ಆನೇಕಲ್: ಬೇಸಿಗೆ ಸಮೀಸುತ್ತಿದ್ದು, ಜನರಿಗೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿರುವ ಹಿನ್ನೆಲೆ, ಕೊಳವೆಬಾವಿಗಳು ಮಹತ್ತರದ ಪಾತ್ರ ವಹಿಸುತ್ತವೆ ಎಂದು ಶಾಸಕ ಬಿ. ಶಿವಣ್ಣ ಹೇಳಿದರು.
ಆನೇಕಲ್ ಪಟ್ಟಣದ ಎಲ್ಲಮ್ಮ ದೇವಾಲಯದ ಬಳಿ ಕೊಳವೆಬಾವಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾವೆಲ್ಲರೂ ಕೂಡ ನೀರನ್ನು ಮಿತವಾಗಿ ಬಳಸಬೇಕು. ನೀರು ವ್ಯರ್ಥವಾಗಿ ಹೋಗುತ್ತಿದ್ದರೆ ಅದರ ಸುರಕ್ಷತೆಗೆ ಬೇಕಾದ ಕ್ರಮವನ್ನು ಎಲ್ಲರೂ ಕೈಗೊಳ್ಳಲು ಮುಂದಾಗಬೇಕು. ಪರಿಸರ ರಕ್ಷಣೆ ಆದಾಗ ಮಾತ್ರ ನಮ್ಮ ಉಳಿವು ಸಾಧ್ಯ ಎಂದರು.
ಆನೇಕಲ್ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ. ಪುರಸಭೆಯಿಂದ ಈಗಾಗಲೇ ರಸ್ತೆ ಕುಡಿಯುವ ನೀರು, ಚರಂಡಿ, ಬೀದಿದೀಪದ ವ್ಯವಸ್ಥೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪಕ್ಷಭೇದ ಮರೆತು ಅಭಿವೃದ್ಧಿ: ಪುರಸಭಾ ಅಧ್ಯಕ್ಷ ಎನ್.ಎಸ್. ಪದ್ಮನಾಭ ಮಾತನಾಡಿ, ನನ್ನ ಅವಧಿಯಲ್ಲಿ ಆನೇಕಲ್ ಪುರಸಭೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಬೇಕಾದ ಎಲ್ಲಾ ರೀತಿಯ ಕೆಲಸ ನಿರಂತರವಾಗಿ ಮಾಡಿಕೊಂಡು ಬರಲಾಗಿದೆ. ಪಕ್ಷಭೇದ ಮರೆತು ಎಲ್ಲಾ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಹಸಿ ಕಸ, ಒಣ ಕಸ ವಿಂಗಡಣೆ ಈಗಾಗಲೇ ಪುರಸಭೆಯಿಂದ ಮಾಡುತ್ತಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ದೊಡ್ಡಮಟ್ಟದಲ್ಲಿ ಬೇಕಾಗಿದೆ. ಸ್ವತ್ಛತೆ ಮಾಡಲು ಪುರಸಭೆಯ ವಾಹನ ಮನೆಯ ಬಳಿ ಬರುತ್ತದೆ. ಇದಕ್ಕೆ ಕಸವನ್ನು ಹಾಕುವ ಮೂಲಕ ಸ್ವತ್ಛತೆಗೆ ಹೆಚ್ಚಿನ ಸಹಕಾರವನ್ನು ನೀಡಬೇಕು ಎಂದರು.
ಕೇಂದ್ರ ಸಚಿವರ ಸಹಕಾರ ಮೆಚ್ಚುವಂತದ್ದು: ಬಿಜೆಪಿ ಮುಖಂಡ ರಘು ಮಾತನಾಡಿ, ಆನೇಕಲ್ ಪಟ್ಟಣದ ಯಲ್ಲಮ್ಮ ದೇವಾಲಯದ ಬಳಿ ರಸ್ತೆ ಒಳಚರಂಡಿ ಹಾಗೂ ಕೊಳವೆಬಾವಿ ಕಾಮಗಾರಿಗೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಕೊಳಚೆ ನಿರ್ಮೂಲನ ಮಂಡಳಿಯಿಂದ 40 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲು ಒತ್ತಡ ತಂದಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಿದ ಕೇಂದ್ರ ಸಚಿವರ ಕಾರ್ಯಕ್ಕೆ ನಾವು ಧನ್ಯವಾದಗಳು ತಿಳಿಸಲೇಬೇಕು ಎಂದರು.
ಹಿರಿಯ ಕಾಂಗ್ರೆಸ್ ಮುಖಂಡ ಬಿ.ಪಿ.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಗೌಡ, ಟೌನ್ ಅದ್ಯಕ್ಷ ಜಿ. ಗೋಪಾಲ್, ಬಿಜೆಪಿ ಆನೇಕಲ್ ಮಂಡಳ ಅಧ್ಯಕ್ಷ ಮುನಿರಾಜು ಗೌಡ, ಪುರಸಭಾ ಸದಸ್ಯ ಬಿ.ನಾಗರಾಜು, ಮುನಾವರ್, ಸುರೇಶ್, ಶ್ರೀಕಾಂತ್, ಭಾಗ್ಯ, ಶ್ಯಾಮಲಾ, , ಸುಧಾ, ಗಂಗಾಧರ್, ಕೃಷ್ಣ, ನಾಮ ನಿರ್ದೇಶಕ ಸದಸ್ಯರಾದ ರೂಪ, ಮಂಜುನಾಥ್, ಮಂಜುನಾಥ್ ರೆಡ್ಡಿ, ಡಿ.ವಿ. ಮುರಳಿ ಮತ್ತಿತರರು ಇದ್ದರು.