Advertisement

ರಾಜಕಾರಣಿಯಾದ್ರೂ ಕುಟುಂಬ ಜೀವಿ

06:50 AM Jul 28, 2017 | Team Udayavani |

ಬೆಂಗಳೂರು: ಅವರೊಬ್ಬ ಸ್ನೇಹಜೀವಿ, ಮಾನವೀಯ ಸಂಬಂಧಗಳಿಗೆ ಒತ್ತುಕೊಡುವ ಮನುಷ್ಯ, ರಾಜಕಾರಣಿಯಾದರೂ ಅಪ್ಪಟ ಕುಟುಂಬ ಜೀವಿ….

Advertisement

ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ಬಗ್ಗೆ ಪಕ್ಷಾತೀತವಾಗಿ ಕೇಳಿಬರುವ ಮಾತುಗಳಿವು. ರಾಜಕೀಯ ಮಾತ್ರ ವಲ್ಲ, ಎಲ್ಲಾ ರಂಗಗಳಲ್ಲೂ ಬಣ್ಣಿಸುವುದು ಹೀಗೆಯೇ.

ರಾಜಕೀಯದ ಅಜಾತಶತ್ರು ಎಂದೆನಿಸಿಕೊಂಡಿದ್ದ ಧರಂಸಿಂಗ್‌, ಅಧಿಕಾರದಲ್ಲಿದ್ದಾಗ ಯಾವತ್ತೂ ಪ್ರತಿಪಕ್ಷ ನಾಯಕರು ಅಥವಾ ಶಾಸಕರನ್ನು ಕಡೆಗಣಿಸಿದವರಲ್ಲ.

ತಮ್ಮ ಪಕ್ಷದ ಶಾಸಕರಂತೆಯೇ ಪ್ರತಿಪಕ್ಷದ ಶಾಸಕರ ನೆರವಿಗೂ ಬರುತ್ತಿದ್ದರು. ಈ ವಿಚಾರದಲ್ಲಿ ಸ್ವಪಕ್ಷೀಯರಿಂದ ಟೀಕೆಗೆ ಒಳಗಾದರು. ಆಗೆಲ್ಲಾ ಅವರು ಹೇಳುತ್ತಿದ್ದುದು “ನಾನು ಈ ರಾಜ್ಯಕ್ಕೆ ಮಂತ್ರಿ ಅಥವಾ ಮುಖ್ಯಮಂತ್ರಿಯಾಗಿದ್ದೇನೆ. ಎಲ್ಲರನ್ನೂ ಸಮನಾಗಿ ಕಾಣುವುದು ನನ್ನ ಕರ್ತವ್ಯ’ ಎಂದು.

ಮಾಧ್ಯಮದವರೆಂದರೆ ಅಕ್ಕರೆ: ಧರಂಸಿಂಗ್‌ರಿಗೆ ಮಾಧ್ಯಮದವರೆಂದರೆ ಅತ್ಯಂತ ಅಕ್ಕರೆ.ಮಾಧ್ಯಮದವರಿಂದ ಸಮಸ್ಯೆಗಳನ್ನು ತಿಳಿದುಕೊಂಡುಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶಕ್ಕಾಗಿ ಅವರು ಸಿಎಂ ಆಗಿದ್ದಾಗ ಎಲ್ಲೇ ಹೋಗಲಿ, ಮೊದಲು ಮಾಧ್ಯಮದವರೊಂದಿಗೆ ಸಂವಾದ ನಡೆಸುತ್ತಿದ್ದರು.

Advertisement

ಬಹುಪಂಥೀಯ ನಾಯಕ: ಧರಂಸಿಂಗ್‌ ಅಪ್ಪಟ ಕಾಂಗ್ರೆಸಿಗರಾದರೂ ರಾಜಕೀಯ ಜೀವನ ಆರಂಭಿಸಿದ್ದು, ಕಮ್ಯುನಿಸ್ಟ್‌ ಪಕ್ಷದಿಂದ. ಹೀಗಾಗಿ ಎಡಪಂಥೀಯ ವಿಚಾರಕ್ಕೂ ಆದ್ಯತೆ ನೀಡುತ್ತಿದ್ದರು.

ಮುಖ್ಯಮಂತ್ರಿಯಾಗಿದ್ದಾಗ ನಕ್ಸಲ್‌ ನಾಯಕ ಸಾಕೇತ್‌ ರಾಜನ್‌ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ. ಆ ಸಂದರ್ಭದಲ್ಲಿ ಧರಂ ಅವರನ್ನು ಕಾಣಲು ಆಂಧ್ರಪ್ರದೇಶದ ನಕ್ಸಲ್‌ ವಿಚಾರವಾದಿ ಗದ್ದರ್‌ ಬಂದಿದ್ದರು. ಪೊಲೀಸರು ಭೇಟಿಗೆ ಅವಕಾಶನಿರಾಕರಿಸಿದ್ದರು. ಆಗ ಪೊಲೀಸರನ್ನು ಕರೆಸಿ, “ಅವರು ಯಾವ ವಿಚಾರ ಹೇಳಲು ಬಂದಿದ್ದಾರೆ ಎಂಬುದನ್ನು ಕೇಳ್ಳೋಣ’ ಎಂದು ಪೊಲೀಸರ ಮನವೊಲಿಸಿ ಗದ್ದರ್‌ ಜತೆ ಮಾತನಾಡಿದ್ದರು. ಬಂದವ ಎಡಪಂಥೀಯನೇ, ಬಲಪಂಥೀಯನೆ ಎಂಬುದನ್ನು ನೋಡದೆ ಅವರ ವಿಚಾರಗಳನ್ನು ಗಂಭೀರವಾಗಿ ಆಲಿಸುತ್ತಿದ್ದರು ಎನ್ನುತ್ತಾರೆ ಧರಂ ಆಪ್ತರು.

ಭಾಷಣ ಸಿದ್ಧಪಡಿಸಿದವರನ್ನು ನೆನಪಿಸಿಕೊಳ್ಳುತ್ತಿದ್ದರು:
ಮುಖ್ಯಮಂತ್ರಿಯಾಗಿದ್ದಾಗ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ದಿನೇಶ್‌ ಮತ್ತು ಮಮತಾ ಭಾಷಣ ಸಿದ್ಧಪಡಿಸಿ ಕೊಡುತ್ತಿದ್ದರು. ಈ ಭಾಷಣದ ಹೊರತಾಗಿ ಬೇರೇನೋ ಹೇಳುವುದಿದ್ದರೂ ಬರೆದುಕೊಟ್ಟ ಭಾಷಣ ಓದಿದ ನಂತರವೇ ತಮಗನಿಸಿದ್ದನ್ನು ಹೇಳುತ್ತಿದ್ದರು.

ಸೋನಿಯಾ ಕೈಹಿಡಿದ ಫೋಟೋ: ಧರಂಸಿಂಗ್‌ ಸಿಎಂ ಆಗಿದ್ದಾಗ ಚಂಡೀಘಡದಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿಗಳ ಸಮಾವೇಶ ಕರೆಯಲಾಗಿತ್ತು. ಸಭೆ ನಡೆಯುತ್ತಿದ್ದ ವೇಳೆ ಅಲ್ಲಿ ಭಾರೀ ಭೂಕಂಪವಾಗಿತ್ತು. ಈ ಸಂದರ್ಭದಲ್ಲಿ ಕಟ್ಟಡ ನಡುಗುತ್ತಿದ್ದಾಗ ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು ಹೆದರಿ ಧರಂಸಿಂಗ್‌ ಕೈ ಹಿಡಿದುಕೊಂಡಿದ್ದರು. ಅದನ್ನು ಯಾರೋ ಫೋಟೋ ತೆಗೆದಿದ್ದರು. ಈ ಫೋಟೋಕ್ಕೆ ದೊಡ್ಡದಾಗಿ ಕಟ್ಟುಹಾಕಿಸಿ ತಮ್ಮ ಮನೆಯಲ್ಲಿಟ್ಟುಕೊಂಡಿದ್ದರು.

ಅಧಿಕಾರ ಹೋದಾಗ ಜತೆಗಿದ್ದವರನ್ನು ಮರೆಯಲಿಲ್ಲ:
2006ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮುರಿದು ಇಪ್ಪತ್ತು ತಿಂಗಳ ಸರ್ಕಾರ ಕೊನೆಗೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರಂ ಕಾಂಗ್ರೆಸ್‌ ನಾಯಕರ ಭೇಟಿಗಾಗಿ ದೆಹಲಿಗೆ ತೆರಳುತ್ತಿದ್ದರು. ಧರಂ ಎಲ್ಲೇ ಹೋಗಲಿ, ಅವರೊಂದಿಗೆ ಎಂ.ಎಚ್‌.ಕೃಷ್ಣಯ್ಯ ಮತ್ತು ನಾನು ಇರಲೇಬೇಕಿತ್ತು. ಆದರೆ, ದೆಹಲಿಗೆ ತೆರಳುವಾಗ ಧರಂ ಜೊತೆ ಕೃಷ್ಣಯ್ಯರಿಗೆ ಮಾತ್ರ ಟಿಕೆಟ್‌ ಕಾಯ್ದಿರಿಸಲಾಗಿತ್ತು. ಹೀಗಾಗಿ ವಿಮಾನ ನಿಲ್ದಾಣದವರೆಗೆ ಜತೆಗೆ ತೆರಳಿದ ನಾನು ಇಬ್ಬರನ್ನೂ ಒಳಗೆ ಕಳುಹಿಸಿ ಹಿಂತಿರುಗುತ್ತಿದ್ದೆ. ಅಷ್ಟರಲ್ಲಿ ಕೃಷ್ಣಯ್ಯ ಕರೆ ಮಾಡಿ, “ನೀವೂ ದೆಹಲಿಗೆ ಬರಬೇಕೆಂದು ಸಾಹೇಬರು ಹೇಳುತ್ತಿದ್ದಾರೆ’ ಎಂದು ಧರಂಸಿಂಗ್‌ ಸಿಎಂ ಆಗಿದ್ದಾಗ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಎಚ್‌.ಬಿ.ದಿನೇಶ್‌ ಸ್ಮರಿಸಿದ್ದಾರೆ.

ಸಿಟ್ಟು ಬಂದರೆ ಕಪಾಳಮೋಕ್ಷವಾಗುತ್ತಿತ್ತು: ಧರಂಸಿಂಗ್‌ ಕೋಪದ ಬಗ್ಗೆ ಎಚ್‌.ಬಿ.ದಿನೇಶ್‌ ಸ್ಮರಿಸಿಕೊಂಡಿದ್ದಾರೆ. ಸಾಕಷ್ಟು ಸಂದರ್ಭಗಳಲ್ಲಿ ಧರಂಸಿಂಗ್‌ ಸಿಟ್ಟುಮಾಡಿಕೊಂಡಿದ್ದರು. ಆಗ ಅದಕ್ಕೆ ಕಾರಣರಾದವರಿಗೆ ಕಪಾಳಮೋಕ್ಷವೂ ಆಗುತ್ತಿತ್ತು.ಅದರಲ್ಲೂ ಅವರ ಆಪ್ತ ವಲಯದವರ ಮೇಲೆ ಹೆಚ್ಚು ಕೋಪಗೊಳ್ಳುತ್ತಿದ್ದ ಧರಂ, ಕಪಾಳಕ್ಕೆ ಬಾರಿಸಿ ಸಿಟ್ಟು ತೀರಿಸಿಕೊಳ್ಳುತ್ತಿದ್ದರು. ಆದರೆ, ಅರ್ಧ ಗಂಟೆಯಲ್ಲಿ ತಾವಾಗಿಯೇ ಏಟುತಿಂದ ವ್ಯಕ್ತಿಯನ್ನು ಕರೆಸಿ
ಸಂತೈಸುತ್ತಿದ್ದರು ಎಂದು ನೆನಪಿಸಿಕೊಂಡರು.

ನಾನು ಶಾಸಕನಾಗಿದ್ದಾಗ ಒಂದು ದಿನ ಬೆಳಗ್ಗೆ ಆರು ಗಂಟೆ ಹೊತ್ತಿಗೆ ಧರಂ ಅವರ ಮನೆಗೆ ಹೋಗಿದ್ದೆ. ಬಾರಪ್ಪ… ಕುರುಬ ನಮ್ಮ ಮನೆಗೆ ಬಂದರೆ ಶುಭವಾಗಲಿದೆ ಎಂದು ಹಾಸ್ಯ ಮಾಡಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕೆಂದು ಕನಸು ಕಂಡಿದ್ದರು. ಆ ಪ್ರದೇಶ ಅಭಿವೃದ್ಧಿಯಾದರೆ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ.
-ಕೆ.ಎಸ್‌.ಈಶ್ವರಪ್ಪ,
ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next