ಭೂಗತ ಲೋಕದ ಜಯರಾಜ್ ಬಗ್ಗೆ ಅನೇಕರಿಗೆ ಗೊತ್ತಿದೆ. ಜಯರಾಜ್ ಕುರಿತು ಅನೇಕ ಅನೇಕ ವರದಿಗಳು, ಲೇಖನಗಳು ಆಗಾಗ್ಗೆ ಪ್ರಕಟವಾಗುತ್ತಲೇ ಇರುತ್ತವೆ. ಇನ್ನು ಕನ್ನಡ ಚಿತ್ರರಂಗದಲ್ಲೂ ಈ ಜಯರಾಜ್ ಹೆಸರು, ಅವನ ಭೂಗತ ಲೋಕವನ್ನು ಹಿನ್ನೆಲೆಯಾಗಿಟ್ಟುಕೊಂಡು ಹಲವು ಸಿನಿಮಾಗಳು ತೆರೆಗೆ ಬಂದಿವೆ. ಈಗ ಇದೇ ಜಯರಾಜ್‌ನ ಜೀವನವನ್ನು ಇಟ್ಟುಕೊಂಡು ಬಯೋಪಿಕ್ ನಿರ್ಮಾಣವಾಗುತ್ತಿದೆ.
ಅಂದಹಾಗೆ, ಈ ಚಿತ್ರದಲ್ಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ದುನಿಯಾ ಸೂರಿ ನಿರ್ದೇಶನದ “ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಧನಂಜಯ್ ನಾಯಕನಾಗಿ ನಟಿಸಿದ್ದು, ಚಿತ್ರ ಇದೇ ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಇದರ ಬಿಡುಗಡೆಗೂ ಮುಂಚೆಯೇ ಧನಂಜಯ್ ಮತ್ತೊಂದು ಅಭಿನಯಿ ಸುತ್ತಿರುವ ಈ ಹೊಸ ಚಿತ್ರದ ಘೋಷಣೆಯಾಗಿದೆ.
ಇದೇ ಫೆಬ್ರವರಿ 17 ರಂದು ಅಧಿಕೃತವಾಗಿ ಈ ಚಿತ್ರ ಸೆಟ್ಟೇರಿದ್ದು, ಈ ಹಿಂದೆ “ಆ ದಿನಗಳು’ ಮತ್ತು “ಎದೆಗಾರಿಕೆ’ ಚಿತ್ರಕ್ಕೆ ಕಥೆ ಬರೆದಿದ್ದ ಅಗ್ನಿ ಶ್ರೀಧರ್ ಈ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ. ಈ ಹಿಂದೆ “ಆ ದಿನಗಳು’ ಸಿನಿಮಾದಲ್ಲಿ ಡಾನ್ ಜಯರಾಜ್ ಅವರ ಕಥೆ ತೋರಿಸಲಾಗಿತ್ತಾದರೂ, ಸಂಪೂರ್ಣವಾಗಿ ಜಯರಾಜ್ ಬಗ್ಗೆ ಕಥೆಯಲ್ಲಿ ಹೇಳಿರಲಿಲ್ಲ. ಆದರೆ ಈಗ, ಜಯರಾಜ್ ಜೀವನವನ್ನೇ ಕಥೆಯನ್ನಾಗಿಸಿ ಸಿನಿಮಾ ಮಾಡಲು ಚಿತ್ರತಂಡ ಮುಂದಾಗಿದ್ದು, ಅಶುಬೇದ್ರ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಹೊಸ ಪ್ರತಿಭೆ ಶೂನ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಅಧಿಕೃತವಾಗಿ ಶೀರ್ಷಿಕೆ ಇನ್ನೂ ಪಕ್ಕಾ ಆಗಿಲ್ಲ. ಸದ್ಯ ಜಯರಾಜ್ ಎಂದು ಹೆಸರಿಟ್ಟು ಸಿನಿಮಾ ಆರಂಭಿಸಲಾಗಿದ್ದು, ಏಕಕಾಲಕ್ಕೆ ಪಂಚಭಾಷೆಯಲ್ಲಿ ಈ ಸಿನಿಮಾ ತೆರೆಗೆ ತರಲು ನಿರ್ಧರಿಸಲಾಗಿದೆ. ಚಿತ್ರತಂಡದ ಪ್ಲಾನ್ ಪ್ರಕಾರ ಈ ವರ್ಷದ ಕೊನೆಗೆ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.