ಕಾಗವಾಡ: ಶಿರಗುಪ್ಪಿ ಗ್ರಾಮದ ಜನರ ಬಹುದಿನಗಳ ಬೇಡಿಕೆ ಇಂದು ಈಡೇರಿದೆ. ಜನರ ಸಮಸ್ಯೆಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಅಗತ್ಯ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಶಿರಗುಪ್ಪಿ ಹಾಗೂ ಕುಸನಾಳ ಗ್ರಾಮಗಳ ಮಧ್ಯದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಸ್ಮಶಾನ ಭೂಮಿಗೆ ಹೋಗುವ, ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ
ನಿರ್ಮಾಣಗೊಂಡ ರಸ್ತೆ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಮಾರ್ಗದಲ್ಲಿ ಸ್ಮಶಾನ ಭೂಮಿ ಇದ್ದು, ಜನರು ಅಂತ್ಯಕ್ರಿಯೆಗೆ ಹೋಗುತ್ತಾರೆ. ಜತೆಗೆ ಇದೇ ಮಾರ್ಗದಲ್ಲಿ ಎರಡು ಶಿಕ್ಷಣ ಸಂಸ್ಥೆಗಳಿದ್ದು ಸಾವಿರಾರು ವಿದ್ಯಾರ್ಥಿಗಳು ಈ ಮಾರ್ಗವಾಗಿಯೇ ಹೋಗುತ್ತಾರೆ. ಈ ಮಾರ್ಗ ಅವ್ಯವಸ್ಥೆಯಲ್ಲಿ ಇದ್ದಿದ್ದರಿಂದ ಶಾಸಕರ ಅನುದಾನದಡಿ 40 ಲಕ್ಷ ರೂ. ವೆಚ್ಚ ಮಾಡಿ ರಸ್ತೆ ನಿರ್ಮಿಸಲಾಗಿದೆ. ಇದೇ ರೀತಿ ಗ್ರಾಮದಲ್ಲಿ ಅನೇಕ ಜನಪರ ಕಾಮಗಾರಿ ಕೈಗೊಂಡಿದ್ದು, ಸರ್ವರೂ ಸಹಕಾರ ನೀಡಬೇಕು ಎಂದರು.
ನ್ಯಾಯವಾದಿ ಅಭಯ್‌ಕುಮಾರ ಆಕಿವಾಟ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ರಸ್ತೆ ನಿರ್ಮಿಸುವಂತೆ ಜನರು ಜನಪ್ರತಿನಿಧಿ ಗಳಿಗೆ ವಿನಂತಿಸಿದ್ದರೂ ಕಾಮಗಾರಿ ಕೈಗೊಂಡಿರಲಿಲ್ಲ. ಆದರೆ ಇದೀಗ ಶಾಸಕ ಶ್ರೀಮಂತ ಪಾಟೀಲರು ತಮ್ಮ ವಿಶೇಷ ಅನುದಾನದಡಿ ಗುಣಮಟ್ಟದ ರಸ್ತೆ ನಿರ್ಮಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಿರಗುಪ್ಪಿ ಗ್ರಾಮದ ಕನ್ನಡ, ಮರಾಠಿ, ಉರ್ದು ಭಾಷೆ ಸರ್ಕಾರಿ ಶಾಲೆಗಳಿಗೆ ಹೋಗುವ ರಸ್ತೆ ಕೂಡ ಹದಗೆಟ್ಟಿತ್ತು. ತಾಪಂ ಅನುದಾನದಿಂದ ರಸ್ತೆ ನಿರ್ಮಿಸಲಾಗಿದೆ ರಸ್ತೆಗೆ ಶಾಸಕ ಶ್ರೀಮಂತ ಪಾಟೀಲ ಪೂಜೆ ಸಲ್ಲಿಸಿ ಲೋಕಾರ್ಪಣೆ ಮಾಡಿದರು.
ಗ್ರಾಪಂ ಅಧ್ಯಕ್ಷ ಗೀತಾಂಜಲಿ ಚೌಗುಲೆ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಗ್ರಾಪಂ ಉಪಾಧ್ಯಕ್ಷ ಮನೋಜ್ ವಡ್ಡರ್, ಸದಸ್ಯರಾದ ರಾಮಗೌಡ ಪಾಟೀಲ್, ಮಹಾವೀರ ಕಾತ್ರಾಳ, ಸಚಿನ್ ಕಾಂಬ್ಳೆ, ರಮೇಶ ಕಾಂಬಳೆ, ಶಿವಾನಂದ ನವೀನಾಳ, ಸುಭಾಷ ಮೊನೆ, ಇಕ್ಬಾಲ್ ಕನವಾಡೆ, ಮುರಿಗೆಪ್ಪ ಮಗದುಮ್ಮ, ಸುನೀಲ್ ನಿವಲಗಿ, ದಿಲೀಪ್ ಪಾಟೀಲ್, ಅಭಿಜಿತ್ ಪೂಜಾರಿ, ಪಿಡಿಒ ಶೈಲಶ್ರೀ ಭಜಂತ್ರಿ, ಆರೋಗ್ಯಾಧಿಕಾರಿ ಡಾ| ಅಭಿಜಿತ್ ಬಲಾಡೆ ಇದ್ದರು.