ಹುಬ್ಬಳ್ಳಿ: ಮಹಾನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ತೃಪ್ತಿ ತಂದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಡೆಯುತ್ತಿರುವ ಕಾಮಗಾರಿಗಳು ಸಾಕಷ್ಟು ವಿಳಂಬವಾಗಿದೆ. ಅಂತಹ ಕಾಮಗಾರಿಗಳ ವೇಗ ಹೆಚ್ಚಿಸಬೇಕು. ಮುಂದಿನ ಬಾರಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಗತಿ ತೋರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಿಂದಿನ ಸರಕಾರದ ಅವಧಿಯಲ್ಲಿನ ಕಾಮಗಾರಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.
ಹುಬ್ಬಳ್ಳಿ ಧಾರವಾಡ ಅಭಿವೃದ್ಧಿಗೆ ಸರಕಾರ ಹೆಚ್ಚು ಪ್ರಾಮುಖ್ಯತೆ ನೀಡಲಿದೆ. ಕುಡಿಯುವ ನೀರು ಕಡಿಮೆ ಅವಧಿಗೆ ಪೂರೈಸುವ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅವಳಿ ನಗರದ ಸ್ವಚ್ಛತೆ, ಮೂಲ ಸೌಲಭ್ಯ ಕುರಿತು ಚರ್ಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರೊಂದಿಗೆ ಈಗಾಗಲೇ ಕಾಮಗಾರಿ ಸ್ಥಳ ಪರಿಶೀಲಿಸಿ ಪ್ರತಿಯೊಂದರ ಮಾಹಿತಿ ಪಡೆದಿದ್ದೇನೆ. ಗುಣಮಟ್ಟ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸ್ಮಾರ್ಟ್‌ಸಿಟಿ ನಾಲಾ ಅಭಿವೃದ್ಧಿ ಯೋಜನೆಯಡಿ ಉಣಕಲ್ಲ ಗ್ರೀನ್ ಕಾರಿಡಾರ್ 130 ಕೋಟಿ ರೂ., ಬೆಂಗೇರಿ ಸಂತೆ ಮೈದಾನದಲ್ಲಿ ವ್ಯವಸ್ಥಿತ ಮಾರುಕಟ್ಟೆ 6.8 ಕೋಟಿರೂ, ಈಜುಗೋಳ ಅಭಿವೃದ್ಧಿಗೆ 3.3 ಕೋಟಿ ರೂ, ತೋಳನಕೆರೆ ಅಭಿವೃದ್ಧಿ 13.45 ಕೋಟಿ ರೂ. ಸೇರಿದಂತೆ ಇನ್ನು ಹಲವು ಕಾಮಗಾರಿಗಳು ನಡೆಯುತ್ತಿವೆ. ಯುಜಿಡಿ, ಕುಡಿಯುವ ನೀರು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಇನ್ನೂ 492 ಕೋಟಿ ರೂ. ಅನುದಾನ ಅವಶ್ಯವಿದೆ ಎಂದು ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ವಿವರಿಸಿದರು. ರಾಜ್ಯದ 10 ಮಹಾನಗರಗಳಲ್ಲಿ ಎಲ್‌ಇಡಿ ದೀಪ ಅಳವಡಿಸುವ ಯೋಜನೆಗೆ ಸರಕಾರ ಮುಂದಾಗಿದೆ. ರಾಜ್ಯದ ನಾಲ್ಕು ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಡಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇನೆ. ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಕಡತಗಳನ್ನು ವಿನಾಕಾರಣ ಹಿಡಿದಿಟ್ಟುಕೊಳ್ಳದಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ತಿಳಿಸಿದರು.
ಮಹಾನಗರ ವ್ಯಾಪ್ತಿಯಲ್ಲಿ ಹಿಂದೆ ನಡೆದಿರುವ ಯುಜಿಡಿ ಕಾಮಗಾರಿ ಕಳಪೆಯಿಂದ ಕೂಡಿದ್ದು, ಅವ್ಯವಹಾರ ನಡೆದಿರುವ ಕುರಿತು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ನನ್ನ ಅವಧಿಯಲ್ಲಿ ನಗರಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದ್ದೇನೆ. ಯಾವುದೇ ಒತ್ತಡ ಅಥವಾ ಲಾಭಿಗೆ ಮಣಿದು ಕೆಲಸ ಮಾಡಲ್ಲ ಎಂದರು.