Advertisement

ದ.ಕ. ಕ್ಲಸ್ಟರ್‌ ಹಾಟ್‌ಸ್ಪಾಟ್‌; ಉಡುಪಿ: ಆರೆಂಜ್‌ ಝೋನ್‌

05:00 PM Apr 16, 2020 | sudhir |

ಉಡುಪಿ / ಮಂಗಳೂರು: ಕೋವಿಡ್ ನಿಯಂತ್ರಣದಲ್ಲಿ ಉಡುಪಿ ಜಿಲ್ಲೆ ಆರೆಂಜ್‌ ಝೋನ್‌ ಮತ್ತು ನಾನ್‌ಹಾಟ್‌ಸ್ಪಾಟ್‌ ಆಗಿ ಹಾಗೂ ದ.ಕ. ಜಿಲ್ಲೆ ಕ್ಲಸ್ಟರ್‌ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದೆ.

Advertisement

ಗ್ರೀನ್‌ ಝೋನ್‌ ಅಂದರೆ ಒಂದೇ ಒಂದು ಪಾಸಿಟಿವ್‌ ಪ್ರಕರಣ ಇಲ್ಲದ ಲಕ್ಷಣ. ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ ರೆಡ್‌ ಝೋನ್‌ ಎಂದು ಗುರುತಿಸಲಾಗುತ್ತದೆ. ಆರೆಂಜ್‌ ಝೋನ್‌ ಅತ್ತ ಸಂಪೂರ್ಣ ಮುಕ್ತವೂ ಅಲ್ಲದ, ಇತ್ತ ಅತಿ ಅಪಾಯಕಾರಿ ಹಂತವೂ ಅಲ್ಲದ ಸ್ಥಿತಿ. ಆದರೆ ಜಾಗೃತರಾಗಬೇಕಾದ ಸೂಚನೆ ಇದೆ.

ಉಡುಪಿ ಜಿಲ್ಲೆಯಲ್ಲಿ ಮೊದಲ ಮೂರು ಪಾಸಿಟಿವ್‌ ಪ್ರಕರಣದ ಬಳಿಕ ಅವರಿಂದ ಸಂಪರ್ಕಕ್ಕೆ ಒಳಗಾದ ಯಾರೊಬ್ಬರಿಗೂ ಸೋಂಕು ತಗಲದಂತೆ ನೋಡಿಕೊಂಡಿದ್ದು ಆರೆಂಜ್‌ ಝೋನ್‌ ಪ್ರಾಪ್ತವಾಗಲು ಕಾರಣವಾಗಿದೆ. ಇಲ್ಲಿ ಸಮುದಾಯಕ್ಕೆ ಸೋಂಕು ತಗುಲಿಲ್ಲ.

ಕೋವಿಡ್ ಪಾಸಿಟಿವ್‌ ಸಂಪರ್ಕಕ್ಕೆ ಬಂದವರಲ್ಲದೆ ಮೂರನೆಯ ಸಂಪರ್ಕದವರ ಗಂಟಲು ದ್ರವವನ್ನೂ ಸಂಗ್ರಹಿಸಲಾಗುತ್ತಿದೆ. ಬುಧವಾರ 106, ಮಂಗಳವಾರ 108 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸತತ 17 ದಿನಗಳಿಂದ ಯಾವುದೇ ಪಾಸಿಟಿವ್‌ ಪ್ರಕರಣಗಳು ದಾಖಲಾಗಿಲ್ಲ. 28 ದಿನಗಳು ಇದೇ ರೀತಿ ಮುಂದುವರಿದರೆ ಉಡುಪಿ ಕೋವಿಡ್ ಮುಕ್ತ ಜಿಲ್ಲೆ ಆಗಲಿದೆ.

ಗಡಿ ಬಂದ್‌ಗೆ ಇನ್ನಷ್ಟು ಆದ್ಯತೆ
ನಮ್ಮ ಜಿಲ್ಲೆ ಸುರಕ್ಷಿತವಾಗಿದ್ದರೂ ಗಡಿಯ ಬಂದೋಬಸ್ತನ್ನು ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಜನರು ಬಂದು ಅವರ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಕಷ್ಟವಾಗುತ್ತದೆ. ಹಾಗೋ ಹೀಗೋ ಬಂದವರಿಗೆ ಮನೆಯಲ್ಲಿ ಕ್ವಾರಂಟೈನ್‌ನಲ್ಲಿರಲು ತಿಳಿಸಿದ್ದೇವೆ. ಅಗತ್ಯವಿದ್ದರೆ ಮಾದರಿ ಪರೀಕ್ಷೆಗಳನ್ನೂ ನಡೆಸುತ್ತಿದ್ದೇವೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ  ಸೂಡ ತಿಳಿಸಿದ್ದಾರೆ.

Advertisement

ನಿಯಮ ಬದಲಾವಣೆ ಇಲ್ಲ
ದ.ಕ. ಜಿಲ್ಲೆಯಲ್ಲಿ ಒಟ್ಟು 12 ಪ್ರಕರಣಗಳು ಪತ್ತೆಯಾಗಿದ್ದು, 9 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸತತ 17 ದಿನಗಳಿಂದ ಹೊಸ ಪ್ರಕರಣಗಳು ದಾಖಲಾಗಿಲ್ಲ. ಮೂವರು ಚಿಕಿತ್ಸೆ ಪಡೆಯುತ್ತಿರುವುದರಿಂದ ಜಿಲ್ಲೆಯನ್ನು ಕ್ಲಸ್ಟರ್‌ ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿದೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್‌ ಆಯುಕ್ತ ಡಾ| ಪಿ.ಎಸ್‌. ಹರ್ಷ ಅವರು, ಜಿಲ್ಲೆ ಯಾವುದೇ ಝೋನ್‌ನಲ್ಲಿ ಬಂದರೂ ನಗರ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ನಿಯಮಾವಳಿಗಳನ್ನು ಬದಲಿಸುವುದಿಲ್ಲ. ಈವರೆಗೆ ಯಾವ ರೀತಿಯ ಕಾನೂನು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೋ, ಅವುಗಳೇ ಮುಂದುವರಿಯಲಿವೆ. ಜನರು ಮನೆಯೊಳಗಿದ್ದು, ಕೋವಿಡ್ ಪ್ರಕರಣಗಳನ್ನು ಶೂನ್ಯಕ್ಕಿಳಿಸಲು ಹಾಗೂ ಹೊಸ ಪ್ರಕರಣಗಳು ಪತ್ತೆಯಾಗದಂತೆ ಮಾಡಲು ಸಹಕರಿಸಬೇಕು. ಅವಶ್ಯವಿಲ್ಲದಿಲ್ಲರೆ ಹೊರಗೆ ಬಾರದೆ ಲಾಕ್‌ಡೌನ್‌ ಯಶಸ್ವಿಯಾಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಾಸರಗೋಡು ಹಾಟ್‌ಸ್ಪಾಟ್‌
ಒಂದು ಪ್ರಕರಣ ಮಾತ್ರ ಪತ್ತೆಯಾಗಿರುವ ಕೊಡಗು ಜಿಲ್ಲೆ ಆರೆಂಜ್‌ ಝೋನ್‌ನಲ್ಲಿ ಸೇರ್ಪಡೆಯಾಗಿದೆ. ಆದರೆ, ಇನ್ನೂ ಹಲವು ಪಾಸಿಟಿವ್‌ ಪ್ರಕರಣಗಳಿರುವ ಕಾಸರಗೋಡು ಜಿಲ್ಲೆ ಹಾಟ್‌ಸ್ಪಾಟ್‌ ಎಂದು ಗುರುತಿಸಿಕೊಂಡಿದೆ.

ಎ. 20: ಹೊಸ ಮಾರ್ಗದರ್ಶಿ ಸೂತ್ರ
ಲಾಕ್‌ಡೌನ್‌ ಮೇ 3ರ ವರೆಗೆ ಮುಂದುವರಿಯಲಿದ್ದು, ಎ. 20ರಂದು ಸರಕಾರ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಿದೆ. ಆಗ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿ ರಿಯಾಯಿತಿಗಳು ದೊರೆಯಬಹುದು. ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next