ಮಳವಳ್ಳಿ: ಪಟ್ಟಣದಲ್ಲಿರುವ ಧಾನ್ ಪೌಂಢೇಷನ್ ಎನ್‌ಜಿಒ ಸಂಸ್ಥೆ ಮಹಿಳಾ ಒಕ್ಕೂಟ ಸಂಘಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಗಗನಚುಕ್ಕಿ ಮಹಿಳಾ ಕಳಂಜಿಯಂ ಒಕ್ಕೂಟದ ಸದಸ್ಯರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ತಮಿಳುನಾಡು ಮೂಲದ ಧಾನ್ ಪೌಂಢೇಷನ್ ಎನ್‌ಜಿಒ ಸಂಸ್ಥೆ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತೇವೆಂದು ಹೇಳಿ ತಾಲೂಕಿನಲ್ಲಿ 7 ಸಾವಿರಕ್ಕೂ ಅಧಿಕ ಮಹಿಳೆಯರನ್ನು ಸಂಘಟಿಸಿ 400 ಸ್ವಸಹಾಯ ಸಂಘಗಳ ಒಕ್ಕೂಟ ರಚಿಸಿದೆ. ಕಷ್ಟಪಟ್ಟು ಬೆಳೆಸಿರುವ ಸಂಘಗಳ ಲಾಭಾಂಶದಲ್ಲಿ ಪಾಲು ಕೇಳುತ್ತಿದೆ ಎಂದು ಆರೋಪಿಸಿ ಧಾನ್ ಅಧಿಕಾರಿಗಳು ಮತ್ತು ಒಕ್ಕೂಟದ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆಯಿತು.
ಇಂಗ್ಲಿಷ್‌ನಲ್ಲಿ ದಾಖಲೆ: ಗಗನಚುಕ್ಕಿ ಕಳಂಜಿಯಂ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸೌಭಾಗ್ಯಮ್ಮ ಮಾತನಾಡಿ, ಧಾನ್ ಸಂಸ್ಥೆ ಬಡ ಮಹಿಳೆಯರನ್ನು ಸಂಘಟಿಸಿ ಸಂಘಗಳನ್ನು ಕಟ್ಟುವ ದಿನಗಳಲ್ಲಿ ನಾವು ನಿಮ್ಮ ಮಹಿಳಾ ಒಕ್ಕೂಟದಿಂದ ಯಾವುದೇ ಲಾಭಾಂಶ ಪಡೆಯುವುದಿಲ್ಲ. ಮಹಿಳೆಯರು ಸ್ವಾವಲಂಭಿಗಳಾಗಿ ಬದುಕಲು ಆರ್ಥಿಕವಾಗಿ ಬೆಳೆಯುವ ಮಾರ್ಗದರ್ಶನ ನೀಡುತ್ತೇವೆಂದು ಹೇಳಿತ್ತು. ಆದರೆ, ಪ್ರಸ್ತುತ ಗಗನಚುಕ್ಕಿ ಮತ್ತು ವಿಶ್ವೇಶ್ವರಯ್ಯ ಮಹಿಳಾ ಒಕ್ಕೂಟ ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಸುತ್ತಿದೆ. ಈಗ ಧಾನ್ ಸಂಸ್ಥೆ ನಮ್ಮ ಒಕ್ಕೂಟದ ನಿರ್ದೇಶಕಿಯರ ಅರಿವಿಗೆ ಬಾರದಂತೆ ತನ್ನ ಹಿಡಿತಕ್ಕೆ ಕಾನೂನಾತ್ಮಕವಾಗಿ ತೆಗೆದುಕೊಂಡಿದೆ. ಇಂಗ್ಲಿಷ್‌ನಲ್ಲಿ ದಾಖಲೆ ಸಿದ್ದಪಡಿಸಿ ಭಾಷೆ ತಿಳಿಯದೇ ಇರುವ ಒಕ್ಕೂಟದ ನಿರ್ದೇಶಕರಿಂದ ಪತ್ರದಲ್ಲಿನ ಮಾಹಿತಿ ವಿವರಿಸದೆ ಸಹಿ ಪಡೆದುಕೊಂಡಿದ್ದಾರೆ ಎಂದು ಒಕ್ಕೂಟದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಸಂಸ್ಥೆಯಿಂದ ಅನ್ಯಾಯ: ಈ ಅನ್ಯಾಯದ ಬಗ್ಗೆ ನಮಗೆ ಧಾನ್ ಸಂಸ್ಥೆ ಒಕ್ಕೂಟದ ನಿರ್ವಹಣೆಗೆ ನಿಯೋಜಿಸಿರುವ ಸಂಯೋಜಕರು ಮಾಹಿತಿ ನೀಡಿದ್ದರಿಂದ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ದೂರಿದರು. ತಾಲೂಕಿನಲ್ಲಿ 400 ಮಹಿಳಾ ಸಂಘಗಳನ್ನು ಒಳಗೊಂಡಿರುವ ಒಕ್ಕೂಟಗಳ ಸದಸ್ಯರ ಒತ್ತಾಯದ ಮೇರೆಗೆ ಧಾನ್ ಪೌಂಡೇಷನ್ ಸಂಸ್ಥೆಯಿಂದ ಮಹಿಳಾ ಒಕ್ಕೂಟವನ್ನು ಪ್ರತ್ಯೇಕವಾಗಿ ಮುನ್ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಧಾನ್ ಸಂಸ್ಥೆ ಒಕ್ಕೂಟದ ಎಲ್ಲಾ ದಾಖಲೆಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಧಾನ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿವಶಂಕರ್ ಹಾಗೂ ಮಹೇಂದ್ರ ನಿಮಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಒಕ್ಕೂಟದಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ಧಾನ್ ಸಂಸ್ಥೆ ಸಿಬ್ಬಂದಿ ತಿಳಿಸಿದಾಗ ಮಾತಿನ ಚಕಮಕಿ ನಡೆದಿದ್ದಲ್ಲದೇ ಎಳೆದಾಟಕ್ಕೂ ಮಹಿಳೆಯರು ಮುಂದಾದರು. ಪೊಲೀಸರ ಮಧ್ಯ ಪ್ರವೇಶದಿಂದ ವಾತಾವರಣ ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ನಾಗಮ್ಮ, ಬೇಬಿ, ರಮ್ಯಾ ಇತರ ಸದಸ್ಯೆಯರು ಮತ್ತು ನಿರ್ದೇಶಕಿಯರು ಇತರರು ಹಾಜರಿದ್ದರು.