Advertisement

ತಲೆತಲಾಂತರದಿಂದ ಪತ್ರದ ಮುಖೇನ ಕೊಠಡಿ ಕಾಯ್ದಿರಿಸುವ ಭಕ್ತರು!

10:51 PM Jan 14, 2020 | mahesh |

ಉಡುಪಿ: ಅದಮಾರು ಪರ್ಯಾಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ಮಠ, ಛತ್ರ, ಅತಿಥಿ ಗೃಹದಲ್ಲಿ ವಿಶೇಷ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

Advertisement

ಭಕ್ತರಿಗೆ ವಸತಿ ವ್ಯವಸ್ಥೆ
ಪರ್ಯಾಯದ ಅಂಗವಾಗಿ ದೇಶ-ವಿದೇಶದಿಂದ ಸಾವಿರಾರು ಸಂಖ್ಯೆ ಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರ ಅನುಕೂಲ ಹಾಗೂ ಬೇಡಿಕೆ ಅನುಗುಣವಾಗಿ ಪರ್ಯಾಯ ಮಠದ ವಸತಿ ಸೌಲಭ್ಯ ಕಲ್ಪಿಸಬೇಕಾಗುತ್ತದೆ. ಅಂತೆಯೇ ಈ ಬಾರಿ ಅದಮಾರು ಪರ್ಯಾಯ ವಸತಿ ಸಮಿತಿ ಸಾವಿರಾರು ಮಂದಿ ಭಕ್ತರಿಗೆ ಅಗತ್ಯವಿರುವ ವಸತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ.

ಭರ್ತಿಯಾದ ವಸತಿ ನಿಲಯ
ಅಷ್ಟಮಠಗಳಿಗೆ ಸಂಬಂಧಿಸಿದ 20ಕ್ಕೂ ಅಧಿಕ ವಸತಿನಿಲಯ, ಛತ್ರಗಳು ಭರ್ತಿಯಾಗಿವೆ. ನಗರದ ಲಾಡ್ಜ್ ಸೇರಿದಂತೆ ವಿವಿಧ ಕಡೆಯಲ್ಲಿ ಸಾವಿರಾರು ಮಂದಿ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಗಣ್ಯರಿಗೆ ಖಾಸಗಿ ವಸತಿ ನಿಲಯ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ಉಳಿದುಕೊಳ್ಳಲು ಅಗತ್ಯವಿರುವ ವ್ಯವಸ್ಥೆ ಕಲ್ಪಿಸಿದ್ದು, ಮಣಿಪಾಲ, ಡಯಾನ ಸರ್ಕಲ್‌, ರಥ ಬೀದಿ, ಉಡುಪಿ ನಗರದ ಸೇರಿದಂತೆ ವಿವಿಧ ಕಡೆಯಲ್ಲಿ ಸಹ ಅತಿಥಿಗಳು ತಂಗಲು ಅಗತ್ಯವಿರುವ ವ್ಯವಸ್ಥೆಯನ್ನು ಪರ್ಯಾಯ ವಸತಿ ಸಮಿತಿ ಮಾಡಿಕೊಂಡಿದೆ.

ಪತ್ರ ವ್ಯವಹಾರ
ಹಿಂದೆ ದೂರದ ಊರಿನಿಂದ ಪರ್ಯಾಯಕ್ಕೆ ಬರುವ ಭಕ್ತರು ಮಠ ಪರ್ಯಾಯ ಸಮಿತಿಗೆ ಕೊಠಡಿಗಳನ್ನು ಕಾಯ್ದಿರಿಸುವಂತೆ ಪತ್ರ ಬರೆಯುತ್ತಿದ್ದರು. ಪ್ರಸ್ತುತ ವಸತಿಗೃಹಗಳನ್ನು ಆನ್‌ಲೈನ್‌ ಹಾಗೂ ದೂರವಾಣಿ ಕರೆಯ ಮೂಲಕ ಬುಕ್‌ ಮಾಡಲು ಅವಕಾಶವಿದ್ದರೂ, ಭಕ್ತರು ಮಾತ್ರ ಇನ್ನೂ ಮಠಕ್ಕೆ ಪತ್ರದ ಮುಖೇನ ಕೊಠಡಿಗಳನ್ನು ಕಾಯ್ದಿರಿಸಲು ಬಯಸುತ್ತಿರುವುದು ಆಶ್ಚರ್ಯದ ಸಂಗತಿ. ಮಠಕ್ಕೆ ಈ ಬಾರಿ ನೂರಾರು ಪತ್ರಗಳು ವಸತಿ ಸೌಕರ್ಯ ಕೋರಿ ಪತ್ರವನ್ನು ಬರೆದಿದ್ದಾರೆ. ಅವರಿಗೆಲ್ಲರಿಗೂ ವಸತಿ ವ್ಯವಸ್ಥೆ ಪರ್ಯಾಯ ವಸತಿ ಸಮಿತಿ ಕಲ್ಪಿಸಲಾಗಿದೆ.

ಪೊಲೀಸರಿಗೆ ಪ್ರತ್ಯೇಕ ವ್ಯವಸ್ಥೆ
ಮಠದ ಸುತ್ತಮುತ್ತಲಿನ ಎಲ್ಲ ವಸತಿ ನಿಲಯ, ಶಾಲೆಗಳು, ಛತ್ರಗಳು ಭರ್ತಿ ಯಾಗಿವೆ. ಮಠದಲ್ಲಿ ಉಳಿದುಕೊಳ್ಳಲು ಬಯಸುವವರಿಗೆ ಅಷ್ಟಮಠಗಳ‌ಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಪೊಲೀಸರಿಗೆ, ರಕ್ಷಣಾ ಸಿಬಂದಿಗಳಿಗೆ ಮದುವೆ ಮಂಟಪ ಹಾಗೂ ಮಠದ ಸಮೀಪದ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

Advertisement

ಎಲ್ಲರಿಗೂ ವ್ಯವಸ್ಥೆ
ವಸತಿಗಾಗಿ ಪತ್ರ ಬರೆದವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಒಂದು ತಿಂಗಳ ಮುಂಚಿತವಾಗಿ ಮಠದ ಸುತ್ತಮುತ್ತಲಿನ ಇತರ ವಸತಿ ಗೃಹಗಳಿಗೆ ತೆರಳಿ ರೂಮ್‌ಗಳನ್ನು ಬ್ಲಾಕ್‌ ಮಾಡಲಾಗಿತ್ತು. ಇದರಿಂದಾಗಿ ಮಠದ ಮೂಲಕ ಕೊಠಡಿ ಪಡೆಯಲು ಬಯಸುವ ಭಕ್ತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅದಮಾರು ಪರ್ಯಾಯ ವಸತಿ ಸಮಿತಿ ಸದಸ್ಯರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next