ಬೆಳಗಾವಿ: ಯಾವ ಸಂಸ್ಥೆಯಲ್ಲಿ ಶಿಕ್ಷಣ, ಜ್ಞಾನ ಇರುತ್ತದೋ ಅದರಿಂದ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಜೀರಗೆ ಸಭಾಂಗಣದಲ್ಲಿ ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಮುಂಚೆ ಭೂಮಿ, ಬಂಡವಾಳ ಜಾಸ್ತಿ ಇದ್ದವರು ಜಗತ್ತು ಆಳುತ್ತಿದ್ದರು. 21ನೇ ಶತಮಾನದಲ್ಲಿ ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ. ಜಗತ್ತಿನಲ್ಲಿಯೇ ಬೆಂಗಳೂರು ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕೆ ವಿವಿಧ ದೇಶಗಳ ಗಣ್ಯರು ಬರುತ್ತಿದ್ದಾರೆ. ಕೆಎಲ್‌ಇ ಸಂಸ್ಥೆ ಜ್ಞಾನ ಮಂದಿರದಲ್ಲಿ ಕೆಲಸ ಮಾಡಲು ಸಿಕ್ಕಿದ ಭಾಗ್ಯ ನೀವೇ ಧನ್ಯರು. ಕೆಎಲ್‌ಇ ಸಂಸ್ಥೆಗೆ ದೊಡ್ಡ ಇತಿಹಾಸವಿದೆ. ಸಾವಿರಾರು ಗುರುಗಳು, ದಾನಿಗಳು ಕೂಡಿ ಕಟ್ಟಿರುವ ದೊಡ್ಡ ಸಂಸ್ಥೆ. ಕೆಎಲ್‌ಇ ಅತ್ಯಂತ ಪ್ರಜಾಸತಾತ್ಮಕ ಇರುವ ಶಿಕ್ಷಣ ಸಂಸ್ಥೆ. ಡಾ| ಪ್ರಭಾಕರ ಕೋರೆ ಸ್ಥಾನ ಅತ್ಯಂತ ಮಹತ್ವದ್ದು. ಅವರು ಚುನಾಯಿತ ಚೇರಮನ್ ಆಗಿದ್ದಾರೆ ಹೊರತು ನೇಮಕಗೊಂಡ ಚೇರಮನ್ ಅಲ್ಲ ಎಂದು ಹೊಗಳಿದರು.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕೆಎಲ್‌ಇ ಸಂಸ್ಥೆ ಪೂರಕವಾಗಿದೆ. ಕೆಎಲ್‌ಇ ಸಂಸ್ಥೆ ಇರದಿದ್ದರೆ ಕರ್ನಾಟಕದ ಸ್ಥಿತಿ ಹೇಗಿರುತ್ತಿತ್ತು ಎಂದು ನಾವು ಊಹಿಸಿಕೊಳ್ಳುವುದು ಅಸಾಧ್ಯ. ಕೋರೆ ಅವರಂತಹ ನೂರಾರು ಜನ ಬಂದರೆ ಈ ದೇಶದ ಚಿತ್ರಣವೇ ಬದಲಾಗುತ್ತದೆ. ಕೋರೆ ಅವರ ಜ್ಞಾನ ಭಂಡಾರ, ಯಶಸ್ಸಿನ ಪಯಣ ಹೀಗೆಯೇ ಮುಂದೆ ಸಾಗಲಿ ಎಂದರು.
ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಎಲ್‌ಇ ಸಂಸ್ಥೆ ಕಟ್ಟುವಲ್ಲಿ ಸಪ್ತರ್ಷಿಗಳ ಕೊಡುಗೆ ಅಪಾರ. ಅವರ ತ್ಯಾಗದ ಫಲದಿಂದಲೇ ಸಂಸ್ಥೆ ಬೆಳೆದಿದೆ. ನನ್ನ ಒಬ್ಬನಿಂದ ಇದು ಬೆಳೆದಿಲ್ಲ. ಎಂಟನೇ ಋಷಿ ಅಂತ ನನ್ನನ್ನು ಸಂಬೋಧಿಸಲಾಗಿದೆ. ಸಪ್ತರ್ಷಿಗಳು ಶಿಕ್ಷಕರಾಗಿದ್ದರು, ನಾನು ಶಿಕ್ಷಕನಲ್ಲ. ಮನೆಯ ಕುಟುಂಬದ ಹಿರಿಯ ಮಾತ್ರ ಎಂದರು.
ಕೆಎಲ್‌ಇ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಈಗ ಉನ್ನತ ಸ್ಥಾನದಲ್ಲಿ ಇದ್ದಾರೆ. ಇನ್ಫೋಸಿಸ್‌ನ ಸುಧಾಮೂರ್ತಿ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ದಿ.ಅನಂತಕುಮಾರ, ಪ್ರಹ್ಲಾದ ಜೋಶಿ, ಮುರಗೇಶ ನಿರಾಣಿ ಅನೇಕ ರಾಜಕೀಯ ಮುಖಂಡರು ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು ಎಂಬುದು ಹೆಮ್ಮೆಯ ಸಂಗತಿ ಎಂದರು.
ಕೇಂದ್ರ, ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಸಂಸ್ಥೆಯ ರಚನಾತ್ಮಕ ಕಾರ್ಯಗಳಿಗೆ ಕೈಜೋಡಿಸಿವೆ. ಈ ದಿಸೆಯಲ್ಲಿ ಬಿಜೆಪಿಗೆ ಸಂಸ್ಥೆಯು ಚಿರಋಣಿಯಾಗಿದೆ. ನಮ್ಮ ಸಂಸ್ಥೆ ಯಾರಿಂದ ಉದ್ಧಾರ ಆಗುತ್ತದೆಯೋ ಅಂತವವರಿಗೆ ನಾವು ಬೆಂಬಲಿಸುತ್ತೇವೆ. ಹೀಗಾಗಿ ಅಭ್ಯರ್ಥಿಗಳಾದ ಅರುಣ ಶಾಹಾಪೂರ ಹಾಗೂ ಹನುಮಂತ ನಿರಾಣಿಯವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕೆಂದು ಕೆಎಲ್‌ಇ ಸಂಸ್ಥೆಯ ಶಿಕ್ಷಕರು ಹಾಗೂ ಪದವೀಧರರಿಗೆ ಕರೆ ನೀಡಿದರು.
ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿದರು. ಸಚಿವೆ ಶಶಿಕಲಾ ಜೊಲ್ಲೆ, ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ ಬೆನಕೆ, ಅಮರಸಿಂಹ ಪಾಟೀಲ, ವಿಶ್ವನಾಥ ಪಾಟೀಲ, ಅನಿಲ ಪಟ್ಟೇದ, ಜಯಾನಂದ ಮುನವಳ್ಳಿ ಇದ್ದರು.