ರಾಣಿಬೆನ್ನೂರ: ಜೀವನ್ಮರಣದ ಮಧ್ಯ ಬಳಲುತ್ತಿರುವ ರೋಗಿಗಳ ಜೀವ ರಕ್ಷಣೆ ಹಿತದೃಷ್ಟಿಯಿಂದ ಪಿಕೆಕೆ ಇನ್ಸಿಟ್ಯೂಟಿವ್ ಮತ್ತು ಐಕಾಂಟ್ ಸಂಸ್ಥೆ ಆಶ್ರಯದಲ್ಲಿ ಅಂದಾಜು 1 ಕೋಟಿ ರೂ. ಮೌಲ್ಯದ ಸಾಧನಗಳನ್ನು ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.
ಹಲಗೇರಿ ರಸ್ತೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ನೂತನ ಐಸಿಯು ವಾರ್ಡ್ ಹಾಗೂ ಇತರೆ ಜೀವ ರಕ್ಷಕ ಸಾಧನ ಉದ್ಘಾಟಿಸಿ ಮಾತನಾಡಿದ ಅವರು, ವೆಂಟಿಲೇಟರ್, ಆಕ್ಸಿಜನ್ ಕಿಟ್, ಬೆಡ್ ಸೇರಿದಂತೆ ಇತರ ತುರ್ತು ಪರಿಸ್ಥಿತಿಯಲ್ಲಿ ಹೈಟೆಕ್ ಮಾದರಿಯ ಅಗತ್ಯ ಸಾಧನ ವಿತರಿಸಲಾಗಿದೆ ಎಂದ ಅವರು, ಬಡ ರೋಗಿಗಳು ಹಾಗೂ ಸಾಮಾನ್ಯರ ತುರ್ತು ಆರೋಗ್ಯದ ಹಿತದೃಷ್ಟಿಯಿಂದ ಈ ಸಾಧನ ನೀಡಲಾಗುವುದು. ಅವಶ್ಯವಿದ್ದಲ್ಲಿ ಮಾತ್ರ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದರು.
ಐಕಾಂಟ್ ಸಂಸ್ಥೆಯ ಡಾ| ಶಾಲಿನಿ ನಾಲವಾಡ ಮಾತನಾಡಿ, ರಾಜ್ಯಮಟ್ಟದ ಆಸ್ಪತ್ರೆಯಲ್ಲಿ ಇರಬೇಕಾದ ಜೀವ ರಕ್ಷಕ ಸಾಧನ ಜನರ ಹಿತದೃಷ್ಟಿಯಿಂದ ರಾಣಿಬೆನ್ನೂರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದೊರಕಿಸಿಕೊಡುವ ಸಂಕಲ್ಪ ಹೊಂದಿರುವ ಪಿಕೆಕೆ ಇನ್ಸಿಟ್ಯೂಟಿವ್ ಸಂಸ್ಥೆ ಅಧ್ಯಕ್ಷ ಪ್ರಕಾಶ ಕೋಳಿವಾಡ ಐಕಾಂಟ್ ಕಂಪನಿ ಸಹಕಾರ ಪಡೆದು ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.
ಪಿಕೆಕೆ ಇನ್ಸಿಟ್ಯೂಟಿವ್ ಅಧ್ಯಕ್ಷ ಪ್ರಕಾಶ ಕೋಳಿವಾಡ ಮಾತನಾಡಿ, ಸಂಸ್ಥೆ ಆರಂಭದಿಂದ ಇಲ್ಲಿವರೆಗೆ ಬಡವರು, ಹಿಂದುಳಿದವರು, ಸಾಮಾನ್ಯರ ಆರೋಗ್ಯದ ಹಿನ್ನೆಲೆಯಲ್ಲಿ ಅನೇಕ ಜನೋಪಯೋಗಿ ಕಾರ್ಯ ಮಾಡಲಾಗಿದೆ. ಆರೋಗ್ಯ ಸಾಧನಗಳು ಹಾಗೂ ರೋಗಿಗಳಿಗೆ ಉಚಿತ ಕಿಟ್ ಮತ್ತು ಆರೋಗ್ಯದ ಸೇವೆ ಮನೆ ಬಾಗಿಲಿಗೆ ಕೊಂಡೊಯ್ಯಲಾಗಿದೆ ಎಂದರು.
ಈ ವೇಳೆ ಡಿಎಚ್‌ಒ ಎಚ್.ಎಸ್. ರಾಘವೇಂದ್ರಸ್ವಾಮಿ, ಸಾರ್ವಜನಿಕ ಆಸ್ಪತ್ರೆ ಆಡಳಿತಾ ಧಿಕಾರಿ ಡಾ| ಆರ್.ಸಿ. ಪರಮೇಶ್ವರಪ್ಪ, ಡಾ| ರಾಜು ಶಿರೂರು, ಡಾ| ಅನಂತರಡ್ಡಿ, ಡಾ| ಲೀಲಾ, ಡಾ| ಪರಶುರಾಮ, ಡಾ| ಸುಮಾ ಸಾವುಕಾರ, ಎಸ್. ಪಿಲ್ಲರಶೆಟ್ಟಿ, ಡಾ| ನಾಗು ನಿಸ್ಕಾಳ, ಶೇಖಪ್ಪ ಹೊಸಗೌಡ್ರ, ಹೊನ್ನಪ್ಪ ಮುಡದ್ಯಾವಣ್ಣನವರ, ಗಂಗಾಧರ ಬಣಕಾರ, ಪುಟ್ಟಪ್ಪ ಮರಿಯಪ್ಪನರ, ರಾಜಣ್ಣ ಮೋಟಗಿ, ಸಣ್ಣತಮ್ಮಪ್ಪ ಬಾರ್ಕಿ ಇತರರಿದ್ದರು.