ಮಂಗಳಗಂಗೋತ್ರಿ: ವಿಜಯಪುರದ ದಾನಮ್ಮ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳದಿದ್ದಲ್ಲಿ ಎಲ್ಲ ಸಮಾನ ಮನಸ್ಕರು ಸೇರಿಕೊಂಡು ಕರ್ನಾಟಕ ಬಂದ್ ನಡೆಸುವ ಅನಿವಾರ್ಯ ಎದುರಾಗಬಹುದು. ಈ ನಡುವೆ ಸಂಭವಿಸುವ ದುರಂತಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರವೇ ನೇರ ಹೊಣೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿ ಸಂತೋಷ್ ಹೇಳಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ /ಪಂಗಡದ ಬೋಧಕ ಮತ್ತು ಬೋಧಕೇತರ ಸಿಬಂದಿ, ಸಂಶೋಧನ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿ.ವಿ ಮುಖದ್ವಾರದಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೂಗಳ ಬೇರೆ ಜಾತಿಯವರಾಗುತ್ತಿದ್ದಲ್ಲಿ ಹಿಂದು ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಮಾನವೀಯತೆ ದೃಷ್ಟಿಯಿರದೆ ಸಾಮಾಜಿಕ ಕಳಕಳಿಯೇ ಇಲ್ಲದ ಹಿಂದು ಮುಖಂಡರು ದಲಿತರ ಬಗ್ಗೆ ಕೇವಲ ವೇದಿಕೆಗಳಲ್ಲಿ ಮಾತನಾಡಿ ಮರುಳು ಮಾಡುತ್ತಿದ್ದೀರಿ. ದಲಿತರನ್ನು ಕೇವಲ ಮತಕ್ಕಾಗಿ ಬಳಸುವ ಪಕ್ಷಗಳು ಅಮಾಯಕ ಯುವತಿ ಹತ್ಯೆ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವುದರ ಹಿಂದಿನ ಸಂಚು ಏನೆಂಬುದು ತಿಳಿದಿಲ್ಲ. ಘಟನೆ ಖಂಡಿಸಿ ಇಂದು ವಿಜಯಪುರ ಬಂದ್ ಆಗಿದ್ದರೆ, ಮುಂದೆಯೂ ತನಿಖೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಇಡೀ ಕರ್ನಾಟಕ ಬಂದ್ ನಡೆಸುವುದು ಅನಿವಾರ್ಯವಾದೀತು ಎಂದರು. ಕೋಮು ಸೌಹಾರ್ದ ವೇದಿಕೆ ಅಧ್ಯಕ್ಷ ಇಸ್ಮತ್ ಪಜೀರು, ಸಂಶೋಧನ ವಿದ್ಯಾರ್ಥಿ ಹರೀಶ್‌ಎಂ., ಮಂಗಳೂರು ವಿ.ವಿ ಪ್ರಾಧ್ಯಾಪಕರಾದ ಪ್ರೊ| ವಿಶ್ವನಾಥ್, ಡಾ| ಗೋವಿಂದರಾಜು ಮೊದಲಾದವರು ಉಪಸ್ಥಿತರಿದ್ದರು.