Advertisement

ಬಾವಿಯೊಳಗೆ ಪಿಶಾಚಿ

07:00 AM Nov 08, 2018 | Harsha Rao |

ಬಹಳ ಹಿಂದೆ ಹುಡುಗನೊಬ್ಬ ಆಟವಾಡುತ್ತಾ ಆ ಬಾವಿಯಲ್ಲಿ ಬಿದ್ದಿ¤ದ್ದನಂತೆ. ಮಕ್ಕಳು ಬಾವಿ ಹತ್ತಿರ ಸುಳಿದರೆ ಆತನ ಆತ್ಮ ಆಟವಾಡಲು ಕರೆಯುತ್ತದೆ ಎಂದು ಊರವರೆಲ್ಲಾ ನಂಬಿದ್ದರು. ಆದರೆ ಶಾಂತಕುಮಾರ ಅದನ್ನು ನಂಬಲಿಲ್ಲ!

Advertisement

ಒಂದಾನೊಂದು ಊರಿನಲ್ಲಿ ಹಾಳು ಬಾವಿಯೊಂದಿತ್ತು. ಆ ಬಾವಿಯಲ್ಲಿ ಪಿಶಾಚಿಯಿದೆ ಎಂಬ ನಂಬಿಕೆ ಊರವರದಾಗಿತ್ತು. ಹೀಗಾಗಿ ಆ ಬಾವಿಯ ನೀರನ್ನು ಕುಡಿಯುವುದಿರಲಿ, ಅತ್ತ ಸುಳಿಯುತ್ತಲೂ ಇರಲಿಲ್ಲ. ಬಹಳ ಹಿಂದೆ ಹುಡುಗನೊಬ್ಬ ಆಟವಾಡುತ್ತಾ ಆ ಬಾವಿಯಲ್ಲಿ ಬಿದ್ದು ಸತ್ತಿದ್ದನಂತೆ. ಮಕ್ಕಳು ಹತ್ತಿರದಲ್ಲಿ ಸುಳಿದರೆ ಆಟವಾಡಲು ಕರೆಯುತ್ತಾನೆ ಎಂದು ಊರವರೆಲ್ಲಾ ನಂಬಿದ್ದರು. ಇಂಥಾ ನೂರಾರು ವದಂತಿಗಳು ಊರಿನಲ್ಲಿ ಪ್ರಚಲಿತವಿದ್ದವು.

ಹೀಗಿರಲು ಪಕ್ಕದ ಊರಿನಿಂದ ಶಾಂತಕುಮಾರ ಎಂಬುವನೊಬ್ಬನು ಬಂದನು. ಬಾವಿಯ ಹಿನ್ನೆಲೆ ಒಂದೂ ಅವನಿಗೆ ತಿಳಿದಿರಲಿಲ್ಲ. ತುಂಬಾ ದೂರ ಪ್ರಯಾಣ ಮಾಡಿ ದಣಿದಿದ್ದ. ದಾಹ ನೀಗಿಸಲು ಬಾವಿಯ ನೀರನ್ನು ಕುಡಿಯುತ್ತಿದ್ದಾಗ, ಊರ ಹಿರಿಯರೊಬ್ಬರು ನೋಡಿಬಿಟ್ಟರು. ಅವರು “ಯಾರು ನೀನು? ಬಾವಿಯ ನೀರನ್ನು ಏಕೆ ಕುಡಿದೆ?’ ಎಂದು ತರಾಟೆಗೆ ತೆಗೆದುಕೊಂಡರು. ಶಾಂತಕುಮಾರ ನಡೆದುದೆಲ್ಲವನ್ನೂ ಹೇಳಿದನು. ಆ ಹಿರಿಯ ವ್ಯಕ್ತಿ ಬಾವಿಯ ಕತೆಯೆಲ್ಲವನ್ನೂ ವಿವರಿಸಿದರು.

ಶಾಂತಕುಮಾರನಿಗೆ ಕುತೂಹಲ ತಾಳಲಾಗಲಿಲ್ಲ. ಅವನಿಗೆ ದೆವ್ವದ ಕತೆಯ ಮೇಲೆ ನಂಬಿಕೆ ಬರಲಿಲ್ಲ. ಮರುದಿನ ತನ್ನ ಸ್ನೇಹಿತರನ್ನು ಬರಹೇಳಿದ. ಅವರೆಲ್ಲರೂ ಆ ದಿನ ರಾತ್ರಿ ಬಾವಿ ಬಳಿಯ ಪೊದೆಯೊಂದರಲ್ಲಿ ಅಡಗಿ ಕುಳಿತರು. ಸ್ವಲ್ಪ ಹೊತ್ತಿನಲ್ಲಿ ಪಿಸುಗುಡುವ ದನಿ ಕೇಳಿಸಿತು. ಕಂಬಳಿ ಹೊದ್ದ ಆಕೃತಿಗಳೆಡರು ಬಾವಿಯ ಬಳಿ ಬಂದು ಅದೇನೋ ಪಿಸುಗುಡುತ್ತಾ ಕತ್ತಲಲ್ಲಿ ಮರೆಯಾಯಿತು. ಶಾಂತಕುಮಾರನ ಸ್ನೇಹಿತರು ಇದು ದೆವ್ವವೇ ಎಂದು ತಿಳಿದರು. ಊರವರಿಗೆ ಸುದ್ದಿ ಗೊತ್ತಾದಾಗ ಸ್ನೇಹಿತರ ಭಂಡತನಕ್ಕೆ ಬೈದರು. 

ಇಷ್ಟೆಲ್ಲಾ ಆದರೂ ಶಾಂತಕುಮಾರನಿಗೆ ಮಾತ್ರ ಇದು ದೆವ್ವದ ಕೆಲಸವೆಂದು ನಂಬಿಕೆ ಬರಲಿಲ್ಲ. ಮತ್ತೂಂದು ದಿನ ರಾತ್ರಿ ತಾನೊಬ್ಬನೇ ಬಾವಿ ಬಳಿಗೆ ತೆರಳಿದ. ಹಿಂದಿನ ದಿನ ಆಗಿದ್ದಂತೆಯೇ ಕಂಬಳಿ ಹೊದ್ದ ಎರಡು ಆಕೃತಿಗಳು ಬಂದು ಹೋದವು. ನಂತರ ಶಾಂತಕುಮಾರ ಬಾವಿಗಿಳಿದು ನೋಡಿದ. ಅವನಿಗೆ ಮುತ್ತು, ರತ್ನ, ಚಿನ್ನದ ನಾಣ್ಯಗಳಿಂದ ತುಂಬಿದ ಪೆಟ್ಟಿಗೆಗಳು ಸಿಕ್ಕವು. ಸ್ವಲ್ಪ ಹೊತ್ತಿಗೆ ಮುಂಚೆ ಬಾವಿಯ ಬಳಿ ಬಂದಿದ್ದವರು ಕಳ್ಳರಾಗಿದ್ದರು ಎನ್ನುವುದು ಶಾಂತಕುಮಾರನಿಗೆ ತಿಳಿಯಿತು. ಅವನು ತನ್ನ ಗೆಳೆಯರಿಗೆ ಸುದ್ದಿ ಮುಟ್ಟಿಸಿದ.

Advertisement

ಅವರೆಲ್ಲರೂ ಜೊತೆಗೂಡಿ ಕಳ್ಳರನ್ನು ಹಿಡಿದುಹಾಕಿ ಊರವರ ಮುಂದೆ ಹಾಜರು ಪಡಿಸಿದರು. ಸತ್ಯ ಬಯಲಾಯಿತು. ಕಳ್ಳರು, ಸುಳ್ಳು ವದಂತಿಗಳನ್ನು ಹಬ್ಬಿಸಿ ತಮ್ಮ ಕಳ್ಳ ಮಾಲನ್ನು ಇಡಲು ಬಾವಿಯನ್ನು ಉಪಯೋಗಿಸುತ್ತಿದ್ದರು.  ಶಾಂತಕುಮಾರ ಮತ್ತು ಸ್ನೇಹಿತರ ಬುದ್ಧಿವಂತಿಕೆಗೆ ಊರ ಹಿರಿಯರೆಲ್ಲ ಬೆನ್ನು ತಟ್ಟಿ ಅವರಿಗೆ ಸಿಹಿ ನೀಡಿದರು.

–  ಸಾವಿತ್ರಿ ಶ್ಯಾನಭಾಗ

Advertisement

Udayavani is now on Telegram. Click here to join our channel and stay updated with the latest news.

Next