವಿವಾರದವರೆಗೂ (ಮೇ 19) ಮಾವು ಮೇಳ ಇರಲಿದ್ದು, ಹೀಗಾಗಿ ಬರೋಬ್ಬರಿ ಈ ಸಲ ಆರು ದಿನಗಳ ಕಾಲ ಮಾವು ಮೇಳ ಆಯೋಜಿಸಿದಂತಾಗಿದೆ.

ಈ ಹಿಂದೆ 2018 ರಲ್ಲಿ ಮೂರು ದಿನ ಮಾವು ಮೇಳ ಹಮ್ಮಿಕೊಳ್ಳಲಾಗಿತ್ತು. ಆದರೆ ಕೊನೆಯಲ್ಲಿ ರೈತರಿಂದ ಬೇಡಿಕೆ ಬಂದ ಕಾರಣ ಮತ್ತೆರಡು ದಿನ ವಿಸ್ತರಿಸಿ ಒಟ್ಟು 5 ದಿನಗಳ ಕಾಲ ಮಾವು ಮೇಳ ನಡೆದು ಒಂದು ಕೋಟಿ ರೂ.ಗಳಿಗೂ ಹೆಚ್ಚು ಹಣ್ಣಿನ ವ್ಯಾಪಾರ ಆಗಿತ್ತು. ಇದಾದ ಬಳಿಕ 2019 ರಲ್ಲಿ ಮೇ ಕೊನೆಯ ವಾರದಲ್ಲಿ ಐದು ದಿನಗಳ ಕಾಲ ಮೇಳ ಆಯೋಜಿಸಲಾಗಿತ್ತು. ಈ ಸಲವಂತೂ 2ನೇ ದಿನಕ್ಕೆ ಮಾವು ರೈತರು ಮೇಳ ವಿಸ್ತರಣೆಗೆ ಪಟ್ಟು ಹಿಡಿದಲ್ಲದೇ ವಿಸ್ತರಣೆ ಮಾಡಿದರೆ ಮಳಿಗೆಯ ಬಾಡಿಗೆ ಕೂಡ ನಾವೇ ಭರಿಸುವುದಾಗಿ ಸ್ಪಷ್ಟಪಡಿಸಿದರು. ಹೀಗಾಗಿ ಮಾವು ಬೆಳೆಗಾರರ ಒತ್ತಾಸೆಯಂತೆ ಮಾವು ಮೇಳ ವಿಸ್ತರಣೆ ಆಗುವ ಮೂಲಕ ಮಾವು ಬೆಳೆಗಾರರು ಹಾಗೂ ಮಾವು ಪ್ರಿಯರಲ್ಲಿ ಸಂತಸ ಇಮ್ಮಡಿಗೊಳಿಸಿದೆ.

2ನೇ ದಿನದಲ್ಲಿಯೇ 40 ಲಕ್ಷ ವಹಿವಾಟು : ಮೇಳದ ಮೊದಲ ದಿನ 10 ಟನ್‌ಗಳಷ್ಟೇ ಮಾವಿನ ಹಣ್ಣು ಮಾರಾಟವಾಗಿತ್ತು. ಆದರೆ ಮೇಳದ 2ನೇ ದಿನವಾದ ಬುಧವಾರವಂತೂ ಭರ್ಜರಿ ವ್ಯಾಪಾರ ವಹಿವಾಟು ಆಗಿದೆ. ಮೊದಲ ದಿನಕ್ಕಿಂತ ಮೂರುಪಟ್ಟು ಮಾವಿನ ಹಣ್ಣಿನ ಮಾರಾಟ ಆಗಿದ್ದು, ಬರೋಬ್ಬರಿ 30 ಲಕ್ಷ ಮೌಲ್ಯದ 30 ಟನ್ ಮಾವಿನ ಹಣ್ಣಿನ ಮಾರಾಟವಾಗಿದೆ. ಹೀಗಾಗಿ ಎರಡು ದಿನಗಳಲ್ಲಿ 40 ಟನ್ ಮಾವಿನ ಹಣ್ಣು ಮಾರಾಟವಾಗುವ ಮೂಲಕ ಬರೋಬ್ಬರಿ 40 ಲಕ್ಷ ರೂ.ಗಳ ವ್ಯಾಪಾರ ವಹಿವಾಟು ಆಗಿದೆ. ಇದಲ್ಲದೇ ಮಾವು ಮೇಳವೂ ವಿಸ್ತರಣೆ ಆಗಿದ್ದು, ಇದಲ್ಲದೇ ಮೇಳವು ರವಿವಾರ ಕೊನೆಗೊಳ್ಳುವ ಕಾರಣ ಈ ಸಲ ಮಾವಿನ ಹಣ್ಣಿವ ವ್ಯಾಪಾರ ವಹಿವಾಟು ಕೋಟಿ ದಾಟುವ ನಿರೀಕ್ಷೆ ಇದೆ.

Advertisement

ಗಮನ ಸೆಳೆದಿರುವ ಮೇಳ : ದುಬಾರಿ ಮಾವಿನ ಹಣ್ಣು ಮಿಯಾ ಜಾಕಿ ಸೇರಿದಂತೆ ವಿವಿಧ ಬಗೆಯ 42 ಕ್ಕೂ ಹೆಚ್ಚು ಮಾವಿನ ಹಣ್ಣಿನ ತಳಿಗಳ ವೀಕ್ಷಣೆಯ ಜತೆಗೆ ಮಾವಿನ ಹಣ್ಣುಗಳೊಂದಿಗೆ ಮಾಡಿರುವ ಸೆಲ್ಪಿ ಪಾಯಿಂಟ್ ಈ ಸಲ ಗಮನ ಸೆಳೆದಿದೆ. ಅಲ್ಪೋಸ್ಸ್ ಮಾವಿನ ಹಣ್ಣೇ ಮೇಳದಲ್ಲಿ ಹೇರಳವಾಗಿದ್ದು, ಇದರ ಜತೆಗೆ ಕೊಪ್ಪಳದ ಕೇಸರ್, ಕಲ್ಮಿ, ಸಣ್ಣೆಲಿ, ಕರಿ ಇಸ್ಯಾಡ್, ಸುದರ್ಶನ್ ಸೇರಿದಂತೆ ವಿವಿಧ ಮಾವಿನ ಹಣ್ಣುಗಳಿವೆ. ಈ ಹಣ್ಣುಗಳ ವೈಶಿಷ್ಯತೆಗಳಿಂದ ಖರೀದಿಗೂ ಜೋರಾಗಿದೆ. ಮೇಳಕ್ಕೆಂದು ತಂದಿದ್ದ ಕೊಪ್ಪಳ ಕೇಸರ್ ತಳಿಯ ಮಾವಿನ ಹಣ್ಣುಗಳನ್ನು 80 ಡಜನ್‌ಹಣ್ಣುಗಳು ಮೇಳದ 2ನೇ ದಿನವೇ ಖಾಲಿಯಾಗಿದ್ದು, ಇದೇ ರೀತಿ ರುಚಿಕಟ್ಟಾದ ಮಲ್ಲಿಕಾ ಹಣ್ಣು ಭರ್ಜರಿಯಾಗಿ ಮಾರಾಟ ಆಗುತ್ತಿರುವುದು ವಿಶೇಷ.

ಸದ್ಯ ಮೇಳದಲ್ಲಿ 8-10 ಬಗೆಯ ತಳಿಯ ಹಣ್ಣಿಗಳು ಮಾರಾಟಕ್ಕೆ ಇದ್ದು, ಗ್ರಾಹಕರು ಮೇಳಕ್ಕೆ ಆಗಮಿಸಿ ಈ ಹಣ್ಣಿನ ರುಚಿ ಸವಿಯಬಹುದು. ಇನ್ನು ಮಾವು ಬೆಳೆಗಾರರು ಹಾಗೂ ಗ್ರಾಹಕರ ಮಧ್ಯೆಯೇ ನೇರವಾಗಿ ದರ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡಲಾಗಿದ್ದು, ಹೀಗಾಗಿ ವಿವಿಧ ಬಗೆಯ ತಳಿಯ ಮಾವಿನ ಹಣ್ಣುಗಳು ಡಜನ್‌ಗೆ 250 ರಿಂದ 500 ರೂ.ಗಳವರೆಗೂ ಮಾರಾಟ ಆಗುತ್ತಲಿವೆ. ಇದಲ್ಲದೇ ಆಯೋಜಿಸಿದ್ದ ಸಸ್ಯ ಸಂತೆಯಲ್ಲೂ ವಿವಿಧ ಬಗೆಯ ಮಾವಿನ ತಳಿ ಸೇರಿದಂತೆ ಬಗೆ ಬಗೆಯ ಸಸ್ಯ ತಳಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆದಿದ್ದೂ, ಇದಲ್ಲದೇ ಕೆಲವರು ಖರೀದಿಸುವ ಕಾರ್ಯವೂ ಸಾಗಿದೆ.

ಮೇಳ ವೀಕ್ಷಿಸಿದ ಡಿಸಿ: ವಿಸ್ತರಣೆ ಆಯ್ತು ಮೇಳ ಇನ್ನು ಬುಧವಾರ ಸಂಜೆ ಹೊತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮೇಳಕ್ಕೆ ಭೇಟಿ ನೀಡಿ, ವೀಕ್ಷಿಸಿದರು. ಸೆಲ್ಪಿ ಪಾಯಿಂಟ್ ವೀಕ್ಷಿಸಿದಲ್ಲದೇ ಮಾವಿನ ವಿವಿಧ ತಳಿಗಳನ್ನು ವೀಕ್ಷಣೆ ಮಾಡಿದರು. ಇದಲ್ಲದೇ ಮಾವು ಮಾರಾಟಗಾರರ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ವಿವಿಧ ಬಗೆಯ ಮಾವಿನ ಹಣ್ಣು ವೀಕ್ಷಿಸಿದರು. ಮಾವಿನ ಹಣ್ಣಿನ ವಿಶೇಷತೆ, ವೈಶಿಷ್ಯತೆಗಳ ಜತೆಗೆ ಮಾವು ಮೇಳದ ಪ್ರಯೋಜನ ಬಗ್ಗೆ ನೇರವಾಗಿ ಮಾವು ಬೆಳೆಗಾರರೊಂದಿಗೆ ಚರ್ಚಿಸಿ, ಮಾಹಿತಿ ಪಡೆದರು. ಇನ್ನು ಮಾವು ಬೆಳೆಗಾರರಿಂದ ಮಾವು ಮೇಳ ವಿಸ್ತರಣೆ ಮಾಡುವಂತೆ ಬಂದಿರುವ ಮನವಿ ಬಗ್ಗೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಿಂದ ಮಾಹಿತಿ ಪಡೆದು, ಮಾವು ರೈತರ ಒತ್ತಾಸೆಯಂತೆ ವಿಸ್ತರಣೆ ಮಾಡುವಂತೆಯೂ ಮೌಖಿಕವಾಗಿ ಹೇಳಿ, ಅಲ್ಲಿಂದ ತೆರಳಿದರು. ಇದಾದ ಬಳಿಕ ಮಾವು ಬೆಳೆಗಾರರೊಂದಿಗೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಮೂರು ದಿನಗಳ ಕಾಲ ಮೇಳ ವಿಸ್ತರಣೆಯ ನಿರ್ಧಾರ ಪ್ರಕಟಿಸಲಾಯಿತು.

ಮಾವು ಮೇಳಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದ್ದು, ಹೀಗಾಗಿ ಮಾವು ಬೆಳೆಗಾರರು ಹಾಗೂ ಮಾವು ಪ್ರಿಯ ಗ್ರಾಹಕರ ಒತ್ತಾಸೆ ಮೇರೆಗೆ ಮಾವು ಮೇಳ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಒಟ್ಟು ಆರು ದಿನಗಳ ಕಾಲ ನಡೆಯಲಿರುವ ಮೇಳವು ಮೇ 19 ರವರೆಗೆ ಇರಲಿದೆ.
-ಕೆ.ಸಿ.ಭದ್ರಯ್ಯನವರ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next