ಅಲ್ಲೊಂದು ನಿಷ್ಕಲ್ಮಶ ಪ್ರೀತಿ ಇದೆ.. ಆದರೆ, ಆ ಪ್ರೀತಿ ಯ ಸುತ್ತ ಜಾತಿಯ ಬೇಲಿ ಸುತ್ತಿಕೊಂಡಿದೆ. ಹೆಚ್ಚು ಸದ್ದು ಮಾಡದೆಯೇ ಪ್ರೀತಿಯನ್ನು ಚುಚ್ಚಿ ಸಾಯಿಸುವಂತಹ ವಿಷ ಮುಳ್ಳು ಆ ಬೇಲಿ ತುಂಬಾ ತುಂಬಿವೆ.. ಹಂತ ಹಂತವಾಗಿ “ಚಿಗುರೊಡೆಯುವ’ ಪ್ರೀತಿಯನ್ನು ಆ ಮುಳ್ಳು ಸಾಯಿಸುತ್ತಾ ಅಥವಾ ಮುಳ್ಳನ್ನು ಬಗ್ಗಿಸಿ ಪ್ರೀತಿ ಗೆಲ್ಲುತ್ತಾ.. ಈ ಕುತೂಹಲವಿದ್ದರೆ ನೀವು “ಮಾನ್ಸೂನ್ ರಾಗ’ ಸಿನಿಮಾ ನೋಡಬಹುದು.
ಅತಿಯಾದ ಬಿಲ್ಡಪ್, ಸುಖಾಸುಮ್ಮನೆ ಡೈಲಾಗ್, ಹೀರೋಯಿಸಂ ಇಲ್ಲದೇ ನೀಟಾಗಿ ಸಾಗುವ ಒಂದು ಕ್ಲಾಸ್ ಸಿನಿಮಾವನ್ನು ನೋಡಬೇಕೆಂದು ಬಯಸುವವರಿಗೆ “ಮಾನ್ಸೂನ್ ರಾಗ’ ಒಂದು ಒಳ್ಳೆಯ ಆಯ್ಕೆ. ಆ ಮಟ್ಟಿಗೆ ನಿರ್ದೇಶಕರು ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ. ನಾಲ್ಕು ಕಥೆಗಳೊಂದಿಗೆ ಸಾಗುವ ಸಿನಿಮಾದಲ್ಲಿ ವಿವಿಧ ಹಂತಗಳಲ್ಲಿನ ಪ್ರೀತಿಯನ್ನು ಹೇಳುತ್ತಾ ಹೋಗಲಾಗಿದೆ. ಜಾತಿ, ಧರ್ಮ, ಆಸ್ತಿ, ಅಂತಸ್ತು, ವಯಸ್ಸು, ಸಮಾಜದ ದೃಷ್ಟಿ… ಇಂತಹ ಅಂಶಗಳೊಂದಿಗೆ ಸಾಗುವ ನಾಲ್ಕು ಕಥೆಗಳು ಅಂತಿಮವಾಗಿ ಒಂದು ಮೂಲರೂಪವಾಗುತ್ತದೆ. ಅದೇ ಸಿನಿಮಾದ ಹೈಲೈಟ್. ಆ ಕುತೂಹಲವನ್ನು ನಿರ್ದೇಶಕರು ಕೊನೆವರೆಗೂ ಉಳಿಸಿಕೊಂಡು, ಕುತೂಹಲ ಕಾಯ್ದಿರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಜನೌಷಧಿ ಕೇಂದ್ರದಲ್ಲಿ ಲಭ್ಯವಾಗಲಿದೆ “ಸಿಟಾಗ್ಲಿಪ್ಟಿನ್’
ಇಲ್ಲಿ ಬರುವ ಪ್ರತಿ ಕಥೆಗಳನ್ನು ವಿಭಿನ್ನ ಪರಿಸರದಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ, ಎಲ್ಲದಕ್ಕೂ ಇರುವ ಒಂದು ಸಾಮಾನ್ಯ ಅಂಶವೆಂದರೆ ಮಳೆ. ಹೆಸರಿಗೆ ತಕ್ಕಂತೆ ಇಡೀ ಸಿನಿಮಾ ಮಳೆಯ ಮಧ್ಯೆಯೇ ನಡೆಯುತ್ತದೆ. ಮೊದಲೇ ಹೇಳಿದಂತೆ ನಿರ್ದೇಶಕರು ಇಡೀ ಸಿನಿಮಾವನ್ನು ಕ್ಲಾಸ್ ಆಗಿ ಕಟ್ಟಿಕೊಟ್ಟಿದ್ದಾರೆ. ಸಿದ್ಧಸೂತ್ರಗಳಿಂದ ಮುಕ್ತವಾಗಿರುವ ಸಿನಿಮಾವಾದ್ದರಿಂದ ಹೊಸ ಶೈಲಿಯ ಸಿನಿಮಾ ಬಯಸುವವರಿಗೆ “ಮಾನ್ಸೂನ್ ರಾಗ’ ಇಷ್ಟವಾಗಬಹುದು. ಇಡೀ ಸಿನಿಮಾವನ್ನು ತುಂಬಾ ಸಾವಧಾನವಾಗಿ ಕಟ್ಟಿಕೊಟ್ಟಿದ್ದರಿಂದ ಇಲ್ಲಿ ವೇಗದ ನಿರೂಪಣೆ ಬಯಸುವಂತಿಲ್ಲ.
ಚಿತ್ರದಲ್ಲಿ ರಚಿತಾ-ಧನಂಜಯ್, ಅಚ್ಯುತ್- ಸುಹಾಸಿನಿ ಜೊತೆಗೆ ಇನ್ನೂ ಎರಡು ಜೋಡಿಗಳಿವೆ. ಒಬ್ಬೊಬ್ಬರದ್ದು ಒಂದೊಂದು ಕಥೆ. ಅದರಲ್ಲೂ ಅಚ್ಯುತ್-ಸುಹಾಸಿನಿ ದೃಶ್ಯಗಳು ಬೇಗನೇ ಆಪ್ತವಾಗುತ್ತವೆ. ಇನ್ನು, ಧನಂಜಯ್ ಹೊಸ ಇಮೇಜ್, ಹೊಸ ಪಾತ್ರದಲ್ಲಿ ಇಷ್ಟವಾಗುತ್ತಾರೆ. ನಾಯಕಿ ರಚಿತಾ ರಾಮ್ ಕೂಡಾ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ.
ಉಳಿದಂತೆ ಶೋಭರಾಜ್, ಯಶಾ ಶಿವಕುಮಾರ್, ಶಿವಾಂಕ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಗುರು ಕಶ್ಯಪ್ ಸಂಭಾಷಣೆ ಕೂಡಾ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಅನೂಪ್ ಸೀಳೀನ್ ಸಂಗೀತ, ಹಿನ್ನೆಲೆ ಸಂಗೀತ ಹಾಗೂ ಚಿತ್ರದ ಸಾಹಿತ್ಯ ಕಥೆಯ ಆಶಯಕ್ಕೆ ತಕ್ಕುದಾಗಿದೆ
ರವಿಪ್ರಕಾಶ್ ರೈ