ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ನವ ಪ್ರತಿಭೆಗಳ ಅನಾವರಣವಾಗುತ್ತಲೇ ಇದೆ. ವಿಭಿನ್ನ ಕಥೆ ಮತ್ತು ಟೈಟಲ್ ಮೂಲಕ ಗಮಸೆಳೆಯುತ್ತಿರುವ ಹೊಸ ಪ್ರತಿಭೆಗಳ ಸಾಲಿಗೆ “ಹೈಡ್ ಆ್ಯಂಡ್ ಸೀಕ್’ ಶೀರ್ಷಿಕೆಯ ಚಿತ್ರವೂ ಸೇರಿದೆ. ಹೊಸ ನಿರ್ದೇಶಕ ಪುನೀತ್ ನಾಗರಾಜು, ಅನುಭವಿ ತಂತ್ರಜ್ಞ ವಸಂತ್ ರಾವ್ ಎಂ ಕುಲಕರ್ಣಿ ಸೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ “ಹೈಡ್ ಆ್ಯಂಡ್ ಸೀಕ್’ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಹೆಚ್.ಎಂ.ರೇವಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ನಿರ್ದೇಶಕ ಪುನೀತ್ ನಾಗರಾಜು ಮಾತನಾಡಿ, “ಹೈಡ್ ಆ್ಯಂಡ್ ಸೀಕ್ ಒಂದು ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ಚಿತ್ರವಾಗಿದೆ. 25 ದಿನಗಳಲ್ಲಿ ಮಾಗಡಿ, ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತಲೂ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಚಿತ್ರದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಮಾದರಿಯನ್ನು ಪ್ರಯೋಗ ಮಾಡಿದ್ದೇವೆ. ಕನ್ನಡದಲ್ಲಿ ಈ ಮಾದರಿ ಮೊದಲು ಎನ್ನಬಹುದು. ಚಿತ್ರದಲ್ಲಿ ಒಂದು ಕಿಡ್ನಾಪ್ ನಡೆಯುತ್ತದೆ. ಅದು ಯಾಕೆ, ಹೇಗೆ, ಯಾರಿಂದ ಎಂಬುದೇ ಚಿತ್ರದ ಕಥೆಯಾಗಿದೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಹಲವು ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಸಿಗುವುದು ಕಷ್ಟ: ಯಡಿಯೂರಪ್ಪ
ಚಿತ್ರ ಸಹ ನಿರ್ಮಾಪಕ ವಸಂತ್ ರಾವ್ ಮಾತನಾಡಿ , “ನಾನು ಚಿತ್ರರಂಗದಲ್ಲಿ 20 ವರ್ಷಗಳಿಂದ ತಂತ್ರಜ್ಞನಾಗಿ, ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಪುನೀತ್ ನಾಗರಾಜು ಬಂದು ಕಥೆ ಹೇಳಿದಾಗ ಬಹಳ ಇಷ್ಟವಾಯ್ತು. ಆ ಕಾರಣಕ್ಕೆ ಬಂಡವಾಳ ಹಾಕಿದ್ದೇನೆ. ನನ್ನ ದಶಕಗಳ ದುಡಿಮೆಯನ್ನು ಚಿತ್ರದ ಮೇಲೆ ಹಾಕಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು.
ಧನ್ಯಾ ರಾಮ್‌ಕುಮಾರ್‌ಮಾತನಾಡಿ, “ಸಸ್ಪೆನ್ಸ್ , ಥ್ರಿಲ್ಲರ್ ನನಗೆ ಇಷ್ಟವಾದ ಜಾನರ್. ಮೊದಲು ಕಥೆ ಕೇಳಿದಾಗ ಬಹಳ ಇಷ್ಟವಾಯ್ತು. ನನ್ನ ಎರಡನೇ ಚಿತ್ರ ಈ ಜಾನರ್ ಆಗಿರಬೇಕು ಎಂದು ಆಯ್ಕೆ ಮಾಡಿಕೊಂಡೆ. ಚಿತ್ರೀಕರಣಕ್ಕೂ ಮುಂಚೆ ಚಿತ್ರತಂಡದವರು ವರ್ಕ್ ಶಾಪ್ ಮಾಡುವ ಮೂಲಕ ಒಂದು ಬಾಂಡಿಂಗ್ ಬೆಳೆಸಿಕೊಂಡೆವು. ಚಿತ್ರದಲ್ಲಿ ನನ್ನದು ಅಪ್ಪನ ಮುದ್ದಿನ ಮಗಳ ಪಾತ್ರ. ದೊಡ್ಡ ಉದ್ಯಮಿಯ ಮಗಳಾಗಿ ಕಾಣಿಸಿಕೊಂಡಿದ್ದೇನೆ. ಕೊನೆಯವರೆಗೂ ಕುತೂಹಲ ಮೂಡಿಸುವ ಚಿತ್ರ ಇದಾಗಿದೆ. ಇದೇ ಏಪ್ರಿಲ್‌ನಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು.
ಚಿತ್ರದ ಕಲಾವಿದರು ತಮ್ಮ ಪಾತ್ರಗಳು ಹಾಗೂ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಚಿತ್ರ ಕ್ಕೆ ರೆಜೋ ಪಿ ಜಾನ್ ಛಾಯಾಗ್ರಹಣ, ಸ್ಯಾಂಡಿ ಅಡ್ಡಂಕಿ ಸಂಗೀತ, ಮಧು ತುಂಬೇಕೆರೆ ಸಂಕಲನ ಚಿತ್ರಕ್ಕಿದೆ. ಅನೂಪ್ ರೇವಣ್ಣ, ಧನ್ಯಾ ರಾಮ್ ಕುಮಾರ್, ಮೈತ್ರೀ ಜಗ್ಗಿ, ರಕ್ಷಾ ಉಮೇಶ್, ಅರವಿಂದ್, ಸೂರಜ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.