Advertisement

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಧನುಪೂಜೆ 

02:59 PM Dec 17, 2017 | |

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಇನ್ನೊಂದು ಜಾತ್ರೆಯಂತೆ ಧನುಪೂಜೆ. ಬೆಳಗ್ಗಿನ ಚಳಿಯನ್ನು ಲೆಕ್ಕಿಸದೇ ಸಾವಿರಾರು ಮಂದಿ ಇಲ್ಲಿ ನೆರೆಯುತ್ತಾರೆ.

Advertisement

ಪೂರ್ವಶಿಷ್ಟ ಸಂಪ್ರದಾಯದಂತೆ ಈ ಬಾರಿ ಡಿ. 16ರಿಂದ ಜ.14ರ ವರೆಗೆ ಧನುಪೂಜೆ ನಡೆಯುತ್ತದೆ. ದಕ್ಷಿಣಾಯನದ ಕತ್ತಲನ್ನು ದೂರ ಮಾಡಿ, ಉತ್ತರಾಯಣದ ಹೊಂಗಿರಣದೊಂದಿಗೆ ಸಂಕ್ರಮಿಸುವ ಕಾಲವಿದು. ತುಳು ಜನಪದರು ಧನುರ್ಮಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಈ ಕಾಲದ ಬ್ರಾಹ್ಮೀ ಮುಹೂರ್ತದಲ್ಲಿ ದೇವರಿಗೆ ಪೂಜೆ ನೆರವೇರುತ್ತದೆ. ಪ್ರಾತಃಕಾಲದಲ್ಲಿ ದೇವರ ಸೇವೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗುವುದು ಎಂಬ ನಂಬಿಕೆಯಿದೆ.

ಈ ಪುಣ್ಯ ಕಾಲದಲ್ಲಿ ಶಿವನಿಗೆ ಅಕ್ಕಿ, ಬೇಳೆ, ಅರಶಿನ ಪುಡಿ, ಕರಿಮೆಣಸಿನಿಂದ ತಯಾರಿಸಿದ ಹುಗ್ಗಿಯನ್ನು ನೈವೇದ್ಯವಾಗಿ
ಅರ್ಪಿಸಲಾಗುತ್ತದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರಾತಃ ಕಾಲದಲ್ಲಿ ವಿಶೇಷ ಪೂಜೆ ನಡೆದು, ಬಳಿಕ ಉತ್ಸವ ಬಲಿ ನಡೆಯುತ್ತದೆ. ಅನಂತರ ಭಕ್ತರಿಗೆ ಪಾನಕ, ಪ್ರಸಾದ ವಿತರಿಸಲಾಗುತ್ತದೆ. ಈ ಸಂದರ್ಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆಲವು ಭಕ್ತರು ಹೂವಿನ ಅಲಂಕಾರ, ಭಕ್ತರಿಗೆ ಪ್ರಸಾದ ವಿತರಣೆ, ದೇವರ ಬಲಿ ಉತ್ಸವ ಬ್ಯಾಂಡ್‌ ವಾಲಗದ ಸೇವೆ ಸಲ್ಲಿಸುತ್ತಾರೆ.

ಪುತ್ತೂರಿನ ಹೆಚ್ಚಿನ ಎಲ್ಲ ದೇವಾಲಯಗಳಲ್ಲೂ ಧನುಪೂಜೆ ನಡೆಯುತ್ತದೆ. ಆದರೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಧನುಪೂಜೆ ಹೆಚ್ಚಿನ ಮಹತ್ವವಿದೆ. ಮೊದಲನೆಯದಾಗಿ ಇದು ಪುತ್ತೂರು ಸೀಮೆಯ ದೇವಸ್ಥಾನ ಎನ್ನುವುದು. ಮಾತ್ರವಲ್ಲ ಮಹಾಲಿಂಗೇಶ್ವರನಿಗೆ ಕೈಮುಗಿಯದೇ ಯಾವ ಕೆಲಸಕ್ಕೂ ಮುಂದಾಗ ಬಾರದು ಎಂಬ ನಂಬಿಕೆ ಇರುವುದು.

ಶಬರಿಮಲೆ ಯಾತ್ರೆಯ 48 ದಿನದ ವ್ರತಾಚರಣೆ ಕೈಗೊಳ್ಳುವ ಭಕ್ತರು, ಧನುರ್ಮಾಸ ಸಂದರ್ಭ ಹರಿಹರನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆಯಿದೆ. ಧನುಪೂಜೆಯ ಪೂರ್ವ ಬ್ರಾಹ್ಮೀ ಮುಹೂರ್ತ ದಲ್ಲಿ ದೇವಾಲಯದ ವಠಾರದ ಅಶ್ವತ್ಥ ಮರಕ್ಕೆ ಭಕ್ತರು ಪ್ರದಕ್ಷಿಣೆ ಹಾಕಿ, ಕ್ಲೇಶ ದೂರ ಮಾಡುವಂತೆ ಬೇಡಿಕೊಳ್ಳುತ್ತಾರೆ.

Advertisement

ಶಿಸ್ತುಬದ್ಧ ವ್ಯವಸ್ಥೆ
ಶಿಸ್ತುಬದ್ಧ ವ್ಯವಸ್ಥೆಯನ್ನು ದೇವಸ್ಥಾನದಲ್ಲಿ ಜಾರಿಗೆ ತರಲಾಗುತ್ತಿದೆ. ಧನುಪೂಜೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುವುದರಿಂದ, ಪೂಜೆ, ಆರತಿ ನೋಡಲು ಅನುಕೂಲವಾಗುವಂತೆ ಸರದಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ.
–  ಎನ್‌. ಸುಧಾಕರ ಶೆಟ್ಟಿ,
   ಆಡಳಿತ ಮೊಕ್ತೇಸರರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

ತಾಲೂಕಿನ ವಿವಿಧೆಡೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠ, ಕೆಮ್ಮಿಂಜೆ ಶ್ರೀ ಮಹಾವಿಷ್ಣು- ಷಣ್ಮುಖ ದೇವಸ್ಥಾನ, ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕುಂಜೂರುಪಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುಳಿತ್ತಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಹನುಮಗಿರಿ ಶ್ರೀ ಆಂಜನೇಯ ಕ್ಷೇತ್ರ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ತೊಡಿಕ್ಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಧನುಪೂಜೆ ನಡೆಯುತ್ತದೆ.

ಸುಳ್ಯ: ಧನು ಪೂಜೆ 
ಸುಳ್ಯ: ಧನುರ್ಮಾಸ ಪ್ರಯುಕ್ತ ತಿಂಗಳ ಕಾಲ ಪ್ರಾತಕಾಲ ನಡೆಯುವ ವಿಶೇಷ ಧನುಪೂಜೆ ಸುಳ್ಯ ತಾಲೂಕಿನ ಪ್ರಮುಖ ಶಿವದೇವಸ್ಥಾನಗಳಲ್ಲಿ ಶನಿವಾರ ಆರಂಭಗೊಂಡಿತು. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಹರಿಹರಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನ, ಪಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮೊದಲಾದೆಡೆ ಪೂಜೆ ಆರಂಭಗೊಂಡಿದೆ. ಭಕ್ತರಿಗೆ ಮುಂಜಾನೆ 4 ಗಂಟೆಗೆ ಸುಳ್ಯದಿಂದ ಖಾಸಗಿ ಬಸ್‌ ವ್ಯವಸ್ಥೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next