ಆಳಂದ: ಅಭಿವೃದ್ಧಿ ಕಾಮಗಾರಿಗಳನ್ನು ಕಟ್ಟುನಿಟ್ಟಾಗಿ ಕೈಗೊಂಡು ಸಮರ್ಪಕವಾಗಿ ವರದಿ ಸಲ್ಲಿಸಬೇಕು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಕಚೇರಿಯಲ್ಲಿ ಗುರುವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ, ಬಿಸಿಎಂ, ಕೈಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಇಲಾಖೆಯಲ್ಲಿ ಬರುವ ಯೋಜನೆಗಳ ಲಾಭವನ್ನು ಜನರಿಗೆ ತಲುಪಿಸಬೇಕು ಎಂದು ಸೂಚಿಸಿದರು.
ಸಹಾಯಕ ನಿರ್ದೇಶಕ ಶಶಾಂಕ ಶಹಾ ಇಲಾಖೆ ವರದಿ ಮಂಡಿಸುವಾಗ ಮಧ್ಯ ಪ್ರವೇಶಿಸಿದ ಜಿಪಂ ಸದಸ್ಯ ಶರಣಗೌಡ ಪಾಟೀಲ, ಶಾಸಕರ ಆಪ್ತ ಕಾರ್ಯದರ್ಶಿ ನರೋಣಾ ವ್ಯಾಪ್ತಿಯ ಕ್ಷೇತ್ರಕ್ಕೆ ಸಂಬಂಧಿಸುವ ಅಭಿವೃದ್ಧಿಯ ಪ್ರಗತಿಯನ್ನು ಓದಬೇಕು. ತಾಲೂಕಿನ ಒಟ್ಟು ವರದಿಯ ಬದಲು ಕ್ಷೇತ್ರಕ್ಕೆ ಸಂಬಂಧಿಸಿದ ವರದಿಯನ್ನು ಹೇಳಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ತಾಪಂ ಇಒ ಡಾ| ಸಂಜಯ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ ಮುರುಡ್, ತಾಪಂ ಸದಸ್ಯ ಗೋರಕನಾಥ ಸಜ್ಜನ್ ಮಾಹಿತಿ ಕಲೆಹಾಕಿದರು. ಜಿಪಂ ಸದಸ್ಯ ಶರಣಗೌಡ ಪಾಟೀಲ ಮಾತನಾಡಿ, ನರೋಣಾ ವಲಯದಲ್ಲಿ ಮುಂಗಾರು ಹಂಗಾಮಿನಲ್ಲಿ ಉದ್ದು, ಹೆಸರು ಕಳಪೆ ಬೀಜವನ್ನು ನೀಡಿದ್ದರಿಂದ ರೈತರಿಗೆ ಹಾನಿಯಾಗಿದೆ.
ಈ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಶಾಂಕ ಶಹಾ ಅವರನ್ನು ಪ್ರಶ್ನಿಸಿದರು. ಈಗಾಗಲೇ ಪರಿಶೀಲನೆ ತಂಡದಿಂದ ವರದಿ ಬಂದಿದ್ದು, ಬೀಜದ ದೋಷವಿದೆ ಎಂದು ಸ್ಪಷxಪಡಿಸಲಾಗಿದೆ. ರೈತರು ಗ್ರಾಹಕರ ವೇದಿಕೆಯ ಮೋರೆ ಹೋಗಬಹುದು ಎಂದರು.
ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ ಫುಲಾರ, ಲೋಕೋಪಯೋಗಿ ಅಧಿಕಾರಿ ಹಾವೇಂದ್ರ ಪುಣ್ಯಶೆಟ್ಟಿ, ಸಿಡಿಪಿಒ ತುಳಸಾಬಾಯಿ ಮಾನು, ಜಿಪಂ ಅಧಿಕಾರಿ ತಾನಾಜಿ ವಾಡೇಕರ್, ಅಕ್ಷರ ದಾಸೋಹ ಅಧಿಕಾರಿ ಠಾಕೂರ ಚವ್ಹಾಣ, ಕೈಗಾರಿಕೆ ಅಧಿಕಾರಿ, ಈ.ಸಾ. ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ತಮ್ಮ ಇಲಾಖೆ ವರದಿ ಮಂಡಿಸಿದರು.