ಢಾಕಾ: ಆತಿಥೇಯ ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನಲ್ಲಿ ಜಿಂಬಾಬ್ವೆ ಹಿನ್ನಡೆ ಅನುಭವಿಸಿದೆ. ಬಾಂಗ್ಲಾದ 7 ವಿಕೆಟಿಗೆ 522 ಡಿಕ್ಲೇರ್ಡ್ ಮೊತ್ತಕ್ಕೆ ಉತ್ತರವಾಗಿ ಜಿಂಬಾಬ್ವೆ ಮೂರನೇ ದಿನದಾಟದ ಅಂತ್ಯಕ್ಕೆ 304 ರನ್ ಗಳಿಸಿ ಆಲೌಟಾಗಿದೆ. ಕೊನೆಯ ಆಟಗಾರ ಗಾಯದ ಸಮಸ್ಯೆಯಿಂದ ಬ್ಯಾಟಿಂಗಿಗೆ ಬರಲಿಲ್ಲ. ಇದರಿಂದಾಗಿ ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್ ಹಿನ್ನಡೆ ಅನುಭವಿಸಿದೆೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಬಾಂಗ್ಲಾ ಗೆಲುವಿನ ನಿರೀಕ್ಷೆಯಲ್ಲಿದೆ.
ಬ್ರೆಂಡನ್ ಟಯ್ಲರ್, ಪೀಟರ್ ಮೂರ್ ಅವರ ಜವಾಬ್ದಾರಿಯ ಆಟದಿಂದಾಗಿ ಜಿಂಬಾಬ್ವೆ ಹೀನಾಯ ನಿರ್ವಹಣೆಯಿಂದ ಪಾರಾಗಿದೆ. ಟಯ್ಲರ್ ಮತ್ತು ಮೂರ್ 6ನೇ ವಿಕೆಟಿಗೆ 139 ರನ್ನುಗಳ ಜತೆಯಾಟ ನಡೆಸಿದ್ದರಿಂದ ಜಿಂಬಾಬ್ವೆ ಹೋರಾಟ ನಡೆಸುವುದು ಸಾಧ್ಯವಾಗಿದೆ. 131 ರನ್ನಿಗೆ 5 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ತಂಡವನ್ನು ಟಯ್ಲರ್ ಮತ್ತು ಮೂರ್ ಮೇಲಕ್ಕೆತ್ತಿದ್ದರು. ಟಯ್ಲರ್ ಶತಕ ಸಿಡಿಸಿ ಸಂಭ್ರಮಿಸಿದರೆ ಮೂರ್ 83 ರನ್ನಿಗೆ ಆಟ ಮುಗಿಸಿದರು. ಇವರಿಬ್ಬರು 20 ರನ್ ಅಂತರದಲ್ಲಿ ಪೆವಿಲಿಯನ್ ಸೇರಿದ್ದರಿಂದ ಜಿಂಬಾಬ್ವೆ ಮತ್ತೆ ಸಂಕಷ್ಟಕ್ಕೆ ಬಿದ್ದಿದೆ.
ಜಿಂಬಾಬ್ವೆಗೆ ಪ್ರಬಲ ಹೊಡೆತ ನೀಡಿದವರು ತೈಜುಲ್ ಇಸ್ಲಾಮ್. ನಿರಂತರ ದಾಳಿ ನಡೆಸಿದ ಅವರು 5 ವಿಕೆಟ್ ಕಿತ್ತು ಬಾಂಗ್ಲಾ ಮೇಲುಗೈ ಸಾಧಿಸುವಂತೆ ಮಾಡಿದರು. ಅವರು 107 ರನ್ನಿಗೆ 5 ವಿಕೆಟ್ ಹಾರಿಸಿದ್ದಾರೆ. ಈ ಮೊದಲು ಬಾಂಗ್ಲಾ ಮುಶಿಕರ್ ರಹೀಂ ಅವರ ದ್ವಿಶತಕ (219 ಔಟಾಗದೆ) ಮತ್ತು ಮೊಮಿನುಲ್ ಹಕ್ (161) ಅವರ ಶತಕದ ನೆರವಿನಿಂದ 7 ವಿಕೆಟಿಗೆ 522 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 7 ವಿಕೆಟಿಗೆ 522 ಡಿಕ್ಲೇರ್ಡ್; ಜಿಂಬಾಬ್ವೆ ಮೊದಲ ಇನ್ನಿಂಗ್ಸ್ 304 (ಬ್ರಾನ್ ಚರಿ 53, ಬ್ರೆಂಡನ್ ಟಯ್ಲರ್ 110, ಪೀಟರ್ ಮೂರ್ 83, ತೈಜುಲ್ ಇಸ್ಲಾಮ್ 107ಕ್ಕೆ 5, ಮೆಹದಿ ಹಸನ್ ಮಿರಾಜ್ 61ಕ್ಕೆ 3).