ಶರಣಬಸವೇಶ್ವರ ದೇವಸ್ಥಾನಕ್ಕೆ ನಗರವಲ್ಲದೇ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಮೂಲೆ-ಮೂಲೆಗಳಿಂದ ಸಹಸ್ರಾರು
ಭಕ್ತರು ಆಗಮಿಸಿ ಮಹಾಪುರುಷ ಶರಣರ ದರ್ಶನ ಪಡೆದು ಪುನೀತರಾದರು. ಶ್ರಾವಣ ಮಾಸದ ಕೊನೆ ಸೋಮವಾರ ಹಾಗೂ ಅಮಾವಾಸ್ಯೆಯಾಗಿದ್ದರಿಂದ ಬೆಳಗಿನ ಜಾವದಿಂದಲೇ ಭಕ್ತರು ಶರಣಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ಸರದಿಯಲ್ಲಿ ನಿಂತು ಶರಣರ ದರ್ಶನ ಪಡೆದರು. ದೀಡ ನಮಸ್ಕಾರ, ನೈವೇದ್ಯ ಸೇರಿದಂತೆ ಇತರೆ ಹರಕೆ ತೀರಿಸಿದರು. ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳು, ಯಾದಗಿರಿ ಜಿಲ್ಲೆಯಲ್ಲದೇ ನೆರೆಯ ವಿವಿಧ ಜಿಲ್ಲೆಯ ಗ್ರಾಮಗಳು ಸೇರಿದಂತೆ ವಿವಿಧೆಡೆ ಭಕ್ತರು ತಮ್ಮೂರಿನಿಂದ ಪಾದಯಾತ್ರೆ ಮೂಲಕ ಹಲವು ಭಜನಾ ತಂಡಗಳು ಸೋಮವಾರ ಅಪ್ಪನ ಗುಡಿಗೆ ಆಗಮಿಸಿ ಭಕ್ತಿ ಭಾವ ಸಮರ್ಪಿಸಿದವು. ವಾರ ಇಲ್ಲವೇ ನಾಲ್ಕು ದಿನಗಳ ಪಾದಯಾತ್ರೆ ಮೂಲಕ ಆಗಮಿಸಿದ ತಂಡಗಳಿಗೆ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿಗಳಾದ ಡಾ| ಶರಣಬಸವಪ್ಪ ಅಪ್ಪಾಜಿ ಅವರು ಶುಭಾಶೀರ್ವಾದ ಮಾಡಿದರು. ಶ್ರಾವಣ ಮಾಸದಂಗವಾಗಿ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದಲ್ಲಿ ಪ್ರತಿನಿತ್ಯ ಉಪನ್ಯಾಸ ನಡೆದು ಬರುತ್ತಿದ್ದು, ಆ. 29ರವರೆಗೆ ನಡೆಯಲಿದೆ. 30ರಂದು ಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ 34ನೇ ಪುಣ್ಯಸ್ಮರಣೋತ್ಸವ ನಡೆಯಲಿದೆ. ಅಮವಾಸ್ಯೆ ನಿಮಿತ್ತ ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವ ಮಹೋತ್ಸವ ಸಹ ನಡೆಯಿತು. ಪಲ್ಲಕ್ಕಿ ಉತ್ಸವದುದ್ದಕ್ಕೂ ಭಕ್ತರಿಂದ ಶರಣಬಸವೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಶರಣಬಸವೇಶ್ವರರ ಜಾತ್ರೆ ಸಂದರ್ಭದಲ್ಲಿ ಸೇರುವಷ್ಟು ಭಕ್ತರು ಆವರಣದಲ್ಲಿ ಸೇರಿದ್ದರು. ಇಡೀ ಆವರಣ ಜಾತ್ರೆ ಮೈದಾನದಂತೆ ಕಂಡುಬಂತು. ಡಾ| ಶಿವರಾಜ ಶಾಸ್ತ್ರೀ ಅವರು ಶರಣಬಸವೇಶ್ವರ ಅವರ ಜೀವನ ಚರಿತ್ರೆ ಹಾಗೂ ಪವಾಡಗಳ ಕುರಿತು ಪ್ರವಚನ ಪ್ರಸ್ತುತಪಡಿಸಿದರು.
Advertisement