Advertisement

ಅಭಿವೃದ್ಧಿ ಕುಂಠಿತ: ಅಧಿಕಾರಿ ತರಾಟೆ

03:56 PM Apr 22, 2017 | Team Udayavani |

ಚಿಂಚೋಳಿ: ಅನೇಕ ಯೋಜನೆಗಳ ಅಡಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮಕ್ಕೆ ಅಭಿವೃದ್ಧಿ ಕಾಮಗಾರಿಗಳನ್ನು ನೀಡಲಾಗಿದ್ದರೂ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ನಿಗಮದ ಜೆಇ ಮೂಸಾ ಖಾದ್ರಿ ಅವರನ್ನು ಸಾಮಾನ್ಯ ಸಭೆಯಲ್ಲಿ ತರಾಟೆ ತೆಗೆದುಕೊಳ್ಳಲಾಯಿತು. 

Advertisement

ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 5ನೇ ಸಾಮಾನ್ಯ ಸಭೆಯಲ್ಲಿ ತಾಪಂ ಅಧಿಧಿಕಾರಿ ಅನೀಲಕುಮಾರ ರಾಠೊಡ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಮಾತನಾಡಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಅಭಿವೃದ್ಧಿ ಕೆಲಸಗಳಿಗಾಗಿ ಕೋಟ್ಯಂತರ ರೂ. ನೀಡಲಾಗಿದೆ.

ಆದರೆ ಕೆಲಸಗಳು ಚುರುಕಿನಿಂದ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 100ಕ್ಕೂ ಹೆಚ್ಚು ಕೆಲಸಗಳು ಪ್ರಗತಿಯಿಲ್ಲದೆ ಕುಂಠಿತಗೊಂಡಿವೆ. ಎಇಇ ಕಳೆದ ಆರು ತಿಂಗಳಿಂದ ಸಾಮಾನ್ಯ ಸಭೆಗೆ ಬರುತ್ತಿಲ್ಲ. ನೀವು ಇಲಾಖೆ ಜೆಇ ಅಲ್ಲ ಮೇಸ್ರಿಯಾಗಿದ್ದಿರಿ. ನಿಮಗೆ ಕೆಲಸಗಳ ಮಾಹಿತಿ ಸರಿಯಾಗಿಲ್ಲ. 

ಸಭೆಯಿಂದ ಹೊರಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಕೈಗಾರಿಕಾ ವಿಸ್ತೀಣಾಧಿಧಿಕಾರಿ ನಳಿನಿ ಅವರು ಇಲಾಖೆ ಪ್ರಗತಿ ಬಗ್ಗೆ ಹೇಳುವ ಸಂದರ್ಭದಲ್ಲಿ ಕೋಡ್ಲಿ ತಾಪಂ ಸದಸ್ಯ ಗೌರಮ್ಮ ಚೆಂಗಟಿ ಮಾತನಾಡಿ, ನಾವು ನಿಮ್ಮ ಭಾಷಣ ಕೇಳಲಿಕ್ಕೆ ಬಂದಿಲ್ಲ. ಸರಕಾರದ ಯೋಜನೆಗಳ ಪ್ರಗತಿ ಎಷ್ಟು ಮಾಡಿದ್ದೀರಿ ಎಂಬುದನ್ನು ತೋರಿಸಿ ಎಂದರು. 

ಇದಕ್ಕೆ ರಾಮರಾವ್‌ ರಾಠೊಡ, ಪ್ರೇಮಸಿಂಗ್‌ ಜಾಧವ್‌ ಧ್ವನಿಗೂಡಿಸಿದರು. ತಾಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ ಜನರು ಕುಡಿಯುವ ನೀರಿಗಾಗಿ ತೊಂದರೆ ಪಡಬೇಕಾಗಿದೆ. ಬಹುಗ್ರಾಮ ಯೋಜನೆ ಇನ್ನು ಪೂರ್ಣಗೊಂಡಿಲ್ಲ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ.

Advertisement

ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹ್ಮದ ಹುಸೇನ ನಾಯಕೋಡಿ ಎಇ ಕಲಿಮೋದ್ದೀನ ಅವರಿಗೆ ಸೂಚಿಸಿದರು. ಪಶು ಇಲಾಖೆ ವೈದ್ಯಾಧಿಧಿಕಾರಿ ಡಾ| ಧನರಾಜ ಬೊಮ್ಮ ಮಾತನಾಡಿ, ದನಕರುಗಳ ಮೇವಿಗಾಗಿ 1600 ಹುಲ್ಲಿನ ಪ್ಯಾಕೇಟ್‌ ಮತ್ತು ಮೆಕ್ಕೆ ಜೋಳ 800 ಪ್ಯಾಕೇಟ್‌ ಬಂದಿವೆ. 

ರೈತರಿಂದ ಪಹಣಿ ಮತ್ತು ಆಧಾರ ಸಂಖ್ಯೆ ಪಡೆದುಕೊಂಡು ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಸಾಮಾಜಿಕ ಅರಣ್ಯಾಧಿಧಿಕಾರಿ ಸಂಜೀವಕುಮಾರ ಚವ್ಹಾಣ ಮಾತನಾಡಿ, 2016-17ನೇ ಸಾಲಿನಲ್ಲಿ 14,189 ಸಸಿಗಳನ್ನು ರಸ್ತೆ ಬದಿಯಲ್ಲಿ ಹಚ್ಚಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 28 ಸಾವಿರ ಸಸಿಗಳನ್ನು ನೆಡಲಾಗಿದೆ. 

ತಾಜಲಾಪುರ, ಕೊಳ್ಳುರ ಗ್ರಾಮದ ಬಳಿ ನರ್ಸರಿಯಲ್ಲಿ ಒಂದು ಲಕ್ಷ ಸಸಿ ಬೆಳೆಸಲಾಗುತ್ತಿದೆ ಎಂದರು. ತಾಲೂಕಿನ ಐನಾಪುರ, ಚಿಮ್ಮನಚೋಡ, ಗಡಿಲಿಂಗದಳ್ಳಿ, ಹೇಮಲಾ ನಾಯಕ ತಾಂಡಾಗಳಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿವೆ. ಗಾಳಿ ರಭಸವಾಗಿ ಬೀಸಿದಾಗ ತಂತಿಗಳು ಒಂದಕ್ಕೊಂದು ತಗುಲಿ ಬೆಂಕಿ ಹತ್ತಿ, ಹುಲ್ಲಿನ ಬಣಮೆಗಳು ಸುಟ್ಟಿವೆ.

ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಐನಾಪುರ ತಾಪಂ ಸದಸ್ಯ ಪ್ರೇಮಸಿಂಗ ಜಾಧವ್‌ ಒತ್ತಾಯಿಸಿದರು. ಬಿಇಒ ಜರ್ನಾಧನರೆಡ್ಡಿ ಮಾಲಿಪಾಟೀಲ ಮಾತನಾಡಿ, ತಾಲೂಕಿನಲ್ಲಿ ಬೇಸಿಗೆ ಸಂಭ್ರಮ ಯೋಜನೆ ಅಡಿಯಲ್ಲಿ 57 ಹಿರಿಯ ಪ್ರಾಥಮಿಕ ಶಾಲೆಗಳು ಆಯ್ಕೆಗೊಂಡಿವೆ ಎಂದರು.

ಪಿಆರ್‌ಇ ಎಇಇ ಅಶೋಕ ತಳವಾಡೆ, ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಂದ್ರಕುಮಾರ, ಸಿಡಿಪಿಒ ಜಗನ್ನಾಥ ಗಾದಾ, ಜೆಸ್ಕಾಂ ಸಿಂಧೆ, ಮೀನುಗಾರಿಕೆ ಸಹಾಯಕ ನಿರ್ದೇಶಕ ಚಿತಂಬರರಾವ್‌, ಸಮಾಜ ಕಲ್ಯಾಣ ಇಲಾಖೆ ಪ್ರಭುಲಿಂಗ ತಮ್ಮ ಇಲಾಖೆ ಪ್ರಗತಿ ವಿವರಿಸಿದರು. 

ತಾಪಂ ಸದಸ್ಯರಾದ ಹಣಮಂತರಾವ ರಾಜಗಿರಿ, ಚಿರಂಜೀವಿ ಶಿವರಾಮಪುರ, ಬಸವಣ್ಣಪ್ಪ ಕುಡಹಳ್ಳಿ, ಜಗನ್ನಾಥ ಇದಲಾಯಿ, ಉಮಣಿಬಾಯಿ, ಬಲರಾಮ ನಾಯಕ ಭಾಗವಹಿಸಿದ್ದರು. ತಾಪಂ ಇಒ ಅನೀಲಕುಮಾರ ರಾಠೊಡ ಸ್ವಾಗತಿಸಿದರು. ರಾಜೂ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next