ಕಾಪು: ಬೆಳಪು ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ, ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಐಕಳಭಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಮತ್ತು ಉಪಾಧ್ಯಕ್ಷರಾಗಿ ಶೋಭಾ ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳಪು ಗ್ರಾ.ಪಂ. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 11 ಸದಸ್ಯ ಬಲದ ಬೆಳಪು ಗ್ರಾ.ಪಂ. ನಲ್ಲಿ 8 ಮಂದಿ ಗ್ರಾಮಾಭಿವೃದ್ಧಿ ಸಮಿತಿ ಸದಸ್ಯರು, 2 ಎಸ್.ಡಿ.ಪಿ.ಐ, 1 ಪಕ್ಷೇತರ ಸದಸ್ಯರಿದ್ದಾರೆ.
ಗ್ರಾಮಾಭಿವೃದ್ಧಿ ಸಮಿತಿಯ ಮೂಲಕವಾಗಿ ತನ್ನ 20ನೇ ವಯಸ್ಸಿನಲ್ಲೇ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸಿದ್ದ ಅವರು, ಕಳೆದ 32 ವರ್ಷಗಳಿಂದ ಗ್ರಾ. ಪಂ. ಸದಸ್ಯರಾಗುತ್ತಾ ಬರುತ್ತಿದ್ದಾರೆ. ಇದರಲ್ಲಿ 27 ವರ್ಷಗಳಿಂದ ಅವಿರೋಧವಾಗಿ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗುತ್ತಿದ್ದು 27 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಗ್ರಾಮವನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಿದ್ದಾರೆ. ಈ ಬಾರಿ ದಾಖಲೆಯ ಹತ್ತನೇ ಸಲದ ಅಧ್ಯಕ್ಷರಾಗುವ ಮೂಲಕ ದೇವಿಪ್ರಸಾದ್ ಶೆಟ್ಟಿ ಅವರು ತಮ್ಮ ಹೊಸ ದಾಖಲೆಯನ್ನು ಬರೆದಿದ್ದಾರೆ.
ತೋಟಗಾರಿಕಾ ಇಲಾಖೆಯ ನಿಧೀಶ್ ಹೊಳ್ಳ ಚುನಾವಣಾಧಿಕಾರಿಯಾಗಿದ್ದು, ಪಿಡಿಒ ಪ್ರವೀಣ್ ಡಿ. ಸೋಜ ಸಹ ಚುನಾವಣಾಧಿಕಾರಿಯಾಗಿ ಸಹಕರಿಸಿದ್ದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಬೆಳಪು ಗ್ರಾಮವನ್ನು ದೇವಿಪ್ರಸಾದ್ ಶೆಟ್ಟಿ ಅವರು ಅತ್ಯಂತ ಮಾದರಿ ಗ್ರಾಮವನ್ನಾಗಿ ರೂಪಿಸಿದ್ದಾರೆ. ಇದೀಗ ದಾಖಲೆಯ ಹತ್ತನೇ ಬಾರಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗುವ ಮೂಲಕ ರಾಜ್ಯದಲ್ಲೇ ಹೊಸ ಚರಿತ್ರೆಯನ್ನು ಬರೆದಿದ್ದಾರೆ. ಈ ಹಿಂದೆ ಅವರು ಅಧ್ಯಕ್ಷರಾಗಿದ್ದಾಗ ಮುಖ್ಯಮಂತ್ರಿ ಅಂದಿನ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರಿಂದ ಶಿಲಾನ್ಯಾಸಗೊಂಡಿದ್ದ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದ್ದು ಇದೀಗ ಅದರ ಉದ್ಘಾಟನೆಯ ಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ಯವರಿಗೆ ಒದಗಿ ಬಂದಿದೆ. ಬೆಳಪು ಗ್ರಾಮದಲ್ಲಿ ಬಾಕಿ ಉಳಿದಿರುವ ಸುಮಾರು ಶೇ. 15 ರಷ್ಟು ಅಭಿವೃದ್ಧಿ ಕೆಲಸವನ್ನು ನಡೆಸುವ ಮೂಲಕ ಶೇ. 100 ರಷ್ಟು ಅಭಿವೃದ್ಧಿ ಹೊಂದಿದ ಗ್ರಾಮವಾಗಿ ಬೆಳಕು ಗ್ರಾಮವು ಮೂಡಿಬರಲಿ ಎಂದು ಶುಭ ಹಾರೈಸಿದರು.
ನೂತನ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪು ಗ್ರಾಮವನ್ನು ಶೈಕ್ಷಣಿಕ, ಕೈಗಾರಿಕೆ, ಪ್ರವಾಸೋದ್ಯಮ ಸಹಿತವಾಗಿ ಎಲ್ಲಾ ಮಾದರಿಯಲ್ಲೂ ಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಹಿಂದಿನಿಂದಲೂ ಕೆಲಸ ಮಾಡಿಕೊಂಡು ಬಂದಿದ್ದೇವೆ. ಮುಂದೆಯೂ ಅದನ್ನು ಮುಂದುವರಿಸಿತ್ತೇವೆ. ಇಲ್ಲಿನ ಅಭಿವೃದ್ಧಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ಸಹಕಾರ ಸ್ಮರಣೀಯ. ಕಾಪು ಕ್ಷೇತ್ರದ ಹಾಲಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಸಂಸದೆ ಶೋಭಾ ಕರಂದ್ಲಾಜೆ ಅವರ ಮಾರ್ಗದರ್ಶನದಲ್ಲಿ ಬೆಳಪು ಗ್ರಾಮವನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು. ಪ್ರಗತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಥಮ ಆದ್ಯತೆ ನೀಡಲಾಗುವುದು. ತಿಂಗಳೊಳಗೆ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿ, ಬೆಳಪು ಗ್ರಾಮವನ್ನು ಸಂಪೂರ್ಣ ಕಸಮುಕ್ತ ಗ್ರಾಮವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ವಿನಯ್ ಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ತಾ.ಪಂ. ಮಾಜಿ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ಕಾಂಗ್ರೆಸ್ ಮುಖಂಡರು, ಗ್ರಾ.ಪಂ. ಸದಸ್ಯರು ನೂತನ ಅಧ್ಯಕ್ಷ – ಉಪಾಧ್ಯಕ್ಷರನ್ನು ಅಭಿನಂದಿಸಿದ್ದಾರೆ.