Advertisement
ಬುಧವಾರ ಒಟ್ಟು 42 ಮಂದಿಯ ಗಂಟಲು ದ್ರವ ಮಾದರಿಯ ವರದಿ ಬಂದಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಬುಧವಾರ 22 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಈ ವರೆಗೆ 148 ವರದಿಗಳು ಬಾಕಿ ಇವೆ. ಒಟ್ಟು 1,225 ಮಂದಿ ಗೃಹನಿಗಾದಲ್ಲಿದ್ದು, 25 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಫಿವರ್ ಕ್ಲಿನಿಕ್‌ನಲ್ಲಿ ಬುಧವಾರ 75 ಮಂದಿಯನ್ನು ಪರೀಕ್ಷಿಸಿದ್ದು, ಈವರೆಗೆ 276 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕೊರೊನಾ ದೃಢಪಟ್ಟು ಚಿಕಿತ್ಸೆಗೆ ಒಳಗಾಗಿದ್ದ 12 ಮಂದಿ ಸೋಂಕಿತರ ಪೈಕಿ 9 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್‌ನಲ್ಲಿ ಜನಧನ ಮಹಿಳಾ ಖಾತೆದಾರರಿಗೆ ಪ್ರತೀ ತಿಂಗಳು ತಲಾ 500 ರೂ.ಗಳಂತೆ 3 ತಿಂಗಳು ಕೇಂದ್ರ ಸರಕಾರ ಹಣ ಜಮಾ ಮಾಡಲಿದೆ. ಜಮಾ ಆಗಿರುವ ಹಣವು ಖಾತೆಯಲ್ಲೇ ಇರಲಿದ್ದು, ಆ ಹಣವನ್ನು ಡ್ರಾ ಮಾಡಿಕೊಳ್ಳಲು ಯಾವುದೇ ಕಾಲಮಿತಿ ಇರುವುದಿಲ್ಲ. ವದಂತಿಗಳಿಗೆ ಕಿವಿಗೊಡದೆ ಅಗತ್ಯವಿದ್ದಲ್ಲಿ ಮಾತ್ರ ಬ್ಯಾಂಕ್‌ಗೆ ತೆರಳಿ ಹಣ ಪಡೆಯಬಹುದು. ಬ್ಯಾಂಕ್‌ಗಳಿಗೆ ಭೇಟಿ ನೀಡಿದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಕಾರ್ಮಿಕ ಇಲಾಖೆಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯು ವಲಸೆ ಕಾರ್ಮಿಕರಿಗೆ ಸಂಬಂಧಪಟ್ಟ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಕೂಳೂರು ಪ್ರದೇಶದಲ್ಲಿ ಬುಧವಾರ ವದಂತಿಯೊಂದರ ಮೇರೆಗೆ ಜನಜಂಗುಳಿ ಸೇರಿದ್ದು ಗಮನಕ್ಕೆ ಬಂದಿದೆ. ಕಾರ್ಮಿಕರು ವದಂತಿಗಳಿಗೆ ಕಿವಿಗೊಡದೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.