Advertisement

ದೆವ್ವಗಳ ವಿನೋದಾವಳಿ

08:15 AM Mar 30, 2018 | |

ದೆವ್ವಗಳ ವ್ಯಾಪ್ತಿ, ವಿಸ್ತೀರ್ಣ, ಯೋಚನೆ, ಸಿಟ್ಟು, ಸೇಡು ಎಲ್ಲವೂ ಬದಲಾಗಿದೆ. ಹಿಂದೊಮ್ಮೆ ದೆವ್ವಗಳ ಚಿತ್ರ ಎಂದರೆ, ಅಲ್ಲೊಂದು ಕೊಲೆಯಾಗುತ್ತದೆ, ಆ ಆತ್ಮ ಸೇಡು ತೀರಿಸಿಕೊಳ್ಳುವುದಕ್ಕೆ ದೆವ್ವವಾಗಿ ಬಂದು ಹಲವರನ್ನು ಕಾಡುತ್ತದೆ. ಇದು ದೆವ್ವಗಳ ಚಿತ್ರಗಳ ಖಾಯಂ ಫಾರ್ಮುಲ ಆಗಿತ್ತು. ಇದೇ ಫಾರ್ಮುಲ ನಂಬಿಕೊಂಡರೆ, ಜನ ಚೇಂಜ್‌ ಕೇಳ್ತಾರೆ ಎಂದು ಚಿತ್ರರಂಗದವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಅದೇ ಕಾರಣಕ್ಕೆ, ದೆವ್ವದ ಚಿತ್ರ ಮಾಡಿದರೂ ಅಲ್ಲೊಂದು ಟ್ವಿಸ್ಟ್‌ ಕೊಡುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿಯೇ ದೆವ್ವಗಳು ಎಂದರೆ ವಿಕಾರವಾದ ಮುಖ, ಬಿಳಿ ಸೀರೆ, ಸೇಡು ತೀರಿಸಿಕೊಳ್ಳುವ ಹಪಾಹಪಿ ಎಂಬ ಮನಸ್ಥಿತಿ ಕ್ರಮೇಣ ಬದಲಾಗುತ್ತಿದೆ. ದೆವ್ವಗಳನ್ನು ವಿಭಿನ್ನವಾಗಿ ತೋರಿಸುವ ನಿಟ್ಟಿನಲ್ಲಿ, ಆ ದೆವ್ವಗಳನ್ನು ಹೋರಾಟಕ್ಕಿಳಿಸಲಾಗುತ್ತಿದೆ, ಅವುಗಳಿಂದ ಕಾಮಿಡಿ ಮಾಡಿಸಲಾಗುತ್ತಿದೆ, ಲವ್‌ ಸಹ ಮಾಡಿಸಲಾಗುತ್ತಿದೆ. ಕಳೆದ ವಾರ ಬಿಡುಗಡೆಯಾದ ಚಿತ್ರವೊಂದರಲ್ಲಿ ದೆವ್ವವೊಂದು ರೇಪ್‌ ಮಾಡುತ್ತದೆ ಎಂಬುದನ್ನು ನೀವು ನಂಬಬೇಕು. ಹೀಗೆ ಬದಲಾದ ದೆವ್ವಗಳ ಮತ್ತು ದೆವ್ವಗಳ ವಿವಿಧ ವಿನೋದಾವಳಿಗಳ ಚಿತ್ರಣ ಇಲ್ಲಿದೆ.

Advertisement

ಮಗುವಿಗೆ ಹಂಬಲಿಸೋ ದೆವ್ವ
“ಮಮ್ಮಿ ಸೇವ್‌ ಮಿ’ ಚಿತ್ರದಲ್ಲಿ ಪುಟ್ಟ ಹುಡುಗಿಯೊಬ್ಬಳು ಗೊಂಬೆಯೊಂದಿಗೆ ಮಾತಾಡುತ್ತಿರುತ್ತಾಳೆ. ಆ ಗೊಂಬೆಯೊಳಗೆ ಮಗುವಿಗಾಗಿ ಹಂಬಲಿಸುವ ಕುಮಾರಿ ಎಂಬ ದೆವ್ವ ಇರುತ್ತದೆ. ಆ ದೆವ್ವವನ್ನು, ಆ ಹುಡುಗಿಯನ್ನು ತನ್ನದೇ ಮಗಳೆಂಬಂತೆ ನೋಡಿಕೊಳ್ಳುತ್ತಿರುತ್ತದೆ.

ತಮ್ಮದೇ ಕಥೆ ಹೇಳುವ ದೆವ್ವ
“ಯಶೋಗಾಥೆ’ ಇದೂ ಕೂಡ ಒಂದು ಹೊಸ ಪ್ರಯತ್ನವಾಗಿ ಕಾಣಿಸಿಕೊಂಡ ಚಿತ್ರ. ಆ ದಿನಗಳಲ್ಲಿ ನಡೆದಂತಹ ಹೋರಾಟಗಾರರ
ಕಥೆ ಇಲ್ಲಿದೆ. 1945ರ ಕಾಲಘಟ್ಟದಲ್ಲಿ ಕಥೆ ಹೇಳುತ್ತಲೇ ಸಸ್ಪೆನ್ಸ್‌ ಇಟ್ಟು, ಆತ್ಮಗಳೇ ತಮ್ಮ ಕಥೆಯನ್ನು ನೋಡುಗರಿಗೆ ಹೇಳುತ್ತಾ ಹೋಗುವುದು ಹೊಸದೆನಿಸುತ್ತದೆ.

ಮನೆ ಕಾಯೋ ದೆವ್ವ
“ನಾನಿ’ಯಲ್ಲಿ ಒಂದು ಮನೆಯೊಳಗೆ ಸೇರಿಕೊಂಡ ಬೇಬಿ ಆತ್ಮವೊಂದು ಭಯಪಡಿಸುವ ಕಥೆ ಇಲ್ಲಿದೆ. ಟೆಸ್ಟ್‌ಟ್ಯೂಬ್‌ ಬೇಬಿಯೊಂದರ ಸ್ಟೋರಿಗೆ ಆತ್ಮದ ಟಚ್‌ ಕೊಟ್ಟು ಮಾಡಲಾಗಿರುವ ಚಿತ್ರದಲ್ಲಿ, ಬೆಚ್ಚಿಬೀಳಿಸುವ ಅಂಶ ಇರದಿದ್ದರೂ, ಒಂದು ಬಂಗಲೆಯನ್ನು ಮಾರಲು ಬಿಡದ ಆತ್ಮ, ಏನೆಲ್ಲಾ ಪರಿಪಾಟಿಲು ಪಡುತ್ತೆ ಎಂಬ ಕಥೆ ಇಲ್ಲಿದೆ.

ಸಕಲಕಲಾವಲ್ಲಭ ದೆವ್ವ
“3000′ ಚಿತ್ರದಲ್ಲಿರುವ ಆತ್ಮ ಮಲ್ಟಿಟ್ಯಾಲೆಂಟೆಡ್‌ ಎಂದರೆ ತಪ್ಪಿಲ್ಲ. ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡು ಚೀರಾಡುತ್ತಾ,
ಭರತನಾಟ್ಯ ಮಾಡಿ ತೋರಿಸಿ, ನೆಲದಲ್ಲಿ ಬಿದ್ದು ಉರುಳಾಡುವ ದೆವ್ವವನ್ನು ಏಕಪಾತ್ರಾಭಿನಯದ ದೆವ್ವ ಎಂದು ಕರೆಯಲಡ್ಡಿ ಇಲ್ಲ.

Advertisement

ರೇಪಿಸ್ಟ್‌ ದೆವ್ವ
“ಅತೃಪ್ತ’ ಚಿತ್ರದಲ್ಲಿ ಕಣ್ಣಿಗೆ ಕಾಣಿಸದ ಆತ್ಮವೊಂದು, ಆಗಷ್ಟೇ ಮದುವೆಯಾದ ಹುಡುಗಿಯೊಬ್ಬಳನ್ನು ಅನುಭವಿಸಬೇಕು ಎಂದು ಹಪಹಪಿಸುವಂಥದ್ದು. ಯಾರಿಗೂ ಹೆದರಿಸದ, ಯಾರ ಕಣ್ಣಿಗೂ ಕಾಣದ, ಕೇವಲ, ಸದ್ದು ಮಾಡುತ್ತಲೇ, ಹೆಜ್ಜೆ ಗುರುತು 
ತೋರಿಸುತ್ತಲೇ, ಕೆಲ ಸನ್ನೆಗಳ ಮೂಲಕ ಹುಡುಗಿಯನ್ನು ಅನುಭವಿಸಲು ಆ ಕಾಮುಕ ದೆವ್ವ ಯತ್ನಿಸುತ್ತದೆ. 

ಹೆದರಿ ಓಡುವ ದೆವ್ವ
“ರಿಕ್ತ’ ಚಿತ್ರದಲ್ಲಿನ ದೆವ್ವ ವಿಚಿತ್ರವಾದದ್ದು. ಆ ದೆವ್ವ ಮನೆಯೊಂದರಲ್ಲಿ ಸೇರಿಕೊಂಡು ಆಗಾಗ ಸದ್ದು ಮಾಡುತ್ತಿರುತ್ತಲೇ ಇರುತ್ತೆ. ಆದರೆ, ಮನೆಯವರು ಹೆದರುತ್ತಾರೋ ಇಲ್ಲವೋ ಗೊತ್ತಿಲ್ಲ. ಆ ಮನೆಯವರಿಗೇ ಹೆದರುವಂತಹ ದೆವ್ವ ಇಲ್ಲಿದೆ. ಒಂಥರಾ ಕಾಮಿಡಿ ದೆವ್ವವಾಗಿಯೇ ಎಲ್ಲರಿಗೂ ಕಾಣುತ್ತೆ. ಅದರ ಹಿಂದೆ ಒಂದು ಘಟನೆ ಇದೆ. ಸಾಮಾನ್ಯವಾಗಿ ಜನರನ್ನು ದೆವ್ವ ಹೆದರಿಸಬೇಕು. ಇಲ್ಲಿ
ದೆವ್ವವೇ ಜನರನ್ನು ನೋಡಿ ಗಡ ಗಡ ನಡುಗುತ್ತೆ. ನಕ್ಕು ನಗಿಸುವುದೇ ಈ ದೆವ್ವದ ಸ್ಪೆಷಾಲಿಟಿ.

ಲವ್‌ ಮಾಡೋ ದೆವ್ವ
“ಜೆಸ್ಸಿ’ ಚಿತ್ರದಲ್ಲಿ ನಾಯಕ ಸಾಯುವ ಕೆಲ ಸೆಕೆಂಡ್‌ನ‌ಲ್ಲಿ ನಾಯಕಿಯನ್ನು ನೋಡಿ ಅವಳನ್ನೇ ಪ್ರೀತಿಸಬೇಕೆಂಬ ಆಸೆ ಪಡುತ್ತಾನೆ. ಕೊನೆಗೆ, ಆತ್ಮವೇ ಆಕೆಯನ್ನು ಪ್ರೀತಿಸೋಕೆ ಶುರುಮಾಡುತ್ತೆ. ಒಂದು ಲವ್‌ ಸ್ಟೋರಿಗೆ ಕೊನೇ ಘಳಿಗೆಯಲ್ಲಿ ಶಾಕ್‌ ಇರುವಂತಹ ಸಬ್ಜೆಕ್ಟ್ ಇಲ್ಲಿದೆ. ಒಂದು ಆತ್ಮ ಇಷ್ಟಪಟ್ಟ ಹುಡುಗಿಯ ಹಿಂದೆ-ಮುಂದೆ ಓಡಾಡುವುದು, ಬೇರೆಯವರ ಸಂಗ ಮಾಡಿದರೆ
ಕೋಪಿಸಿಕೊಳ್ಳುವುದನ್ನು ಅಷ್ಟೇ ಅಂದವಾಗಿ ಇಲ್ಲಿ ತೋರಿಸಲಾಗಿದೆ. ಆದರೆ, ಅಮ್ಮನ ಮಾತಿಗೆ ಮಾತ್ರ ಆ ಗಂಡು ಆತ್ಮ
ಒಪ್ಪಿಕೊಂಡು, ತನ್ನ ಪ್ರೇಯಸಿ ಹಿಂದೆ ಸುತ್ತುವುದನ್ನು ಕೈ ಬಿಡುತ್ತದೆ.

ಮಕ್ಕಳ ಜೊತೆ ಆಟ ಆಡುವ ದೆವ್ವ
“ಮತ್ತೆ ಶ್‌’ ಚಿತ್ರದಲ್ಲಿ ಫ್ಯಾಮಿಲಿಯೊಂದು ಟ್ರಿಪ್‌ಗೆ ಹೋದ ವೇಳೆ ಮನೆಯೊಳಗಿನ ಗೊಂಬೆಯೊಂದರಲ್ಲಿ ಸೇರಿಕೊಳ್ಳುವ ಆತ್ಮ,
ಮಕ್ಕಳೊಂದಿಗೆ ಮಾತ್ರ ಆಟವಾಡುವ ಮೂಲಕ ಹೊಸದೊಂದು ಅನುಭವ ಕಟ್ಟಿಕೊಡುತ್ತದೆ. 

ಡಿವೈಡರ್‌ ಸರಿಸಿದರೆ ಕೊಲ್ಲುವ ದೆವ್ವ
ಪವನ್‌ ಕುಮಾರ್‌ ನಿರ್ದೇಶನದ “ಯೂ ಟರ್ನ್’ನಲ್ಲಿ ಒಂದು ವಿಚಿತ್ರ ಪ್ರಕರಣವಿದೆ. ಇಲ್ಲಿ ಡಬ್ಬಲ್‌ ರೋಡ್‌ ಫ್ಲೈಓವರ್‌ ಮೇಲೊಂದು
ಅಪಘಾತವಾಗಿ ಒಬ್ಬಳು ಮೃತಪಟ್ಟಿರುತ್ತಾಳೆ. ಆಕೆ ದೆವ್ವವಾಗಿ ಬಂದು, ಫ್ಲೈಓವರ್‌ ಮೇಲೆ ಡಿವೈಡರ್‌ ಸರಿಸುವ ಮೂಲಕ ಅಪಘಾತಕ್ಕೆ
ಕಾರಣವಾಗುವ ಜನರನ್ನು ಕೊಲ್ಲುತ್ತಾ ಹೋಗುತ್ತದೆ.

ಪ್ರಾಚೀನ ಕಾಲದ ವಸ್ತು ಕಾಯುವ ದೆವ್ವ
ಪಾಳುಬಿದ್ದ ಎಸ್ಟೇಟ್‌ನಲ್ಲಿ ಪ್ರಾಚೀನ ಕಾಲದ ವಸ್ತುವೊಂದು ಇರುತ್ತದೆ ಮತ್ತು ಅದನ್ನು ಕದಿಯುವುದಕ್ಕೆ ಒಂದಿಷ್ಟು ಹುಡುಗರು ಹೋಗುತ್ತಾರೆ. ಆ ವಸ್ತುವನ್ನು ಒಂದು ದೆವ್ವ ಕಾಯುತ್ತಿರುತ್ತದೆ. ಆ ವಸ್ತುವು ತನ್ನದಾದ್ದರಿಂದ, ಅದನ್ನು ಯಾರೂ ಕದಿಯಬಾರದೆಂಬ 
ಕಾರಣಕ್ಕೆ ಆ ದೆವ್ವ ಆ ವಸ್ತುವನ್ನು ಕಾಯುತ್ತಿರುತ್ತದೆ.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next