ಮುಂಬಯಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ರಿಯಾಜ್ ಭಾಟಿ ಜತೆ ನಿಕಟ ಸಂಪರ್ಕ ಇದೆ ಎಂದು ಆರೋಪಿಸುವ ಮೂಲಕ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೈಡ್ರೋಜನ್ ಬಾಂಬ್ ಸಿಡಿಸಿದ್ದಾರೆ!
ಬುಧವಾರ(ನವೆಂಬರ್ 10) ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನವಾಬ್ ಮಲಿಕ್, ರಿಯಾಜ್ ಭಾಟಿ ಯಾರು? ದಾವೂದ್ ಜತೆ ನಿಕಟ ಸಂಪರ್ಕ ಹೊಂದಿರುವ ಹಾಗೂ ನಕಲಿ ಪಾಸ್ ಪೋರ್ಟ್ ಜಾಲದ ಪ್ರಕರಣದಲ್ಲಿ ಬಂಧಿಸಲ್ಪಿಟ್ಟಿದ್ದ. ಆದರೆ ಎರಡೇ ದಿನಗಳಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ. ಆತ(ಭಾಟಿ) ನಿಮ್ಮ ಜತೆಯೇ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಬಿಜೆಪಿ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದ ಎಂದು ದೂರಿದರು.
ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ಎಳೆಯುವುದು ಬೇಕಾಗಿಲ್ಲ ಎಂದಿರುವ ಮಲಿಕ್, ಈ ರಿಯಾಜ್ ಭಾಟಿಗೆ ಪ್ರಧಾನ ಮಂತ್ರಿಗಳ ಸಮಾರಂಭದಲ್ಲಿಯೂ ಭಾಗಿಯಾಗಲು ಅವಕಾಶ ಮಾಡಿಕೊಡಲಾಗಿದೆ. ಮೋದಿ ಜತೆ ಫೋಟೋವನ್ನೂ ತೆಗೆಸಿಕೊಂಡಿದ್ದಾನೆ. ಭೂಗತ ಪಾತಕಿಗಳ ದೂರವಾಣಿಯಲ್ಲಿನ ಆದೇಶದಂತೆ ನಕಲಿ ಪಾಸ್ ಪೋರ್ಟ್ ಪ್ರಕರಣವನ್ನು ದೇವೇಂದ್ರ ಫಡ್ನವೀಸ್ ಮುಚ್ಚಿಹಾಕಿರುವುದಾಗಿ ಆರೋಪಿಸಿದರು.
ನಾಗ್ಪುರದ ನಟೋರಿಯಸ್ ಕ್ರಿಮಿನಲ್ ಮುನ್ನಾ ಯಾದವ್ ನನ್ನು ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿತ್ತು. ಬಾಂಗ್ಲಾದೇಶಿಗಳ ಅಕ್ರಮ ವಲಸೆ ಪ್ರಕರಣದಲ್ಲಿ ಶಾಮೀಲಾಗಿದ್ದ ಹೈದರ್ ಅಝಂನನ್ನು ಮೌಲಾನಾ ಆಜಾದ್ ಫೈನಾನ್ಸ್ ಕಾರ್ಪೋರೇಶನ್ ನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ಫಡ್ನವೀಸ್ ಎಂದು ಮಲಿಕ್ ಆರೋಪಿಸಿದರು.
2016ರಲ್ಲಿ ನೋಟು ಅಮಾನ್ಯೀಕರಣಗೊಂಡ ಸಂದರ್ಭದಲ್ಲಿ ದೇವೇಂದ್ರ ಫಡ್ನವೀಸ್ ಸಮೀರ್ ವಾಂಖೇಡೆ ಸಹಾಯದಿಂದ ನಕಲಿ ನೋಟುಗಳ ಜಾಲದಲ್ಲಿದ್ದವರನ್ನು ರಕ್ಷಿಸುವ ಕೆಲಸ ಮಾಡಿರುವುದಾಗಿ ಮಲಿಕ್ ಈ ಸಂದರ್ಭದಲ್ಲಿ ದೂರಿದರು.