ರಟ್ಟಿಹಳ್ಳಿ: ತಾಲೂಕಿನಲ್ಲಿ ನಡೆದ ಅಭಿವೃದ್ಧಿ ಪರ ಯೋಜನೆಗಳೇ ನಮಗೆ ಶ್ರೀರಕ್ಷೆಯಾಗಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ರಟ್ಟಿಹಳ್ಳಿ ತಾಲೂಕು ಮಾಸೂರಿನ ಜಗಜ್ಯೋತಿ ಬಸವೇಶ್ವರ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ಕೇಂದ್ರ-ರಾಜ್ಯ ಸರ್ಕಾರಗಳು ರೈತರ ಖಾತೆಗೆ ನೇರವಾಗಿ 10 ಸಾವಿರ ರೂ. ಜಮಾ ಮಾಡಿ ರೈತರ ಸಂಕಷ್ಟದಲ್ಲಿ ಪಾಲುದಾರರಾಗಿ ಕಾರ್ಯ ನಿರ್ವಹಿಸಿವೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದು, ಇದು ಬಿಜೆಪಿ ಸರ್ಕಾರದ ಸಾಧನೆ ಎಂದರು.
ಹಿರೇಕೆರೂರು ಕ್ಷೇತ್ರದಲ್ಲಿ ಕುಮದ್ವತಿ ನದಿಗೆ ಚೆಕ್ ಡ್ಯಾಂ ನಿರ್ಮಾಣ, ಎಲ್ಲಾ ಹಳ್ಳಿಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆ ಸಿದ್ಧವಾಗಿದೆ. ಮಡ್ಲೂರು ಏತ ನೀರಾವರಿ, ಹಿರೇಕೆರೂರ, ರಟ್ಟಿಹಳ್ಳಿಯಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ 10 ಕೋಟಿ ರೂ., ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ., ಮಾಸೂರಿನ ಸರ್ವಾಂಗೀಣ ಅಭಿವೃದ್ಧಿಗೆ 25 ಕೋಟಿ ರೂ., ರಟ್ಟಿಹಳ್ಳಿಯಲ್ಲಿ ಅಗ್ನಿಶಾಮಕ ದಳ ಕಚೇರಿ ನಿರ್ಮಾಣಕ್ಕೆ 3 ಕೋಟಿ ರೂ., ಹಿರೇಕೆರೂರಿನಲ್ಲಿ ಕಾರ್ಮಿಕ ಭವನ ನಿರ್ಮಾಣ, ಕೋವಿಡ್‌ನಿಂದ ಮೃತಪಟ್ಟ 130 ಕುಟುಂಬಗಳಿಗೆ 50 ಸಾವಿರ ರೂ. ಧನಸಹಾಯ ನೀಡಲಾಗಿದೆ. ಇಷ್ಟು ದಿನ ಮಾಡಿದ ಕೆಲಸಕ್ಕೆ ಮುಂದಿನ ದಿನಗಳಲ್ಲಿ ನಿಮ್ಮ ಮತಗಳ ಮೂಲಕ ಕೂಲಿ ಕೇಳುತ್ತೇನೆ. ಆಗ ಕೊಡೋ ಕೆಲಸ ನಿಮ್ಮದು ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅರುಣಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಪಿ.ಸಿದ್ಧರಾಜು, ಲಿಂಗರಾಜ ಚಪ್ಪರದಹಳ್ಳಿ, ಪಾಲಾಕ್ಷಗೌಡ ಪಾಟೀಲ, ಮಹೇಶ ಗುಬ್ಬಿ, ದೇವರಾಜ ನಾಗಣ್ಣನವರ, ಶಂಕರ ಚೆನ್ನಗೌಡ್ರ, ಮಂಜುನಾಥ ತಳವಾರ, ರಾಜು ನಾಯಕ, ಬಸವರಾಜ ಚಲವಾದಿ, ವಿವಿಧ ಗ್ರಾಮದ ಮುಖಂಡರು ಇದ್ದರು.
ರಾಜ್ಯದ ಅಭಿವೃದ್ಧಿಗೆ ಆದ್ಯತೆ: ಸಚಿವ ಶಿವರಾಮ ಹೆಬ್ಬಾರ
ರಟ್ಟಿಹಳ್ಳಿ: ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದ್ದು, ಕೃಷಿ ಕ್ಷೇತ್ರದ ಅಭಿವೃದ್ಧಿ ಜತೆಗೆ ಇಡೀ ರಾಜ್ಯ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ನಮಗೆ ಶ್ರೀ ರಕ್ಷೆಯಾಗಲಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಹೇಳಿದರು.
ರಟ್ಟಿಹಳ್ಳಿ ತಾಲೂಕು ಮಾಸೂರಿನ ಜಗಜ್ಯೋತಿ ಬಸವೇಶ್ವರ ಸಾಂಸ್ಕೃತಿಕ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚು ನೆರವು ನೀಡಿದೆ. ಶಿಕ್ಷಣ ಕ್ರಾಂತಿ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ, ಕಾರ್ಮಿಕರ ಮಕ್ಕಳಿಗೆ ವಿಶೇಷ ಸೌಲಭ್ಯ ನೀಡಿದ್ದು ನಮ್ಮ ಸರ್ಕಾರದ ಸಾಧನೆಯಾಗಿದೆ ಎಂದರು. ಇಂದಿನ ಬೂತ್ ಮಟ್ಟದ ಸಭೆಯ ಮೂಲಕ ಪಕ್ಷದ ಸಂಘಟನೆ ಮಾಡಲಾಗುತ್ತಿದೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.