Advertisement

“ನಗರೀಕರಣದಿಂದ ದೇಶದ ಅಭಿವೃದ್ಧಿ ಅಸಾಧ್ಯ’

04:45 PM Aug 26, 2017 | Team Udayavani |

ರಾಮನಗರ: ಅತಿಯಾದ ನಗರೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ಗ್ರಾಮೀಣ ಪ್ರದೇಶಗಳು ಸಂಪನ್ಮೂಲ ಭರಿತವಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಾನಪದ ವಿದ್ವಾಂಸ ಹಿ.ಶಿ.ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು. ನಗರದ ಹೊರವಲಯದಲಿರುವ ಜಾನಪದ ಲೋಕದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಗ್ರಾಮೀಣ ಜನತೆ ಅಧುನಿಕ ಅಕರ್ಷಣೆಗಳಿಗೆ ಒಳಗಾಗಿ ನಗರಗಳಿಗೆ ವಲಸೆ ಹೋಗಬಾರದು ಎಂದರು. ಇದು ಯಾಂತ್ರಿಕ ಯುಗ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಯಂತ್ರಗಳು ಬಳಕೆಯಲ್ಲಿದೆ. ಹೀಗಾಗಿ ಯಂತ್ರ ಸಂಸ್ಕೃತಿಯೇ ಹೆಚ್ಚಾಗಿ, ಜನಪದ ಸಂಸ್ಕೃತಿ ನಶಿಸುತ್ತಿದೆ, ಮೂಲ ಸಂಸ್ಕೃತಿಯನ್ನು ನಿರ್ಲಕ್ಷಿಸಿದ್ದರಿಂದ ಯಂತ್ರ ಸಂಸ್ಕೃತಿ ರಾಕ್ಷಸ ಸ್ವರೂಪ ಪಡೆದುಕೊಂಡಿದೆ ಎಂದು ಎಚ್ಚರಿಸಿದರು. ಅನಕ್ಷರಸ್ಥರಲ್ಲೂ ವಿದ್ವಾಂಸರಿದ್ದಾರೆ: ದೇಶೀ ಅಡುಗೆಗೆ ಬದಲಾಗಿ ಪಾಶ್ಚಾತ್ಯ ದೇಶಗಳ ಆಹಾರವೇ ಇಂದು ಹೆಚ್ಚು ಆಕರ್ಷಣೆಯಾಗಿದೆ. ದುಡ್ಡು ಕೊಟ್ಟು ಆರೋಗ್ಯ ಕೆಡೆಸಿಕೊಳ್ಳತ್ತಿದ್ದೇವೆ ಎಂದ ಅವರು ಜನಪದ ಸಂಸ್ಕೃತಿ
ಅನುಸರಿಸಿದರೆ ಆರೋಗ್ಯ ಕೆಡುವುದಿಲ್ಲ. ಪುಸ್ತಕ ಬರೆದವರು ಮಾತ್ರ ವಿದ್ವಾಂಸರಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಅನಕ್ಷರಸ್ಥರಲ್ಲಿಯೂ ವಿದ್ವಾಂಸರನ್ನು ಕಾಣಬಹುದು. ಇಂದು ಕಲಿಯದವರು, ಕಲಿತವರಿಗೆ ಕಲಿಸಬೇಕಾಗಿದೆ ಎಂದರು. ಅಂತರ್ಜಲ ಹೆಚ್ಚಿಸಲು ಮುಂದಾಗಿ: ಕರ್ನಾಟಕ ಜಾನಪದ ಪರಿಷತ್‌ ಗೌರವ ಕಾರ್ಯದರ್ಶಿ ರಾಜೇಗೌಡ ಹೊಸಹಳ್ಳಿ ಮಾತನಾಡಿ, ಅಧುನಿಕತೆಯಿಂದಾಗಿಯೇ ಇಂದು ಪರಿಸರಕ್ಕೂ ಧಕ್ಕೆಯಾಗಿದೆ, ಪರಿಸರ ಅಸಮತೋಲನಗೊಂಡಿದೆ. ಉಚಿತ ಊಟದ ಕಾರ್ಯಕ್ರಮ ಜನರ ಬದುಕನ್ನು ಸುಧಾರಿಸುತ್ತಿಲ್ಲ. ಅಂತರ್ಜಲ ಹೆಚ್ಚಿದರೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ದೊರೆಯುತ್ತದೆ, ಹೀಗಾಗಿ ಸರ್ಕಾರ ಅಂತರ್ಜಲ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು. ಜಾನಪದ ವೈದ್ಯೆ ರಾಮವ್ವ ಮತ್ತು ಪ್ರಗತಿಪರ ರೈತರಾದ ಚೆಲುವಯ್ಯ, ಮಹದೇವಮ್ಮ, ಭಾಗ್ಯಮ್ಮ, ನಿಂಗೇಗೌಡ, ಕವ್ವಾಲಿ ಹಾಡುಗಾರ ಮೊಹಮದ್‌ ಸೈಯದ್‌, ತೊಗಲುಗೊಂಬೆ ಕಲಾವಿದೆ ಗೌರಮ್ಮ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಎಂ.ಮಾಯಿಗೇಗೌಡ, ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಟಿ.ತಿಮ್ಮೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು, ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಕನಕಾ, ಅಧ್ಯಾಪಕರಾದ ನಾಗರಾಜು, ಉಮೇಶ್‌, ನಂಜುಂಡ, ಅಂಕನಹಳ್ಳಿ ಪಾರ್ಥ, ರಾಧಾ,
ಸಂಗೀತ ವಿದ್ವಾನ್‌ ಶಿವಾಜಿರಾವ್‌ ಮುಂತಾದವರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next