ಸುನಿ ನಿರ್ದೇಶನದ “ಬಜಾರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ನವ ಪ್ರತಿಭೆ ಧನ್ವೀರ್, ಆ ಚಿತ್ರದಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದರು. ಪಕ್ಕಾ ಆ್ಯಕ್ಷನ್ ಸಿನಿಮಾ ಎನಿಸಿಕೊಂಡಿದ್ದ “ಬಜಾರ್’ ಚಿತ್ರ ಅವರ ನಿರೀಕ್ಷೆ ಮಟ್ಟ ತಲುಪಲಿಲ್ಲ. ಹಾಗಂತ, ಧನ್ವೀರ್ ಬೇಸರಿಸಿಕೊಳ್ಳಲಿಲ್ಲ. ಮತ್ತೂಂದು ಹೊಸತನದ ಕಥೆಗಾಗಿ ಎದುರು ನೋಡುತ್ತಿದ್ದರು.
ಈಗ ಅವರೊಂದು ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ಕಥೆಯಲ್ಲಿ ಮನರಂಜನೆ ಹೆಚ್ಚಿದೆ. ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಚಿತ್ರ ಕೊಡುವ ಆಸೆಯಿಂದ ಧನ್ವೀರ್, ಈವರೆಗೆ ಬಂದ ಕಥೆಗಳನ್ನು ಪಕ್ಕಕ್ಕೆ ಸರಿಸಿ, ಈಗ ಪಕ್ಕಾ ಮನರಂಜನೆಯ ಕಥೆ ಹಿಡಿದು ಬಂದಿದ್ದಾರೆ. ಅಂದಹಾಗೆ, ಧನ್ವೀರ್ ಹೊಸ ಚಿತ್ರಕ್ಕೆ “ಬಹದ್ದೂರ್’ ಚೇತನ್‌ಕುಮಾರ್ ಅವರು ಕಥೆ ಬರೆದಿದ್ದಾರೆ.
ಇದರೊಂದಿಗೆ ಚಿತ್ರಕಥೆ ಮತ್ತು ಸಾಹಿತ್ಯವೂ ಇರಲಿದೆ. ಧನ್ವೀರ್ ಅವರಿಗಾಗಿಯೇ ಬರೆದ ಕಥೆ ಅದಾಗಿರುವುದರಿಂದ ಸ್ವತಃ ಧನ್ವೀರ್, ಆ ಕಥೆ ಇಷ್ಟಪಟ್ಟು, ಈಗ ಚಿತ್ರ ಮಾಡಲು ಸಜ್ಜಾಗಿದ್ದಾರೆ. ಇನ್ನು, ಈ ಚಿತ್ರವನ್ನು ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರ ನಿರ್ಮಿಸಿರುವ ಸುಪ್ರೀತ್ ನಿರ್ಮಾಣ ಮಾಡುತ್ತಿರುವುದು ವಿಶೇಷ.
“ಬಹದ್ದೂರ್ ‘ ಚೇತನ್ ಅವರು ಈಗಾಗಲೇ ಒನ್‌ಲೈನ್ ಸ್ಟೋರಿ ಹೇಳಿದ್ದು, ಇಷ್ಟರಲ್ಲೇ ಸ್ಕ್ರಿಪ್ಟ್ ಪಕ್ಕಾ ಮಾಡಿಕೊಡಲಿದ್ದಾರೆ. ಸದ್ಯಕ್ಕೆ ಹೀರೋ, ಕಥೆ, ನಿರ್ಮಾಪಕರು ಪಕ್ಕಾ ಆಗಿದ್ದು, ನಿರ್ದೇಶನ ಯಾರು ಮಾಡಲಿದ್ದಾರೆ ಎಂಬುದಷ್ಟೇ ಬಾಕಿ ಉಳಿದಿದೆ. ನಾಯಕಿ ಸೇರಿದಂತೆ ಯಾರೆಲ್ಲಾ ತಂತ್ರಜ್ಞರು ಇರಲಿದ್ದಾರೆ ಎಂಬುದಕ್ಕೆ ಇಷ್ಟರಲ್ಲೇ ಮಾಹಿತಿ ಸಿಗಲಿದೆ.
ತಮ್ಮ ಎರಡನೇ ಚಿತ್ರದ ಕುರಿತು ಹೇಳಿಕೊಳ್ಳುವ ಧನ್ವೀರ್, “ನನ್ನ ಮೊದಲ ಚಿತ್ರದಲ್ಲಿ ನಾನು ಮಾಸ್ ಆಗಿ ಕಾಣಿಸಿಕೊಂಡಿದ್ದೆ. ಈ ಚಿತ್ರದಲ್ಲೂ ಮಾಸ್ ಎಲಿಮೆಂಟ್ಸ್ ಇದೆಯಾದರೂ, ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ. ಕುಟುಂಬ ಸಮೇತ ಬಂದು ನೋಡುವಂತಹ ಚಿತ್ರ ಇದಾಗಲಿದೆ.
ಇನ್ನು, ಈ ಚಿತ್ರದ ಪಾತ್ರಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳಬೇಕಿದೆ. ಕನ್ನಡ ಮಾತ್ರವಲ್ಲ, ತೆಲುಗು ಭಾಷೆಯಲ್ಲೂ ನಟಿಸುವ ಆಸೆ ಇದೆ. ಲೇಟ್ ಆದರೂ ಪರವಾಗಿಲ್ಲ, ಒಳ್ಳೆಯ ಚಿತ್ರ ಕೊಡಬೇಕೆಂಬುದು ನನ್ನ ಗುರಿ’ ಎನ್ನುತ್ತಾರೆ ಧನ್ವೀರ್. ಎಲ್ಲವೂ ಅಂದುಕೊಂಡಂತೆ ನಡೆದರೆ ಧನ್ವೀರ್ ಹೊಸ ಚಿತ್ರಕ್ಕೆ ಆಗಸ್ಟ್‌ನಲ್ಲಿ ಚಾಲನೆ ಸಿಗಲಿದೆ.