ನವದೆಹಲಿ: ಇದೇ ವರ್ಷದ ಜುಲೈನಲ್ಲಿ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಕಾರಣಕ್ಕೆ ಮೃತಪಟ್ಟಿದ್ದ ಧನಬಾದ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ಉದ್ದೇಶಪೂರ್ವಕವಾಗಿಯೇ ಕೊಲ್ಲಲಾಗಿದೆ ಎಂದು ಸಿಬಿಐ, ಜಾರ್ಖಂಡ್ ಹೈಕೋರ್ಟ್‌ಗೆ ತಿಳಿಸಿದೆ.
ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ವಿಶ್ಲೇಷಣೆ ಹಾಗೂ ಪ್ರಕರಣದ ಪ್ರಾಥಮಿಕ ಸಾಕ್ಷ್ಯಾಧಾರಗಳ ತನಿಖೆಯಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಆಟೋ ಚಾಲಕನು ನ್ಯಾಯಾಧೀಶರನ್ನು ಕೊಲ್ಲುವ ಉದ್ದೇಶದಿಂದಲೇ ಅವರಿಗೆ ತನ್ನ ಆಟೋವನ್ನು ಡಿಕ್ಕಿ ಹೊಡೆಸಿದ್ದ ಎಂದು ಸಿಬಿಐ ಹೇಳಿದೆ.
ತನಿಖೆ ವೇಳೆ ಸಿಬಿಐ ಸಂಗ್ರಹಿಸಿದ್ದ ಸಿಸಿಟಿವಿ ದೃಶ್ಯಾವಳಿಗಳು, ಘಟನೆಯ ಮರುಸೃಷ್ಟಿಯ ವಿಡಿಯೋಗಳನ್ನು ವಿಶೇಷವಾಗಿ ಸಿಬಿಐ ವತಿಯಿಂದ ನಿಯೋಜಿಸಲಾಗಿದ್ದ ನಾಲ್ವರು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಅವಲೋಕನ ನಡೆಸಿದ್ದಾರೆ. ಅವರು ನೀಡಿದ ವರದಿ ಹಾಗೂ ತಾನು ಪ್ರಾಥಮಿಕ ತನಿಖೆಯಿಂದ ಕಂಡುಕೊಂಡ ಅಂಶಗಳಿಂದ ನ್ಯಾಯಾಧೀಶರದ್ದು ಕೊಲೆ ಎಂದು ಅನುಮೋದಿಸಲಾಗಿದೆ ಎಂದು ಸಿಬಿಐ ಹೇಳಿದೆ.
ಇದನ್ನೂ ಓದಿ:ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು: ಕೇಂದ್ರದ ಅನುಮತಿ ಪಡೆಯಲು ಸಿಎಂ ಸೂಚನೆ
ಈ ನಡುವೆ, ಈ ಪ್ರಕರಣದ ತನಿಖೆಯು ಮುಕ್ತಾಯದ ಹಂತಕ್ಕೆ ತಲುಪಿದೆ. ಬಂಧಿತರಿಬ್ಬರನ್ನು ಗುಜರಾತ್‌ನಲ್ಲಿ ಬ್ರೈನ್ ಮ್ಯಾಪಿಂಗ್ ಹಾಗೂ ನಾರ್ಕೋ ಅನಾಲಿಸಿಸ್ ಟೆಸ್ಟ್‌ಗಳಿಗೆ ಒಳಪಡಿಸಲಾಗಿದೆ ಎಂದು ಸಿಬಿಐ ಹೇಳಿದೆ.