Advertisement

ಗಮನಸೆಳೆದ ದೇವುದಾಸ ಶೆಟ್ಟಿಯವರ ಚಿತ್ರ ಸಂಕಥನ

12:30 AM Jan 25, 2019 | Team Udayavani |

ದೇವುದಾಸ ಶೆಟ್ಟಿ ಆರ್ಥಿಕ ಅಡಚಣೆ, ಹತಾಶೆಯ ನಡುವೆ ರಾತ್ರಿ ಶಾಲೆಯಲ್ಲಿ ಓದಿ ಕಲಾವಿದನಾಗಿ ಅವರು ರೂಪುಗೊಂಡದ್ದೇ ಅಚ್ಚರಿಯ ಅಂಶ. ಅವರು ಯಾವುದೇ ತರಬೇತಿ ಪಡೆದು ಕಲಾವಿದರಾದುದಲ್ಲ. ಒಂದರ್ಥದಲ್ಲಿ ಅವರು ಏಕಲವ್ಯನ ಹಾದಿಯಲ್ಲಿ ಸಾಗಿದವರು.

Advertisement

ಮುಂಬಯಿ ಮಹಾನಗರದಲ್ಲಿ ನೆಲೆನಿಂತು ಕಲಾಕ್ಷೇತ್ರದಲ್ಲಿ ಮಹತ್ವದ ಸಾಧನೆಗೈದ ಕೆ.ಕೆ.ಹೆಬ್ಟಾರ, ಎನ್‌.ಸಿ.ದೇಸಾಯಿ ಮೊದಲಾದವರ ಸಾಲಿನಲ್ಲಿ ಕೇಳಿ ಬರುವ ಮತ್ತೂಂದು ಹೆಸರು ದೇವುದಾಸ ಶೆಟ್ಟಿ ಅವರದು. ಚಿತ್ರಕಲೆಯನ್ನು ಉಸಿರಾಗಿಸಿಕೊಂಡ ಅಪೂರ್ವ ಸೃಜನಶೀಲ ಕಲಾವಿದ ದೇವುದಾಸ್‌ ಶೆಟ್ಟಿ. ಚಿತ್ರಕಲೆಯ ಮೂಲಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ದೇವುದಾಸ ಶೆಟ್ಟಿ ಅವರ ವೃತ್ತಿ ಬದುಕಿನ ಸುವರ್ಣ ಸಂಭ್ರಮದ ನಿಮಿತ್ತ ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಚಿತ್ರ ಸಂಕಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂದು ದೇವುದಾಸ ಶೆಟ್ಟಿ ಅವರು ತಮ್ಮ ವೃತ್ತಿ ಬದುಕಿನ ಐದು ದಶಕಗಳ ನೋವು – ನಲಿವುಗಳನ್ನು ಹಂಚಿಕೊಂಡ ಪರಿ ಬಹುಹೃದ್ಯವಾಗಿತ್ತು. 

    ಮೂಲತಃ ಮೂಡುಬಿದರೆಯವರಾದ ದೇವುದಾಸ ಶೆಟ್ಟಿ ಆರ್ಥಿಕ ಅಡಚಣೆ, ಹತಾಶೆಯ ನಡುವೆ ರಾತ್ರಿಶಾಲೆಯಲ್ಲಿ ಓದಿ ಕಲಾವಿದನಾಗಿ ಅವರು ರೂಪುಗೊಂಡದ್ದೇ ಅಚ್ಚರಿಯ ಅಂಶ. ಅವರು ಯಾವುದೇ ತರಬೇತಿ ಪಡೆದು ಕಲಾವಿದರಾದುದಲ್ಲ. ಒಂದರ್ಥದಲ್ಲಿ ಅವರು ಏಕಲವ್ಯನ ಹಾದಿಯಲ್ಲಿ ಸಾಗಿದವರು. ರಾತ್ರಿ ಪಾಳಿಯಲ್ಲಿ ದುಡಿಯುತ್ತ ಹಗಲು ಹೊತ್ತು ಭಾವನೆಗಳಿಗೆ ಆಕಾರ ಕೊಟ್ಟು ಬಣ್ಣ ಹಚ್ಚುತ್ತ ಬಂದ ಅವರು ತಮ್ಮನ್ನು ಕಾರ್ಮಿಕ ಕಲಾವಿದನೆಂದೇ ಕರೆಸಿಕೊಳ್ಳಲು ಇಷ್ಟ ಪಡುತ್ತಾರೆ. ಪ್ರತಿಷ್ಠಿತ ಜೆ.ಜೆ ಸ್ಕೂಲು ಆಫ್ ಆರ್ಟ್ಸ್ನಿಂದ ಪದವಿ ಪಡೆದು ಹೊರಬಂದ ಅವರು ಇಂದು ದೇಶ ವಿದೇಶಗಳಲ್ಲಿ ನೂರಾರು ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿ ಸೈ ಎನಿಸಿಕೊಂಡಿದ್ದಾರೆ. 

    ದೇವುದಾಸ ಶೆಟ್ಟಿ ಅವರು ನಿಜವಾದ ಅರ್ಥದಲ್ಲಿ ಕಲಾತಪಸ್ವಿ. ಕಲಾವಿದ ವ್ಯಾಪಾರಿಯಾಗಬಾರದು; ಕಲೆಯ ಉಪಾಸಕನಾಗಬೇಕು. ಕಲೆ ಆಡಂಬರದ ವೈಭವದ ಪ್ರತಿಷ್ಠೆಯ ಸಂಕೇತವಾಗಿ ಬರೇ ಮಾರುಕಟ್ಟೆಯ ಸರಕಾಗಬಾರದು. ಒಂದು ಒಳ್ಳೆಯ ಚಿತ್ರ ಕಲಾಪ್ರದರ್ಶನ ಮಾಡಲು ಇಂದು ಕೆಲವು ಲಕ್ಷ ರೂಪಾಯಿ ಬೇಕಾಗುತ್ತದೆ. ಹೊಸ ಪ್ರೊಡೆಕ್ಟ್ ಲಾಂಚಿಂಗ್‌ ಹೆಸರಿನಲ್ಲಿ ಕಲಾವಿದ ಕಂಗಾಲಾಗುತ್ತಿದ್ದಾನೆ. ಪ್ರತಿಭಾವಂತ ಕಲಾವಿದ ಮೇಲೆ ಬರುವುದು ಇಂದು ದುಸ್ತರವಾಗುತ್ತಿದೆ. ಕಲೆಯನ್ನು ಮೆಚ್ಚಿ ಕಲಾಕೃತಿಯನ್ನು ಕೊಂಡುಕೊಂಡರೆ ಕಲಾವಿದ ಬದುಕಿಕೊಳ್ಳುತ್ತಾನೆ ಎಂದು ತಮ್ಮ ಕಲಾ ಜೀವನದ ಏಳುಬೀಳುಗಳನ್ನು ಮುಚ್ಚು ಮರೆಯಿಲ್ಲದೆ ತೆರೆದಿಟ್ಟರು.

ತಮ್ಮ ಚೊಚ್ಚಲ ಚಿತ್ರ ಕಲಾ ಪ್ರದರ್ಶನವನ್ನು ಖ್ಯಾತ ಗಾಯಕಿ ಲತಾ ಮಂಗೇಶಕರ್‌ ಉದ್ಘಾಟಿಸಿ ವೇದಿಕೆಯ ಮೇಲೆ ಏಳುನೂರಾ ಐವತ್ತು ರೂಪಾಯಿ ಕೊಟ್ಟು ಚಿತ್ರವನ್ನು ಖರೀದಿಸಿದ್ದು, ಪ್ರಧಾನಿ ಇಂದಿರಾಗಾಂಧಿ ಅವರಿಂದ ಸಿಕ್ಕ ಸಹಾಯ, ಜರ್ಮನ್‌ ಉದ್ಯಮಿಗಳು ಮಾಡಿದ ಸಹಾಯ, ಕಲಾಕೃತಿ ಮಾರಾಟವಾಗದೇ ಹೋದಾಗ ಆತ್ಮಹತ್ಯೆಗೆ ಮುಂದಾದುದು, ಚಿತ್ರಕಲಾ ಪ್ರದರ್ಶನಕ್ಕೆ ಗ್ಯಾಲರಿ ಕಾದಿರಿಸಲು ಪತ್ನಿ ತಮ್ಮ ಮಂಗಳಸೂತ್ರ ಅಡವಿರಿಸಿ ತಮ್ಮನ್ನು ಪ್ರೋತ್ಸಾಹಿಸಿದ್ದು, ಬಡತನದ ಸಂಕಟದಲ್ಲೂ ತಾಯಿ ಕೊಟ್ಟ ಪ್ರೀತಿ ಹೀಗೆ ಐದು ದಶಕಗಳ ತಮ್ಮ ಕಲಾಯಾನದ ನೆನಪನ್ನು ದೇವುದಾಸ ಶೆಟ್ಟಿ ಅವರು ತೆರೆದಿಟ್ಟರು. ಕಲೆಯ ಬಗೆಗೆ ಅಪಾರ ಗೌರವ ಶ್ರದ್ಧೆಯನ್ನಿಟ್ಟು ಕೊಂಡಿರುವ ವಿರಳ ಪಂಕ್ತಿಯ ಕಲಾವಿದ ದೇವುದಾಸ ಶೆಟ್ಟಿ ಅವರ ಸಾಧನೆ ನಾಡಿಗೆ ಮಾದರಿಯಾಗಿದೆ. ಅವರು ರಚಿಸಿದ ಕಲಾ ಸಾಹಿತ್ಯವೂ ಮೌಲಿಕವಾದುದು.

Advertisement

ಡಾ.ಜಿ.ಎನ್‌.ಉಪಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next