ಯಾದಗಿರಿ: ಕಲ್ಯಾಣ ಕರ್ನಾಟಕದ ಐತಿಹಾಸಿಕ ಮೈಲಾಪುರ ಮಲ್ಲಯ್ಯನ ಜಾತ್ರೆ ಕೋವಿಡ್ ಹಿನ್ನೆಲೆ ರದ್ದುಗೊಂಡಿದ್ದರೂ ಭಕ್ತರು ಮಾತ್ರ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಭಕ್ತಿಯ ಪರಾಕಾಷ್ಠೆ ಮೆರೆದರು. ತಾಲೂಕಿನ ಮೈಲಾಪುರ ಮಲ್ಲಯ್ಯ ಜಾತ್ರೆ ಪ್ರತಿವರ್ಷವೂ ಸಂಕ್ರಮಣ ದಿನದಿಂದ ಸುಮಾರು 5 ದಿನದ ವರೆಗೆ ನಡೆಯುತ್ತದೆ.
ಸಂಕ್ರಮಣ ದಿನ ದೇವಸ್ಥಾನದಿಂದ ಮಲ್ಲಯ್ಯ ಗಂಗಾಸ್ನಾನ, ಭವ್ಯ ಪಲ್ಲಕ್ಕಿ ಉತ್ಸವ ನಡೆಯುವ ವೇಳೆ ಅಸಂಖ್ಯಾತ ಭಕ್ತರು ಪಲ್ಲಕ್ಕಿ ಮೇಲೆ ಭಂಡಾರ ಹಾಕುವ ಮೂಲಕ ಶ್ರದ್ಧಾ ಭಕ್ತಿಯಿಂದ ನಮಿಸುವುದು ವಾಡಿಕೆ. ಈ ಬಾರಿ ಕೋವಿಡ್ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ಗ್ರಾಮದ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿತ್ತು.
ಜನರು ಒಬ್ಬೊಬ್ಬರಾಗಿ ಕಾಲ್ನಡಿಗೆ ಮೂಲಕ ಬಂದು ಭಕ್ತಿಭಾವ ಪ್ರದರ್ಶಿಸಿದರು. ಪ್ರತಿವರ್ಷವೂ ಮಧ್ಯಾಹ್ನ 12ರ ಸುಮಾರಿಗೆ ಗಂಗಾ ಸ್ನಾನ, ಪಲ್ಲಕ್ಕಿ ಉತ್ಸವ ಜರುಗುತ್ತಿತ್ತು. ಈ ಬಾರಿ ದೇವಸ್ಥಾನ ಮಂಡಳಿ ಬೆಳಿಗ್ಗೆಯೇ ಗಂಗಾ ಸ್ನಾನ ಮತ್ತು ಪಲ್ಲಕ್ಕಿ ಉತ್ಸವಗಳನ್ನು ಸರಳವಾಗಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಜನರು ಬೇರೆ ಊರುಗಳಿಂದ ಆಗಮಿಸಿ ದೇವರ ದರ್ಶನಕ್ಕೆ ಮುಂದಾದರು.
108 ಕುರಿಮರಿ ವಶಕ್ಕೆ: ಜಾತ್ರೆ ರದ್ದುಗೊಂಡಿರುವ ಸಮರ್ಪಕ ಮಾಹಿತಿಯಿಲ್ಲದೇ ಇತರೆ ಭಾಗಗಳಿಂದ ಜನರು ಪಲ್ಲಕ್ಕಿ ಮೇಲೆ ಎಸೆಯಲು ತಂದಿದ್ದ 108 ಕುರಿ-ಆಡು ಮರಿಗಳನ್ನು ಜಿಲ್ಲಾಡಳಿತ ವಶ ಪಡಿಸಿಕೊಂಡಿದೆ. ಜಿಲ್ಲಾಡಳಿತ ಮೈಲಾಪುರದಲ್ಲಿ ಬುಧವಾರದಿಂದಲೇ 5 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮುನ್ನೆಚ್ಚರಿಕೆಯಾಗಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿತ್ತು. ನಿರೀಕ್ಷೆಯಂತೆ ಭಕ್ತರು ತಂದ ಕುರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಕ್ಕೆ ಪಡೆದ ಕುರಿಗಳನ್ನು ಜ.15ರಂದು ಬೆಳಿಗ್ಗೆ 9 ಗಂಟೆಗೆ ನಗರದ ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆ ಆಸ್ಪತ್ರೆ ಆವರಣದಲ್ಲಿ ಹರಾಜು ಮೂಲಕ ಮಾರಾಟ ಮಾಡಲಾಗುವುದು ಎಂದು ಇಲಾಖೆ ಸಹಾಯಕ ನಿರ್ದೇಶಕ ಡಾ| ಶರಣಭೂಪಾಲರೆಡ್ಡಿ ನಾಯ್ಕಲ್ ಮಾಹಿತಿ ನೀಡಿದ್ದಾರೆ.
ಸಿದ್ದಲಿಂಗೇಶ್ವರ ನತ್ತ ನಡೆದ ಭಕ್ತರು
ಮಕರ ಸಂಕ್ರಾಂತಿ ನಿಮಿತ್ತ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿಯ ಮಹಾತ್ಮ ಗವಿಸಿದ್ದಲಿಂಗೇಶ್ವರ ದೇವಸ್ಥಾನದ ಜಲಪಾತಕ್ಕೆ ವಿವಿಧ ಭಾಗಗಳಿಂದ ಭಕ್ತ ಸಮೂಹ ಆಗಮಿಸಿ ಪುಣ್ಯ ಸ್ನಾನ ಮಾಡಿ, ದೇವರ ದರ್ಶನ ಪಡೆದರು. ಕೊರೊನಾ ಭಯದಿಂದ ಮೈಲಾಪುರದ ಮಲ್ಲಯ್ಯನ ಜಾತ್ರೆ ರದ್ದಾಗಿರುವುದರಿಂದ ಮಲ್ಲಯ್ಯನನ್ನು ಬಿಟ್ಟು ಸಿದ್ಧಲಿಂಗೇಶ್ವರನತ್ತ ಭಕ್ತರು ಆಕರ್ಷಿತರಾಗಿದ್ದು ಕಂಡು ಬಂತು. ಭಕ್ತರು ತಮ್ಮ ಕುಟುಂಬದೊಂದಿಗೆ ಬೆಳಗ್ಗೆಯಿಂದಲೇ ಕ್ಷೇತ್ರಕ್ಕೆ ವಾಹನಗಳ ಮೂಲಕ ಆಗಮಿಸಿದ್ದರಿಂದ ಸಂಚಾರ ದಟ್ಟಣೆಯಾಗಿ ಜಲಪಾತಕ್ಕೆ ತೆರಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.