Advertisement
ದೇವತೆಗಳ ಅಣತಿಯಂತೆ ಕಚನು ಶುಕ್ರಾಚಾರ್ಯರ ಆಶ್ರಮಕ್ಕೆ ಬಂದು ಶುಕ್ರಾಚಾರ್ಯರಿಗೆ ಸಾಷ್ಟಾಂಗ ನಮಸ್ಕರಿಸಿದನು. ಕಚನನ್ನು ಕಂಡು ಏಳು ಕುಮಾರ… ನಿನಗೆ ಕಲ್ಯಾಣವಾಗಲಿ. ಯಾರು ನೀನು..? ಇಲ್ಲಿಗೇಕೆಬಂದೆ ಎಂದು ಕೇಳಿದರು, ಕಚನು ಎದ್ದು ನಿಂತು ಕರಜೋಡಿಸಿ, ಸ್ವಾಮಿ.. ನಾನು ಬೃಹಸ್ಪತ್ಯಾಚಾರ್ಯರ ಮಗ ಕಚ, ದಯಮಾಡಿ ನನಗೆ ನಿಮ್ಮ ಶಿಷ್ಯತ್ವವನ್ನು ಅನುಗ್ರಹಿಸಿ ಎಂದು ಕೇಳಿದನು. ಈ ಮಾತನ್ನು ಕೇಳಿ ಶುಕ್ರಾಚಾರ್ಯರು “ಬೃಹಸ್ಪತಿಯ ಮಗನು ತಮ್ಮಲ್ಲೇಕೆ ಬಂದನು… ದೇವತೆಗಳೇ ನನ್ನಿಂದ ಏನಾದರೂ ಲಾಭವನ್ನು ಪಡೆಯಲು ಇವನನ್ನು ಇಲ್ಲಿಗೆ ಕಳುಹಿಸಿದರೋ ” ಎಂದು ಕ್ಷಣಕಾಲ ಯೋಚಿಸಲು ದೇವತೆಗಳ ಸಂಚು ಅರ್ಥವಾಯಿತು. ಆದರೆ ಇವನನ್ನು ತಿರಸ್ಕರಿಸಲು ಯಾವ ಕಾರಣವೂ ಇಲ್ಲ,ಆದರೆ ಯಾವುದೇ ಕಾರಣಕ್ಕೂ ಸಂಜೀವಿನಿ ಮಂತ್ರವನ್ನು ಇವನಿಗೆ ಉಪದೇಶಿಸಬಾರದು. ಅಂತಹ ಪ್ರಸಂಗ ಬಂದರೆ ನೋಡಿದರಾಯಿತು ಎಂದು ತೀರ್ಮಾನಿಸಿ ಕಚನನ್ನು ತಮ್ಮ ಶಿಷ್ಯನನ್ನಾಗಿ ಆಶ್ರಮದಲ್ಲಿರಲು ಒಪ್ಪಿದರು. ಆಗ ಕಚನು ” ನಾನು ನಿಮ್ಮ ಆಶ್ರಮದಲ್ಲಿರುವವರೆಗೂ ನನ್ನ ಬ್ರಹ್ಮಚರ್ಯವ್ರತಕ್ಕೆ ಯಾವುದೇ ಭಂಗ ಬರದಂತೆ ತಾವು ನನ್ನನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದನು. ಇದಕ್ಕೆ ಶುಕ್ರಾಚಾರ್ಯರು ಒಪ್ಪಿದರು.
Related Articles
Advertisement
ಈ ರೀತಿ ಒಂದು ವರ್ಷ ಗತಿಸಲು, ಶುಕ್ರಾಚಾರ್ಯರ ವಿಶ್ವಾಸಕ್ಕೆ ಹಾಗೂ ಗುರುಪುತ್ರಿಯ ಪ್ರೀತಿಗೆ ಪಾತ್ರನದಂತಹ ಕಚನನ್ನು ಹೇಗಾದರೂ ಮಾಡಿ ಇಲ್ಲಿಂದ ತೆರವುಗೊಳಿಸಬೇಕೆಂದು ದಾನವರು ತೀರ್ಮಾನಿಸಿದರು. ಈ ಬಗ್ಗೆ ಗುರುಗಳ ಎದುರು ಮಾತನಾಡಲು ಯಾರಿಗೂ ಧೈರ್ಯವಿಲ್ಲದ ಕಾರಣ ತಾವೇ ಇವನನ್ನು ಸಾಯಿಸಬೇಕೆಂದು ನಿಶ್ಚಯಿಸಿಕೊಂಡರು.
ಒಂದು ದಿನ ಕಚನು ಗೋವುಗಳನ್ನು ಮೇಯಿಸಲು ಅಡವಿಗೆ ಹೋದಾಗ ದೈತ್ಯರು ಸಮಯಸಾಧಿಸಿ ಅವನನ್ನು ಸಂಹರಿಸಿದರು. ರಾತ್ರಿಯಾದರೂ ಕಚನು ಆಶ್ರಮಕ್ಕೆ ಬಾರದ್ದನ್ನು ಕಂಡು ದೇವಯಾನಿಯು ಗಾಬರಿಯಿಂದ ತಂದೆಯಲ್ಲಿಗೆ ಬಂದು ಕಚನು ಬಾರದಿರುವುದನ್ನು ಹಾಗೂ ತಾನು ಅವನನ್ನು ಪ್ರೀತಿಸುತ್ತಿರುವುದಾಗಿಯೂ, ಕಚನು ತನಗೆ ಬೇಕೆಂದು ಹೇಳಿದಳು. ಅದನ್ನು ಕೇಳಿ ತಂದೆಯ ಹೃದಯ ಕರಗಿತು. ಕಚನು ಮೃತಪಟ್ಟಿರುವ ವಿಷಯ ತಿಳಿದ ಶುಕ್ರಾಚಾರ್ಯರು ಸಂಜೀವಿನಿ ಮಂತ್ರ ಜಪಿಸಿ ಅವನನ್ನು ಬದುಕಿಸಿದರು.
ಇದೇ ರೀತಿಯಾಗಿ ಹಲವುಬಾರಿ ಕಚನನ್ನು ದೈತ್ಯರು ಸಂಹರಿಸಲು, ಮಗಳ ಮೇಲಿನ ಮಮತೆಯಿಂದಾಗಿ ಸಂಜೀವಿನಿ ಮಂತ್ರದ ಸಹಾಯದಿಂದ ಶುಕ್ರಾಚಾರ್ಯರು ಅವನನ್ನು ಬದುಕಿಸಿದರು. ಇದರಿಂದ ಬೇಸತ್ತ ದೈತ್ಯರು ಕಚನು ಮತ್ತೆಂದೂ ಹಿಂದಿರುಗದಂತೆ ಒಂದು ಉಪಾಯವನ್ನು ಮಾಡಿದರು.
ಒಂದು ದಿನ ಅಡವಿಗೆ ಹೋದ ಕಚನನ್ನು ದೈತ್ಯರು ಸಂಹರಿಸಿ ದೇಹವನ್ನು ಸುಟ್ಟು ಪುಡಿಮಾಡಿ ಮದ್ಯದಲ್ಲಿ ಬೆರಸಿ ಅದನ್ನು ಶುಕ್ರಾಚಾರ್ಯರಿಗೆ ಪಾನಮಾಡಿಸಿದರು. ರಾತ್ರಿಯಾದರೂ ಕಚನು ಬಾರದಿರುವುದನ್ನು ಕಂಡು ನಡೆದ ಅಚಾತುರ್ಯವನ್ನು ತಮ್ಮ ಜ್ಞಾನದೃಷ್ಟಿಯಿಂದ ಅರಿತು ಒಂದು ಕ್ಷಣ ಗಾಬರಿಯಾದರು. ತಮ್ಮ ಮಮತೆಯ ಮಗಳನ್ನು ಕರೆದು “ಕಚನು ಇನ್ನೆಂದೂ ಬರುವುದಿಲ್ಲ, ದೈತ್ಯರು ಕಚನನ್ನು ಕೊಂದು ದೇಹವನ್ನು ಸುಟ್ಟು ಪುಡಿಮಾಡಿ ಮದ್ಯದಲ್ಲಿ ಬೆರಸಿ ತನಗೆ ಕುಡಿಸಿರುವ ಸಂಗತಿಯನ್ನು ವಿವರಿಸಿದರು . ಕಚನನ್ನು ಬದುಕಿಸಿದರೆ ನಾನು ಸಾಯುವೆನು ಇಲ್ಲವಾದರೆ ಅವನು ನನ್ನಲ್ಲಿ ಜೀರ್ಣವಾಗುವನು. ಆದಕಾರಣ ನಿನ್ನ ಆಯ್ಕೆ ನಾನೋ….? ಅಥವಾ ಕಚನೋ….?” ಎಂದು ಕೇಳಿದರು .
ತಂದೆಯ ಮಾತಿನಿಂದ ಒಂದು ಕ್ಷಣ ವಿಚಲಿತಳಾದ ದೇವಯಾನಿಯು ತಕ್ಷಣ ಎಚ್ಚೆತ್ತುಕೊಂಡ ನನಗೆ ನೀವಿಬ್ಬರು ಬೇಕು ಎಂದು ಹೇಳಿದಳು. ನಂತರ ಯೋಚಿಸಿದ ದೇವಯಾನಿಯು ಅಪ್ಪಾ…. ನೀವಿಬ್ಬರು ಬದುಕಿಬರುವ ಉಪಾಯವೊಂದು ನನಗೆ ಹೊಳೆಯಿತು, ನೀವು ನಿಮ್ಮ ಉದರದಲ್ಲಿರುವ ಕಚನಿಗೆ ಸಂಜೀವಿನಿ ಮಂತ್ರೋಪದೇಶವನ್ನು ಮಾಡಿ ಮಂತ್ರವನ್ನು ಸಿದ್ದಿ ಮಾಡುವ ಮಾರ್ಗವನ್ನು ತೋರಿ ನಂತರ ನೀವು ಕಚನನ್ನು ಬದುಕಿಸಿ, ಅವನು ಹೊರಗೆ ಬಂದೊಡನೆ ಸಂಜೀವಿನಿ ಮಂತ್ರವನ್ನು ಜಪಿಸಿ ನಿಮ್ಮನ್ನು ಬದುಕಿಸುವನು ಎಂದಳು.
ತಾನು ಯಾವುದನ್ನು ಮಾಡಬಾರದೆಂದು ದೃಢನಿಶ್ಚಯದಿಂದ ಇದ್ದೆನೋ ಅದನ್ನೇ ಈಗ ಮಗಳ ಮೇಲಿನ ಅತಿಯಾದ ಪ್ರೀತಿಯಿಂದ ಮಾಡಬೇಕಾದ ಪ್ರಸಂಗ ಬಂದಿತೆಂದು ಯೋಚಿಸಿ , ಆಗಲಿ ಮಗು ನೀನು ಹೇಳಿದಂತೆ ಮಾಡುತ್ತೇನೆ ಎಂದು ಕಚನಿಗೆ ಮಂತ್ರೋಪದೇಶವನ್ನಿತ್ತು ಕಚನನ್ನು ಬದುಕಿಸಿದನು, ಬದುಕಿಬಂದ ಕಚನು ಗುರುಗಳನ್ನು ಬದುಕಿಸಿದನು. ಹೀಗೆ ಕಚನು ಬಂದ ಕೆಲಸ ಪೂರ್ಣವಾಯಿತು.
ಮರುದಿನ ಸ್ವರ್ಗಕ್ಕೆ ಹಿಂತಿರುಗಲು ಅಣಿಯಾದ ಕಚನು ಗುರುಗಳ ಸಮ್ಮತಿಯನ್ನು ಪಡೆದು ದೇವಯಾನಿಗೆ ತಾನು ಹೊರಡುವ ವಿಷಯವನ್ನು ತಿಳಿಸಲು,ತನ್ನನ್ನು ವರಿಸಬೇಕೆಂದು ತನ್ನ ಮನದಾಸೆಯನ್ನು ಅರುಹಿದಳು. ಇದಕ್ಕೆ ಕಚನು ಒಪ್ಪಲಿಲ್ಲ. ತಂದೆಯಲ್ಲಿ ಬಂದು ಕಚನನ್ನು ಒಪ್ಪಿಸುವಂತೆ ಒತ್ತಾಯಿಸಿದಳು ಆದರೆ ಕಚನ ಬ್ರಹ್ಮಚರ್ಯಕ್ಕೆ ಭಂಗ ಬರದಂತೆ ಕಾಪಾಡುವೆನೆಂದು ಮಾತು ಕೊಟ್ಟದ್ದರಿಂದ ಮಗಳ ಆಸೆಗೆ ಒತ್ತಾಸೆಯಾಗಿ ನಿಲ್ಲಲು ನಿರಾಕರಿಸಿದರು. ಇತ್ತ ಕಚನನ್ನು ಪರಿಪರಿಯಾಗಿ ಬೇಡಿದಳು. ಆದರೂ ಕಚನ ಮನಸ್ಸು ಬದಲಾಗಲಿಲ್ಲ. ಇದರಿಂದ ಕುಪಿತಗೊಂಡ ದೇವಯಾನಿಯು ಕಚನಿಗೆ ” ಸಂಜೀವಿನಿ ಮಂತ್ರವು ಸಾಧಿಸದೆ ಹೋಗಲಿ ಎಂದು ಶಾಪವಿತ್ತಳು. ಕಚನು ಕೂಡ ” ಯಾವ ಬ್ರಾಹ್ಮಣ ಕುಮಾರನು ನಿನ್ನನ್ನು ವಿವಾಹವಾಗದಿರಲಿ ಎಂದು ಪ್ರತಿಶಾಪವನ್ನಿತ್ತು ಸ್ವರ್ಗಕ್ಕೆ ಹೊರಟುಹೋದನು.
ಮಗಳಿಗೆ ಬಂದೊದಗಿದ ಸ್ಥಿತಿಯನ್ನು ಕಂಡು ಶುಕ್ರಾಚಾರ್ಯರು ಬಹಳ ಸಂಕಟದಿಂದ ದೇವಯಾನಿಯನ್ನು ಸಂತೈಸಿದರು. ದೇವಯಾನಿಯ ಒಂಟಿತನವನ್ನು ದೂರಮಾಡಲು ಶುಕ್ರಾಚಾರ್ಯರು ಮಗಳನ್ನು ದಾನವ ಚಕ್ರವರ್ತಿ ವೃಷಪರ್ವನ ಮಗಳು ಶರ್ಮಿಷ್ಠೆಯ ಜೊತೆಮಾಡಿದರು. ಇದರಿಂದ ದೇವಯಾನಿಯು ನಿಧಾನವಾಗಿ ಕಚನನ್ನು ಮರೆತು ಸಂತೋಷದಿಂದಿದ್ದಳು. ಶುಕ್ರಾಚಾರ್ಯರು ಮಗಳ ಸಂತೋಷವನ್ನು ಕಂಡು ನಿರಾಳರಾದರು.