Advertisement

ಅಭಿವೃದ್ಧಿ ಯೋಜನೆ ವಿರೋಧವವರ ಲೆಕ್ಕಿಸಲ್ಲ

12:57 PM May 31, 2017 | |

ಬೆಂಗಳೂರು: “ವಿರೋಧ ಪಕ್ಷಗಳು ಎಷ್ಟೇ ವಿರೋಧ ಮಾಡಲಿ, ಬೆಂಗಳೂರಿನ ಅಭಿವೃದ್ಧಿಗಾಗಿ ಸರ್ಕಾರ ಹಾಕಿಕೊಂಡಿರುವ ಯೋಜನೆಗಳನ್ನು ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

Advertisement

ಸ್ಟೀಲ್‌ ಬ್ರಿಡ್ಜ್ ಯೋಜನೆಯ ಕುರಿತು ಬಿಜೆಪಿ ಮಾಡಿದ್ದ ಆರೋಪಕ್ಕೆ ಪರೋಕ್ಷವಾಗಿಯೇ ತಿರುಗೇಟು ನೀಡಿರುವ ಸಿದ್ದರಾಮ್ಯ, “ರಾಜಧಾನಿ ಬೆಂಗಳೂರಿಗೆ ಹೊಸ ರೂಪ ನೀಡಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ವಿರೋಧ ಪಕ್ಷಗಳಿಂದ ರಾಜಕೀಯಪ್ರೇರಿತವಾಗಿ ಎಷ್ಟೇ ವಿರೋಧ, ಟೀಕೆ ಬಂದರೂ  ಆ ಕಾರ್ಯಗಳಿನ್ನು ನಿಲ್ಲದು,’ ಎಂದಿದ್ದಾರೆ. 

ನಗರದ ರಾಜಾಜಿನಗರ ಬಳಿಯ ಡಾ.ರಾಜ್‌ಕುಮಾರ್‌ ರಸ್ತೆಯ ವಿವೇಕಾನಂದ ಕಾಲೇಜು ಸಮೀಪ ನಿರ್ಮಿಸಿರುವ ಅಂಡರ್‌ಪಾಸ್‌ಅನ್ನು ಮಂಗಳವಾರ ಉದ್ಘಾಟಿಸಿದ ಅವರು,  ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. “ನಾವು ಅಭಿವೃದ್ಧಿ ಯೋಜನೆ ರೂಪಿಸಿದರೆ ಕೆಲವರು ಉದ್ದೇಶಪೂರ್ವಕವಾಗಿ ವಿರೋಧಿಸಿ ಅಡ್ಡಿ ಪಡಿಸುವ ಕೆಲಸ ಮಾಡುತ್ತಿದ್ದಾರೆ.

ಆದರೆ, ಅಂತಹ ಪ್ರಯತ್ನಗಳು ಎಷ್ಟೇ ನಡೆದರೂ ಬೆಂಗಳೂರಿನ ಚಿತ್ರಣ ಬದಲಿಸುವಂತಹ ಅಭಿವೃದ್ಧಿ ಯೋಜನೆ ಜಾರಿಗೊಳಿಸುವ ಕೆಲಸ ಮುಂದುವರಿಯಲಿದೆ. ಅಭಿವೃದ್ಧಿಗೆ ಪೂರಕವಾದ ಟೀಕೆ, ವಿರೋಧಗಳು ಪ್ರಜಾಪ್ರಭುತ್ವದ ಬೆಳೆವಣಿಗೆಗೆ ಪೂರಕವಾಗಿರುತ್ತದೆ. ಆದರೆ ಈಗ ಕೇಳಿಬರುತ್ತಿರುವ ವಿರೋಧಗಳು ರಾಜಕೀಯ ಪ್ರೇರಿತವಾಗಿವೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯವಿಲ್ಲ: ರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ತೋರುವುದಿಲ್ಲ. ಇದಕ್ಕೆ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ನಿರ್ಮಾಣವಾಗಿರುವ ಈ ಅಂಡರ್‌ಪಾಸ್‌ ಸಾಕ್ಷಿ. ಈ ರಸ್ತೆಯು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹಾಗೂ ಜೆಡಿಎಸ್‌ ಶಾಸಕ ಕೆ.ಗೋಪಾಲಯ್ಯ ಅವರ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಹಾಗಿದ್ದರೂ ಜನರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ನೋಡದೆ ಅಂಡರ್‌ಪಾಸ್‌ ನಿರ್ಮಿಸಲಾಗಿದೆ. ಇದರಿಂದ ತುಮಕೂರು ರಸ್ತೆ ಹಾಗೂ ಕೇಂದ್ರ ಭಾಗದ ಪ್ರದೇಶದ ನಡುವಿನ ಸಂಚಾರ ಸುಗಮವಾಗಲಿದೆ. ಇಂತಹ ಕಾಮಗಾರಿಗಳನ್ನು ಕೈಗೊಂಡಾಗ ಅನ್ಯ ಪಕ್ಷಗಳ ಶಾಸಕರು ಸತ್ಯವನ್ನು ಮರೆಮಾಚದೆ ವಸ್ತುಸ್ಥಿತಿಯನ್ನು ಜನರಿಗೆ ತಿಳಿಸಬೇಕು ಎಂದು ತಿಳಿಸಿದರು.

Advertisement

ಜನ ಸಮರ್ಪಕ ತೆರಿಗೆ ಕೊಡಬೇಕು: ರಾಜ್ಯ ಸರ್ಕಾರದ ವತಿಯಿಂದ ಕೈಗೊಳ್ಳುವ ಪ್ರತಿಯೊಂದು ಅಭಿವೃದ್ಧಿ ಯೋಜನೆಯಲ್ಲೂ ಜನರು ಪಾಲುದಾರರಾಗಿರುತ್ತಾರೆ. ಹಾಗಾಗಿ ಅವರೂ ಸಮರ್ಪಕವಾಗಿ ಆಸ್ತಿ ತೆರಿಗೆ ಪಾವತಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಲಕ್ಷ ಆಸ್ತಿಗಳಿದ್ದು, ಎಲ್ಲ ಆಸ್ತಿದಾರರು ಸೂಕ್ತ ತೆರಿಗೆ ಪಾವತಿಸಿದರೆ ಪಾಲಿಕೆ ಆದಾಯ ಏರಿಕೆಯಾಗಲಿದೆ. ಬಿಬಿಎಂಪಿಯು 10,000 ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದರೂ ಆಸ್ತಿ ತೆರಿಗೆಯಿಂದ ಸಂಗ್ರಹವಾಗುವುದು 2000 ಕೋಟಿ ರೂ. ಮಾತ್ರ. ಉಳಿದ 8000 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಪಾಲಿಕೆಗೆ ನೀಡಬೇಕಾದ ಸ್ಥಿತಿ ಇದೆ ಎಂದು ಹೇಳಿದರು. ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಶಾಸಕರಾದ ಕೆ.ಗೋಪಾಲಯ್ಯ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮೇಯರ್‌ ಜಿ.ಪದ್ಮಾವತಿ, ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಇತರರು ಉಪಸ್ಥಿತರಿದ್ದರು.

ಮೆಟ್ರೋ ಮೊದಲ ಹಂತ: ಜೂನ್‌ ಅಂತ್ಯಕ್ಕೆ ಪೂರ್ಣ: “ನಮ್ಮ ಮೆಟ್ರೋ’ ಮೊದಲ ಹಂತದ 42 ಕಿ.ಮೀ. ಉದ್ದದ ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜೂನ್‌ ಅಂತ್ಯದೊಳಗೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಮೊದಲ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಮೆಟ್ರೋ ಸಂಚಾರ ಆರಂಭವಾದ ಬಳಿಕ ನಿತ್ಯ ಐದು ಲಕ್ಷಕ್ಕೂ ಹೆಚ್ಚು ಜನ ಮೆಟ್ರೋ ಬಳಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗೋಪಾಲಯ್ಯ ಹಳೇ ಗಿರಾಕಿ: ಸಮಾರಂಭದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ ಶಾಸಕ ಗೋಪಾಲಯ್ಯ ಅವರನ್ನು ಕುರಿತು ಹಾಸ್ಯ ಧಾಟಿಯಲ್ಲಿ ” ಗೋಪಾಲಯ್ಯ ನಮ್ಮ ಗಿರಾಕಿನೇ. ಆದರೆ ಈಗ ನಮ್ಮ ಜೊತೆಗಿಲ್ಲ. ರಾಜಕೀಯವಾಗಿ ನಾವು ಬೇರೆ ಬೇರೆ ಪಕ್ಷದಲ್ಲಿದ್ದರೂ ವೈಯಕ್ತಿಕವಾಗಿ ನಾವು ಬಹಳ ಹತ್ತಿರದಲ್ಲಿದ್ದೇವೆ’ ಎಂದು ಕಿಚಾಯಿಸಿದರು. ಇದಕ್ಕೆ ವೇದಿಕೆಯಲ್ಲಿದ್ದ ಗೋಪಾಲಯ್ಯ ಕೈ ಮುಗಿದು ನಕ್ಕರು.

ಅಂಡರ್‌ಪಾಸ್‌ ಬಗ್ಗೆ ಅಪಸ್ವರ: ಅಂಡರ್‌ಪಾಸ್‌ ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಶಾಸಕ ಅಶ್ವತ್ಥ ನಾರಾಯಣ, “ಡಾ.ರಾಜ್‌ಕುಮಾರ್‌ ರಸ್ತೆಯನ್ನು ಸಿಗ್ನಲ್‌ ಮುಕ್ತ ಮಾಡುವ ಸಲುವಾಗಿ ಅಂಡರ್‌ಪಾಸ್‌ ನಿರ್ಮಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಈ ಜಂಕ್ಷನ್‌ ಹೊರತುಪಡಿಸಿದರೆ ಮುಂದಿನ ಜಂಕ್ಷನ್‌ಅನ್ನು ಸಿಗ್ನಲ್‌ವುುಕ್ತ ಮಾಡುವ ಯೋಜನೆ ರೂಪಿಸಿಲ್ಲ. ಹಾಗೆಯೇ ವಿವೇಕಾನಂದ ಕಾಲೇಜು ಸಮೀಪದ ಅಂಡರ್‌ಪಾಸ್‌ನ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ತರಾತುರಿಯಲ್ಲಿ ಉದ್ಘಾಟಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಳಸೇತುವೆಗೆ ನಿರಂಜನ್‌ ಹೆಸರು: ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂಡರ್‌ಪಾಸ್‌ಗೆ ಹುತಾತ್ಮ ಲೆಫ್ಟಿನೆಂಟ್‌ ಕರ್ನಲ್‌ ನಿರಂಜನ್‌ ಅವರ ಹೆಸರು ನಾಮಕರಣ ಮಾಡಲಾಗುವುದು ಎಂದು ಮೇಯರ್‌ ಜಿ.ಪದ್ಮಾವತಿ ಘೋಷಿಸಿದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಬಗ್ಗೆ ಕೇಳಿದಾಗ, “ಯಾರ ಹೆಸರನ್ನಾದೂ ಇಡಿ. ನನ್ನ ಅಭ್ಯಂತರವಿಲ್ಲ. ನಾನು ಅದಕ್ಕೆ ಅನುಮೋದನೆ ನೀಡುತ್ತೇನೆ,’ ಎಂದು ತಿಳಿಸಿದರು. ಬಳಿಕ ಮೇಯರ್‌, ನಿರಂಜನ್‌ ಹೆಸರು ನಾಮಕರಣ ಮಾಡಲಾಗುವುದು ಎಂದು ಪ್ರಕಟಿಸಿದರು.

60 ಕೋಟಿ ರೂ. ಬ್ಯಾಗ್‌ ನಡೆದುಕೊಂಡು ವಾಪಸ್‌ ಹೋಯ್ತ?: ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಜಾರಿಗೊಳಿಸಲು ಮುಂದಾದಾಗ ಯೋಜನೆ ವಿರೋಧಿಸಿದವರು “ಯೋಜನೆಗಾಗಿ ಸಿದ್ದರಾಮಯ್ಯ ಮನೆಗೆ 60 ಕೋಟಿ ರೂ. ಹಣ ತುಂಬಿದ ಬ್ಯಾಗ್‌ ಹೋಯಿತು,’ ಎಂದು ಮಾತಾಡಿದ್ದರು. ವಿರೋಧಗಳಿಂದಾಗಿ ಯೋಜನೆ ಕೈಬಿಡಲಾಯಿತು. ಈಗ ಆ ಹಣದ ಸೂಟ್‌ಕೇಸ್‌ ಕಾಲು ಬಂದು ನಡೆದುಕೊಂಡು ಹೋಯಿತೇ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ಸಿಎಂ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next