Advertisement

ನಗರದಲ್ಲಿ ಕಾಮಗಾರಿಗಳಿಗೆ ವೇಗ; ವಾಹನ ಸಂಚಾರ ನಿರ್ಬಂಧ

10:37 PM May 03, 2021 | Team Udayavani |

ಮಹಾನಗರ: ಕೆ.ಎಸ್‌. ರಾವ್‌ ರಸ್ತೆಯಲ್ಲಿ ಸಂಚಾರ ಬಂದ್‌; ಹಂಪನಕಟ್ಟೆಯ ಎಂಸಿಸಿ ಬ್ಯಾಂಕ್‌ ಮುಂಭಾಗದಿಂದ ಅಲೋಶಿಯಸ್‌ ರಸ್ತೆಯೂ ಬಂದ್‌; ಬಂದರ್‌ನಲ್ಲಿ ಕೆಲವು ರಸ್ತೆಗಳಲ್ಲಿ ಸಂಚಾರ ನಿಷೇಧ; ಇನ್ನೂ ಕೆಲವೆಡೆ “ಕಾಮಗಾರಿ ನಡೆಯುತ್ತಿದೆ; ನಿಧಾನವಾಗಿ ಚಲಿಸಿ’ ಎಂಬ ಬೋರ್ಡ್‌!

Advertisement

ಲಾಕ್‌ಡೌನ್‌ ಮಾದರಿಯ ಕರ್ಫ್ಯೂ ಸಂದರ್ಭ ವಾಹನ ಸಂಚಾರ ಕಡಿಮೆ ಇರುವ ಕಾರಣದಿಂದ ಸ್ಮಾರ್ಟ್‌ಸಿಟಿ ಕಾಮಗಾರಿಗಳಿಗೆ ವೇಗ ನೀಡಿದ ಆಡಳಿತ ವ್ಯವಸ್ಥೆ ರಸ್ತೆ ಸಂಚಾರ ಬಂದ್‌ ಮಾಡಿ ಕಾಮಗಾರಿಗೆ ವೇಗ ನೀಡಿದೆ. ಹೀಗಾಗಿ ಮಂಗಳೂರಿನ ವಿವಿಧ ಕಡೆಗಳಲ್ಲಿ ಸಂಚಾರ ನಿರ್ಬಂಧ ಜಾರಿಗೊಳಿಸಲಾಗಿದೆ.

ಕೆ.ಎಸ್‌.ರಾವ್‌ ರಸ್ತೆ ಬಂದ್‌ :

ಮಳೆಗಾಲದ ವೇಳೆ ಕೆ.ಎಸ್‌.ರಾವ್‌ ರಸ್ತೆಯ ವ್ಯಾಪ್ತಿಯಲ್ಲಿ ಮಳೆನೀರು ರಸ್ತೆಯಲ್ಲೇ ನಿಂತು ಸಮಸ್ಯೆಯಾಗುತ್ತಿತ್ತು. ಯಾಕೆಂದರೆ ಇಲ್ಲಿರುವ ದೊಡ್ಡ ತೋಡು ಅಗಲ ಕಿರಿದಾಗಿರುವ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲೇ ಹೋಗುತ್ತಿತ್ತು. ಹೀಗಾಗಿ ಇಲ್ಲಿನ ದೊಡ್ಡ ತೋಡು ವಿಸ್ತರಿಸುವ ಕೆಲಸವನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿನ ಒಂದು ರಸ್ತೆಯನ್ನು ಮುಚ್ಚಿ ಕಾಮಗಾರಿ ನಡೆಸಿ, ಮತ್ತೂಂದು ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಮೂರು ಹಂತದಲ್ಲಿ ಕೆಲಸ ಮಾಡುವ ಬಗ್ಗೆ ತೀರ್ಮಾನ ಆಗಿತ್ತು. ಆದರೆ ಸದ್ಯ ವಾಹನ ಸಂಚಾರ ನಗರದಲ್ಲಿ ಕಡಿಮೆ ಇರುವ ಕಾರಣದಿಂದ ಕೆ.ಎಸ್‌.ರಾವ್‌ ರಸ್ತೆಯನ್ನೇ ಬಂದ್‌ ಮಾಡಿ ಇದೀಗ ಕಾಮಗಾರಿ ನಡೆಸಲಾಗುತ್ತಿದೆ.

ಲೈಟ್‌ಹೌಸ್‌ ರಸ್ತೆಯಲ್ಲಿಯೂ ಎಂಸಿಸಿ ಬ್ಯಾಂಕ್‌ನಿಂದ ಸಿಟಿ ಸೆಂಟರ್‌ಗೆ ಎಡಭಾಗಕ್ಕೆ ತಿರುಗುವಲ್ಲಿಯವರೆಗೆ ಮರು ಕಾಂಕ್ರೀಟ್‌ ಹಿನ್ನೆಲೆಯಲ್ಲಿ ಈ ರಸ್ತೆಯನ್ನೂ ಬಂದ್‌ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ. ಹಂಪನಕಟ್ಟೆ ವ್ಯಾಪ್ತಿಯಲ್ಲಿ ಎಂದಿನಂತೆ ಸ್ಮಾರ್ಟ್‌ಸಿಟಿಯ ಬೇರೆ ಬೇರೆ ಕಾಮಗಾರಿಗಳು ಕೂಡ ನಡೆಯುತ್ತಿವೆ. ಇನ್ನು, ಬಂದರು ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿಗಾಗಿ ಅಗೆದಿದ್ದ ರಸ್ತೆಗಳ ಪೈಕಿ ಕೆಲವು ರಸ್ತೆಗೆ ಕಾಂಕ್ರೀಟ್‌ ಹಾಕುವ ಕಾರ್ಯ ಆರಂಭಿಸಲಾಗಿದೆ. ಹೀಗಾಗಿ ಇಲ್ಲಿನ ಕೆಲವು ರಸ್ತೆಗಳಲ್ಲಿಯೂ ಸಂಚಾರ ನಿಷೇಧವಿದೆ. ಎ.ಬಿ.ಶೆಟ್ಟಿ ವೃತ್ತದಿಂದ ಪುರಭವನದವರೆಗಿನ ರಸ್ತೆಯ ಇಕ್ಕೆಲಗಳ ಕಾಮಗಾರಿಯೂ ಸದ್ಯ ನಡೆಯುತ್ತಿದೆ.  ಈ ಮಧ್ಯೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಜಪ್ಪಿನಮೊಗರುವಿನಿಂದ ಮೋರ್ಗನ್‌ಗೆàಟ್‌ ವರೆಗಿನ ರಸ್ತೆ ವಿಸ್ತರಣೆ ಈಗಾಗಲೇ ಶುರುವಾಗಿದೆ. ಹೆದ್ದಾರಿಯಿಂದ ಜಪ್ಪಿನಮೊಗರು ಎಡಭಾಗಕ್ಕೆ ತಿರುಗುವ ಪ್ರದೇಶದ  ಇಕ್ಕೆಲಗಳಲ್ಲಿ ಇದೀಗ ಕಾಮಗಾರಿ ಆರಂಭಿಸಲಾಗಿದೆ.

Advertisement

ಜತೆಗೆ ಮಂಗಳಾದೇವಿ ಶ್ರೀ ರಾಮಕೃಷ್ಣ ಮಠದಿಂದ ಪಾಂಡೇಶ್ವರ ಭಾಗಕ್ಕೆ ಬರುವ ರಸ್ತೆ ವಿಸ್ತರಣೆ ಕಾಮಗಾರಿಯೂ ನಡೆಯುತ್ತಿದೆ.

ಮಲ್ಟಿಲೆವೆಲ್‌’ ಶೀಘ್ರ ಆರಂಭ :

ಹಂಪನಕಟ್ಟೆ ಹಳೆ ಬಸ್‌ ನಿಲ್ದಾಣದಲ್ಲಿ ಮಲ್ಟಿಲೆವೆಲ್‌ ಕಾರ್‌ ಪಾರ್ಕಿಂಗ್‌ ಯೋಜನೆ ಕೂಡ ಈಗಾಗಲೇ ಅನುಮೋದನೆ ಪಡೆದಿದ್ದು, ಕಾಮಗಾರಿ ಆರಂಭಕ್ಕೆ ಏಜೆನ್ಸಿಯವರು ಸಿದ್ಧತೆ ನಡೆಸಿದ್ದಾರೆ. ಲಾಕ್‌ಡೌನ್‌ ಅಲ್ಲದಿದ್ದರೆ ಭೂಮಿ ಪೂಜೆ ನೆರವೇರಿ ಈಗಾಗಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿತ್ತು. ಆದರೂ ಸದ್ಯದ ಮಾಹಿತಿ ಪ್ರಕಾರ ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.

ಮಳೆಗಾಲ- ಸಂಚಾರ ಸವಾಲು! :

ಸದ್ಯ ವಾಹನಗಳ ಸಂಚಾರ ಕಡಿಮೆ ಇದೆ ಎಂಬ ಕಾರಣದಿಂದ ಅಲ್ಲಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಕಾಮಗಾರಿಗಳು ಪೂರ್ಣವಾಗಲು ಇನ್ನೆಷ್ಟು ದಿನ ಬೇಕು ಎಂಬುದು ಗೊತ್ತಿಲ್ಲ. ಸರಕಾರ ಈಗಾಗಲೇ ಘೋಷಿಸಿದಂತೆ ಮೇ 12ರ ವರೆಗೆ ಮಾತ್ರ ಲಾಕ್‌ಡೌನ್‌ ಮಾದರಿ ಕರ್ಫ್ಯೂ “ಸದ್ಯದ ಮಾಹಿತಿ ಪ್ರಕಾರ’ ಇರಲಿದೆ. ಬಳಿಕ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದರೆ, ರಸ್ತೆ ಕಾಮಗಾರಿ ಪೂರ್ಣವಾಗದಿದ್ದರೆ ನಗರದಲ್ಲಿ ಸಂಚಾರ ಸಮಸ್ಯೆ ಕಾಡುವ ಸಾಧ್ಯತೆಯೂ ಇದೆ. ಜತೆಗೆ ಮಳೆಗಾಲಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಕಾರಣ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕಿದೆ.

ನಗರದ ವಿವಿಧ ಭಾಗಗಳಲ್ಲಿ ಹಲವು ಕಾಮಗಾರಿಗಳನ್ನು ಕ್ಷಿಪ್ರವಾಗಿ ನಡೆಸುವ ಸಂಬಂಧ ಸೂಚನೆ ನೀಡಲಾಗಿದೆ. ವಾಹನ ಸಂಚಾರ ಕಡಿಮೆ ಇರುವ ಕಾರಣ ಕಾಮಗಾರಿಗಳಿಗೆ ವೇಗ ನೀಡಲು ಸಾಧ್ಯವಾಗಿದೆ. ಇದಕ್ಕೆ ಕಾರ್ಮಿಕರ ಸಮಸ್ಯೆ ಕೂಡ ಸದ್ಯಕ್ಕಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ಕೈಗೊಂಡ ಕಾಮಗಾರಿಗಳಿಗೆ ಸಾರ್ವಜನಿಕರು ಕೂಡ ಸಹಕಾರ ನೀಡಬೇಕಿದೆ. –ಪ್ರೇಮಾನಂದ ಶೆಟ್ಟಿ, ಮೇಯರ್‌, ಮಂಗಳೂರು ಮನಪಾ

Advertisement

Udayavani is now on Telegram. Click here to join our channel and stay updated with the latest news.

Next