ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಐದನೇ ದಿನ ಶ್ರೀ ಮಂಜುನಾಥ ಸ್ವಾಮಿಯ ಗೌರಿ ಮಾರುಕಟ್ಟೆ ಉತ್ಸವವು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಲಕ್ಷದೀಪೋತ್ಸವದ ಕೊನೇಯ ದಿನ ಗೌರಿ ಮಾರುಕಟ್ಟೆ ಉತ್ಸವದಲ್ಲಿ ದೇಗುಲದ ಒಳಾಂಗಣದಲ್ಲಿ ಶ್ರೀ ಮಂಜುನಾಥ ದೇವರಿಗೆ ಪೂಜೆಯನ್ನು ಸಲ್ಲಿಸುವುದರೊಂದಿಗೆ ಉತ್ಸವ ಆರಂಭಗೊಂಡಿತು.
ಅಂಗಣದಲ್ಲಿ 16 ಸುತ್ತು ಪ್ರದಕ್ಷಿಣೆಯ ಅನಂತರ ಹೊರಾಂಗಣಕ್ಕೆ ಉತ್ಸವಮೂರ್ತಿ ಯನ್ನು ಕರೆತರಲಾಯಿತು.
ಉತ್ಸವ ಮೂರ್ತಿಯನ್ನು ಸರ್ವಾಲಂಕೃತವಾದ ಬೆಳ್ಳಿರಥದಲ್ಲಿ ವಿರಾಜಮಾನಗೊಳಿಸಿ ದೇವಾಲಯಕ್ಕೆ ಒಂದು ಸುತ್ತು ಬರಲಾಯಿತು. ಆ ಬಳಿಕ ಬೆಳ್ಳಿರಥವನ್ನು ಭಕ್ತರ ಉದ್ಘೋಷದೊಂದಿಗೆ ಗೌರಿಮಾರು ಕಟ್ಟೆಗೆ ಎಳೆದು ತರಲಾಯಿತು. ಗೌರಿಮಾರು ಕಟ್ಟೆಯ ಮೇಲೆ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ವಿವಿಧ ಸೇವೆ ನೆರವೇರಿಸಲಾಯಿತು.
ಗೌರಿ ಮಾರುಕಟ್ಟೆಯಲ್ಲಿ ದೇವರ ಪೂಜೆಯ ದೇವರನ್ನು ದೇವಸ್ಥಾನದ ಮುಂಭಾಗಕ್ಕೆ ಕರೆತರಲಾಯಿತು. ದೇವಸ್ಥಾನಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ, ದೇವರ ಮೂರ್ತಿ ದೇಗುಲದ ಒಳಗೆ ಪ್ರವೇಶಿಸುವ ಮೂಲಕ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಉತ್ಸವವು ಸಂಪನ್ನಗೊಂಡಿತು.
ದಾಖಲೆ ಭಕ್ತರು
ಲಕ್ಷದೀಪೋತ್ಸವದ ಕೊನೆದಿನ 2ರಿಂದ 3 ಲಕ್ಷಕ್ಕೂ ಅಧಿಕ ಮಂದಿ ಸೇರಿರುವ ಸಾಧ್ಯತೆ ಅಂದಾಜಿಸಲಾಗಿದೆ. ರಾತ್ರಿ ಕ್ಷೇತ್ರದ ಅನ್ನಛತ್ರದ ಸೇವೆ ಇಲ್ಲದ್ದರಿಂದ ಅನ್ನಛತ್ರದ ಹಿಂಭಾಗ ಗದ್ದೆಯಲ್ಲಿ 23 ತಂಡಗಳಿಂದ ಸುಮಾರು 2 ಲಕ್ಷಕ್ಕೂ ಮಿಕ್ಕಿ ವಿವಿಧ ಬಗೆಯ ಆಹಾರ ಖಾದ್ಯ ವಿತರಿಸಲಾಗಿದೆ. ಈ ಬಾರಿ ಉಚಿತ ಬಸ್ ವ್ಯವಸ್ಥೆಯೂ ಇದ್ದ ಪರಿಣಾಮ ಧರ್ಮಸ್ಥಳ ಡಿಪ್ಪೊದಿಂದ 130ಕ್ಕೂ ಅಧಿಕ ಬಸ್ ಸೇವೆ ಹಾಗೂ 800 ಕ್ಕೂ ಅಧಿಕ ಟ್ರಿಪ್ ಒದಗಿಸಿದೆ.