Advertisement

ನಿಸರ್ಗ ಪ್ರಿಯರ ನೆಚ್ಚಿನ ತಾಣ ಶಿವಗಿರಿ ಆಯುರ್ವೇದ ವನ

02:59 PM Jul 25, 2022 | Team Udayavani |

ರಬಕವಿ-ಬನಹಟ್ಟಿ: ಜೈನರ ಕಾಶಿ ಎಂದೇ ಖ್ಯಾತಿ ಹೊಂದಿರುವ ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟ ಅನೇಕರ ಪರಿಶ್ರಮದಿಂದ ಹಚ್ಚ ಹಸಿರಾಗಿ ಕಂಗೊಳಿಸುತ್ತಿರುವ ಭದ್ರಗಿರಿ ಬೆಟ್ಟದ ಶಿವಗಿರಿ ಆಯುರ್ವೇದ ವನ ನಿಸರ್ಗ ಪ್ರಿಯರನು ಆಕರ್ಷಿಸುತ್ತಿದೆ.

Advertisement

ಕಳೆದ 10 ವರ್ಷಗಳ ಹಿಂದೆ ಬೆಟ್ಟಕ್ಕೆ ಆಗಮಿಸಿದ ಜೈನ ಮುನಿ 108 ಶ್ರೀ ಕುಲರತ್ನಭೂಷಣ ಮಹಾರಾಜರು, ಜೈನ ಧರ್ಮಿಯರನ್ನು ಹಾಗೂ ಅನ್ಯ ಜಾತಿಯರನ್ನೂ ತಮ್ಮ ಪ್ರವಚನದಿಂದ ಜಾಗೃತಿಗೊಳಿಸಿದ್ದಾರೆ. ಲಕ್ಷಾಂತರ ಸಸಿಗಳನ್ನು ನೆಡುವ ದೊಡ್ಡ ಕಾಯಕಕ್ಕೆ ಮುಂದಾಗಿ ತಮ್ಮ ಪರಿಸರ ಪ್ರೇಮವನ್ನು ಭೂತಾಯಿಗೆ ಅರ್ಪಿಸಿದ್ದಾರೆ. ಅನೇಕ ಅನ್ಯ ಧರ್ಮಿಯರ ಸ್ವಾಮೀಜಿಗಳು, ಸಾಹಿತಿಗಳು, ರಾಜಕೀಯ ಮುಖಂಡರು, ರೈತ ಕುಟುಂಬಗಳು ಸೇರಿದಂತೆ ಅನೇಕ ಸಾಧಕರನ್ನು ಇಲ್ಲಿಗೆ ಆಹ್ವಾನಿಸಿ ಅವರ ಹಸ್ತದಿಂದ ಲಕ್ಷಾಂತರ ಸಸಿಗಳನ್ನು ನೆಟ್ಟಿದ್ದಾರೆ.

ಇಲ್ಲಿಗೆ ಬರುವ ಅನೇಕ ಶ್ರಾವಕ ಶ್ರಾವಕಿಯರು, ಕುಮಾರ ಕುಮಾರಿಕೆಯರು ಮಹಾರಾಜರ ಆಶೀರ್ವಾದ ಪಡೆದುಕೊಂಡು ಪ್ರತಿಯೊಬ್ಬರು ಪ್ರತಿದಿನ ಗಿಡಗಳಿಗೆ ನೀರು ಹಾಕುವ ಕಾಯಕದಲ್ಲಿ ನಿರತರಾಗುತ್ತಾರೆ. ಎರಡು ಮೂರು ಎಕರೆಯಲ್ಲಿ ಶಿವಗಿರಿ ವನ ಎಂದು ನಾಮಕರಣ ಮಾಡಿದ ಮುನಿಗಳು, ಅಲ್ಲಿ ಸಾವಿರಾರು ಆಯುರ್ವೇದ ಸಸಿ ನೆಟ್ಟಿದ್ದಾರೆ. ಈಗ ಆಳೆತ್ತರಕ್ಕೆ ಬೆಳೆದು ಆಯುರ್ವೇದ ಔಷಧಿ ನೀಡಲು ಸಿದ್ಧವಾಗಿವೆ.

ಇಲ್ಲಿ ಪೆರಲು, ಚಿಕ್ಕು, ಸಿತಾಫಲ, ಮಾವು, ಹುಣಸೆ, ಟೆಂಗು, ಸುಬಾಬುಲ, ಆಲ, ಅರಳಿಮರ, ಗುಲಗಂಜಿ, ಹನುಮ ಫಲ, ರಾಮಫಲ, ನೇರಳೆ, ಬೆಟ್ಟದ ನೆಲ್ಲಿ, ನೀಲಗಿರಿ, ಸಂಪಿಗೆ, ಬೇವು, ಗುಡ್ಡದ ತುಳಸಿ, ಹೊಂಗೆ ಸೇರಿದಂತೆ ಐದು ನೂರಕ್ಕೂ ವಿವಿಧ ಮಾದರಿಯ ಆಯುರ್ವೇದಿಕ ಔಷಧಿ ನೀಡುವ ಗಿಡಗಳು ಹೆಮ್ಮರವಾಗಿವೆ.

ಪ್ರವಾಸಿಗರು ಹಾಗೂ ಸಾವಿರಾರು ಭಕ್ತರನ್ನು ತನ್ನತ್ತ ಕೈಬೀಸಿ ಕರೆಯಲು ಇಲ್ಲಿನ ಕೆರೆಯಲ್ಲಿ ಜಲಮಂದಿರ ನಿರ್ಮಿಸಲಾಗಿದೆ. ಬೆಟ್ಟದಲ್ಲಿ ಜೈನ ಧರ್ಮಿಯರ ಸಾವಿರಾರು ವರ್ಷಗಳ ಹಿಂದಿನವು ಎನ್ನಲಾಗುವ 750 ಕ್ಕೂ ಹೆಚ್ಚು ಗುಂಪಾಗಳಿವೆ. ಸುಂದರವಾದ ಹಸಿರಿನ ತಪ್ಪಲಿನಲ್ಲಿ ನೂತನವಾಗಿ ಕೃತಕ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಇವೆಲ್ಲವನ್ನು ರಕ್ಷಿಸಲು ಕೃತಕವಾಗಿ ನಿರ್ಮಿಸಿದ ಭದ್ರಗಿರಿ ಮಾತೆಯ ಮೂರ್ತಿ ಸುಂದರವಾಗಿ ನಿರ್ಮಿಸಿದ್ದು, ಈ ಬೆಟ್ಟಕ್ಕೆ ಮತ್ತಷ್ಟು ಮೆರಗು ನೀಡುತ್ತಿದೆ. ಸಂಜೆ ಹಾಗೂ ಬೆಳಗ್ಗೆ ನವಿಲುಗಳು, ಹಕ್ಕಿಗಳ ಚಿಲಿಪಿಲಿ ಹಾಗೂ ಅನೇಕ ಜಾತಿಯ ಪಕ್ಷಿಗಳು ಇಲ್ಲಿ ತಂಡತಂಡವಾಗಿ ಬಂದು ನರ್ತಿಸಿ ಹೂವಿನ ಮಕರಂದ ಹಾಗೂ ಹಣ್ಣು ಹಂಪಲ ತಿಂದು ಹೋಗುವ ಸನ್ನಿವೇಶವ ನೋಡುಗರಿಗೆ ಮುದ ನೀಡುತ್ತವೆ.

Advertisement

ಧರ್ಮ ಜಾಗೃತಿಯೊಂದಿಗೆ ಪರಿಸರ ಬೆಳೆಸಿ ರಕ್ಷಣೆ ಮಾಡುತ್ತಿರುವ ಜೈನ ಮುನಿ ಕುಲರತ್ನಭೂಷಣ ಮಹಾರಾಜರ ಸೇವೆ ಶ್ಲಾಘನಿಯ ಎಂದು ಇಲ್ಲಿಗೆ ಆಗಮಿಸುತ್ತಿರುವ ಅನೇಕ ಜೈನ್‌ ಹಾಗೂ ಅನ್ಯ ಧರ್ಮಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next