ರಾಮನಗರ: ನರೇಗಾ ಯೋಜನೆಯ ಮೂಲಕ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಗ್ರಾಮಸ್ಥರು ಈ ಯೋಜನೆಯ ಸದಪಯೋಗ ಪಡೆಸಿಕೊಳ್ಳಬೇಕು ಎಂದು ಹುಲಿಕೆರೆ-ಗುನ್ನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸವಿತಾ ಸಲಹೆ ನೀಡಿದರು.
ತಾಲೂಕಿನ ಅವ್ವೇರಹಳ್ಳಿಯಲ್ಲಿರುವ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ನಡೆದ 2018-19ನೇ ಸಾಲಿನ ಜಮಾಬಂಧಿ ಗ್ರಾಮ ಸಭೆಯಲ್ಲಿ ಅವರು ಮಾತನಾಡಿ, ನರೇಗಾ ಯೋಜನೆಯ ಬಗ್ಗೆ ಗ್ರಾಮಗಳಲ್ಲಿ ತಿಳುವಳಿಕೆ ನೀಡಲಾಗುತ್ತಿದೆ. ಉದ್ಯೋಗದ ಜೊತೆಗೆ ಗ್ರಾಮದ ಅಭಿವೃದ್ಧಿಗೂ ಈ ಯೋಜನೆ ಸಹಕಾರಿಯಾಗಿದೆ. ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು. ಗ್ರಾಮಗಳ ಅಭಿವೃದ್ಧಿ ಮೂಲಕ ಗ್ರಾಮಸ್ಥರು ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಹೇಳಿದರು.
ಗ್ರಾಮಗಳ ಅಭಿವೃದ್ಧಿಗೆ ಅನುದಾನ: ಪಿಡಿಒ ವೆಂಕಟೇಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಪ್ರತೀ ವರ್ಷ ಅನುದಾನವನ್ನು ಸಂಬಂಧಪಟ್ಟ ಗ್ರಾಪಂಗಳಿಗೆ ನೀಡುತ್ತದೆ. ಗ್ರಾಪಂ ವರ್ಗ ಒಂದರಲ್ಲಿ ಕಂದಾಯ ವಸೂಲಾತಿ ಮಾಡುತ್ತದೆ ಸರ್ಕಾರದಿಂದ ಬಂದ ಹಣ, ಕಂದಾಯ ವಸೂಲಾತಿ ಹಣದಲ್ಲಿ ಪ್ರತೀ ಗ್ರಾಮದಲ್ಲಿ ಕೆಲಸಗಳು ಆಗಬೇಕಿದೆ. ಅಭಿವೃದ್ಧಿ, ಸಿಬ್ಬಂದಿ ವೇತನ, ಕುಡಿಯುವ ನೀರಿನ ವ್ಯವಸ್ಥೆ ಮುಂತಾದ ಕೆಲಸಗಳಿಗೆ ಅನುದಾನ ಬಳಸಿಕೊಳ್ಳಲಾಗುತ್ತದೆ. ಬಳಸಿಕೊಂಡ ಹಣ ಸಮರ್ಪಕವಾಗಿ ಖರ್ಚಾಗಿದೆಯೇ ಎಂಬುದನ್ನು ಮನಗಣಾಲು ಸಾರ್ವಜನಿಕ ಸಮ್ಮುಖದಲ್ಲಿ ಜಮಾಬಂಧಿ ನಡೆಸಲಾಗುತ್ತದೆ ಎಂದರು.
ನರೇಗಾ ಕಾಮಗಾರಿಯಲ್ಲಿ ವೈಯಕ್ತಿಕ 64, ಸಮುದಾಯ 33 ಕಾಮಗಾರಿ ನಡೆಸಲಾಗಿದೆ. ಸರ್ಕಾರದ ನಿಯಮಾನುಸಾರ ಕ್ರಿಯಾ ಯೋಜನೆ ತಯಾರಿಸಿ, ಗ್ರಾಮಗಳ ಚರಂಡಿ, ಕುಡಿಯುವ ನೀರು ದುರಸ್ತಿ ಸೇರಿದಂತೆ ಬೀದಿ ದೀಪಗಳ ನಿರ್ವಹಣೆ ಮಾಡಲಾಗಿದೆ. ಜೊತೆಗೆ ವರ್ಗ ಒಂದರಲ್ಲಿ ವಸೂಲಾದ ಕಂದಾಯದ ಹಣದಲ್ಲಿ ಸಿಬ್ಬಂದಿ ವೇತನ, ಕಚೇರಿ ನಿರ್ವಹಣೆ, ವಿದ್ಯುತ್ ಬಿಲ್, ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ಸಾಮಗ್ರಿ ಖರೀದಿ ಮಾಡಲಾಗಿದೆ ಎಂದು ಓದಿ ತಿಳಿಸಿದರು.
ಈ ಸಭೆಯಲ್ಲಿ ಕೃಷಿ ಅಧಿಕಾರಿ ಪ್ರದೀಪ್, ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮೇಲ್ವೀಚಾರಕಿ ಶಿವಮ್ಮ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಎಸ್.ದೇವರಾಜು, ಉಪಾಧ್ಯಕ್ಷ ರಾಜು, ಸದಸ್ಯರಾದ ಎ.ಸಿ.ಕೆಂಪಯ್ಯ, ಶ್ರೀನಿವಾಸಮೂರ್ತಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಂಗಸ್ವಾಮಿ, ಬಿಲ್ಕಲೆಕ್ಟರ್ ರೇಣುಕಯ್ಯ, ಮುಖಂಡರಾದ ಶಂಕರ್, ಶಾಂತರಾಜು, ಚಂದ್ರಾನಾಯಕ್, ಕೃಷ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.