Advertisement
ನವದೆಹಲಿಯಲ್ಲಿ ಮಾತನಾಡಿದ ಅವರು ಯಾವುದೇ ಧರ್ಮವನ್ನು, ಧಾರ್ಮಿಕ ಗುರುಗಳನ್ನು ಕಾಂಗ್ರೆಸ್ ನಿಂದಿಸಿಲ್ಲ ಎಂದು ಸ್ಪಷ್ಟಪಡಿಸಿದರು. ತಾವು, ಸೋನಿಯಾ ಗಾಂಧಿ, ಅಧಿರ್ ರಂಜನ್ ಚೌಧರಿ ಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದ ಬಗ್ಗೆ ಬಿಜೆಪಿ ಕಟುವಾಗಿ ಆಕ್ಷೇಪ ಮಾಡುತ್ತಿರುವುದು ಆವರ ರಾಜಕೀಯ ತಂತ್ರದ ಭಾಗ. ಅದಕ್ಕೆ ಯಾರೂ ಬಲಿಯಾಗಬಾರದು ಎಂದು ಹೇಳಿದ್ದಾರೆ. “ರಾಮನ ಮೇಲೆ ಭಕ್ತಿ ಇರುವವರು ಜ.22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ತೆರಳಬಹುದು’ ಎಂದರು. ಉತ್ತರ ಪ್ರದೇಶ ಕಾಂಗ್ರೆಸ್ ನಾಯಕರು, ಮಧ್ಯಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್ ಕಾರ್ಯಕ್ರಮಕ್ಕೆ ತೆರಳುವುದಾಗಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದ ಮೇಲೆ, ಅದರ ಉದ್ಘಾಟನೆಗೆ ತೆರಳುವುದರಲ್ಲಿ ತಪ್ಪಿಲ್ಲ ಎಂದು ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಹೇಳಿದ್ದಾರೆ. ಆದರೆ, ವೈದ್ಯಕೀಯ ಕಾರಣಗಳಿಂದ ತಾವು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಮಂದಿರ ಬೀಗ ತೆಗೆಯಲು ಒಪ್ಪಿದ್ದ ರಾಜೀವ್: ಲಕ್ಷಣ ಸಿಂಗ್
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಸಹೋದರ ಲಕ್ಷ್ಮಣ ಸಿಂಗ್ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂಬ ಕಾಂಗ್ರೆಸ್ ನಿಲುವಿನಿಂದ ಈಗಾಗಲೇ ಧಕ್ಕೆಯಾಗಿದೆ ಎಂದರು. ಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದರಿಂದ ಪಕ್ಷದ ವಿರುದ್ಧ ಭಾವನೆ ಜನರಿಗೆ ಬಂದಿದೆ. ಅದು ಮುಂದಿನ ಚುನಾವಣೆಯಲ್ಲಿ ವ್ಯಕ್ತವಾಗಲಿದೆ. ರಾಜೀವ್ ಗಾಂಧಿಯವರೇ 1989ರಲ್ಲಿ ಮಂದಿರದ ಬೀಗ ತೆರೆಯಲು ಶಿಫಾರಸು ಮಾಡಿದ್ದರು. ಹೀಗಾಗಿ, ಆಹ್ವಾನ ಧಿಕ್ಕರಿಸಲು ನೀವು ಯಾರು ಎಂದು ವರಿಷ್ಠರನ್ನು ಲಕ್ಷ್ಮಣ ಸಿಂಗ್ ಪ್ರಶ್ನಿಸಿದ್ದಾರೆ.