Advertisement
ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂ ತಾನಂ ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿ ಕಾಸರಗೋಡಿನಲ್ಲಿ ಕರೆದ ಸಭೆಯಲ್ಲಿ ಜನಪ್ರತಿನಿಧಿಗಳು, ಪಂಚಾಯತ್ ಅಧ್ಯಕ್ಷರು, ರಾಜಕೀಯ, ಸಾಮಾಜಿಕ, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸೇರಿದ್ದು, ಸಭೆಯಲ್ಲಿ ರಾಣಿಪುರಂ ಪ್ರವಾಸಿ ಕೇಂದ್ರದ ಅಭಿವೃದ್ಧಿ ಸಾಧ್ಯತೆಯ ಬಗ್ಗೆ ಚರ್ಚೆಯ ಬಳಿಕ ಧನಾತ್ಮಕವಾಗಿ ಸಚಿವರು ಉತ್ತರಿಸಿದ್ದರಿಂದ ಅಭಿವೃದ್ಧಿ ಭರವಸೆ ಹುಟ್ಟಿದೆ. ಅಭಿವೃದ್ಧಿಗೆ ಅಗತ್ಯವಾದ ಸಮಗ್ರ ಯೋಜನೆ ವರದಿ ಸಿದ್ಧಪಡಿಸಿ, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಶಿಫಾರಸುಗಳೊಂದಿಗೆ ಕೇಂದ್ರಕ್ಕೆ ಸಮರ್ಪಿಸಿದರೆ ಅಗತ್ಯದ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಜೋಸೆಫ್ ಕನಕಮೊಟ್ಟ, ಆರ್.ಸೂರ್ಯನಾರಾಯಣ ಭಟ್, ಜೋಸ್ ಕೊಚ್ಚಿ ಕುನ್ನೇಲ್, ಟಿ. ಕೃಷ್ಣನ್ ಮೊದಲಾದವರು ಕಾಸರಗೋಡು ಜಿಲ್ಲೆ ಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಾಗಿ ಮನವಿ ಸಲ್ಲಿಸಿದರು. ಹೆಚ್ಚಿನ ಭೂಸ್ವಾಧೀನವಿಲ್ಲದೆ ಅಭಿವೃದ್ಧಿ ಸಾಧ್ಯತೆಯ ಕುರಿತಾಗಿ ಮನವಿಯಲ್ಲಿ ಆಗ್ರಹಿಸಲಾಗಿದೆ. ಬಳಾಂತೋಡು ಚೆಕ್ ಡ್ಯಾಂನಲ್ಲಿ ಬೋಟ್ ಸರ್ವೀಸ್, ರಾಣಿಪುರಂನಿಂದ ಅರಣ್ಯ ಪ್ರದೇಶದ ಮೂಲಕ ತಲಕಾವೇರಿ ತನಕ ಸಾಹಸಿಕ ಪ್ರವಾಸೋದ್ಯಮ, ಚಿಲ್ಡ್ರನ್ಸ್ ಪಾರ್ಕ್, ಈಜು ಕೊಳ, ತೆರೆದ ಕ್ರೀಡಾಂಗಣ, ಯೋಗ ಕೇಂದ್ರ ಮೊದಲಾದವುಗಳನ್ನು ನಿರ್ಮಿಸಲು ಸಾಕಷ್ಟು ಸಾಧ್ಯತೆಯಿದ್ದು, ಈ ಬಗ್ಗೆ ಮನವಿಯಲ್ಲಿ ಸೂಚಿಸಲಾಗಿದೆ. DPR ತಯಾರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪನತ್ತಡಿ ಪಂ. ಬಿಜೆಪಿ ಅಧ್ಯಕ್ಷ ಆರ್. ಸೂರ್ಯನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ಕೆ. ಕಣ್ಣನ್ ಪನತ್ತಡಿ ಗ್ರಾ. ಪಂ. ಕಾರ್ಯದರ್ಶಿಗಳಿಗೆ ಮತ್ತು ಪಂ. ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯತ್ ರಾಣಿಪುರಂ ಪುಳಿಕೊಚ್ಚಿಯಲ್ಲಿ ಜಾರಿಗೊಳಿಸುವ ಮಿನಿ ಜಲವಿದ್ಯುತ್ ಯೋಜನೆ, ರಾಜ್ಯ ವಿದ್ಯುತ್ ಇಲಾಖೆ ಕಳ್ಳಾರಿನಲ್ಲಿ ಸ್ಥಾಪಿಸುವ 33 ಕೆ.ವಿ. ಇಂಡೋರ್ ಸಬ್‌ಸ್ಟೇಶನ್ ಮಲೆನಾಡು ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.