ಆಳಂದ: ನಾಗರಿಕ ಸಮಾಜದ ಮುಖ್ಯ ವಾಹಿನಿಯಲ್ಲಿ ಎಲ್ಲರೂ ಸಮ ಪ್ರಮಾಣದಲ್ಲಿ ದುಡಿದು ಸ್ವಾವಲಂಬನೆಯಿಂದ ಜೀವನ ಸಾಧಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕ, ಬೀದರ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಡಾ| ಜಯಕುಮಾರ ಶಿಂಧೆ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ವೆಂಕಯ್ಯ ಕೂಸಯ್ಯ ಗುತ್ತೇದಾರ ಸ್ಮಾರಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಎಂಥದೇ ಕಷ್ಟದ ಸಂದರ್ಭದಲ್ಲಿಯೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಸವಾಲನ್ನು ಎದುರಿಸಿ ಮೆಟ್ಟಿ ನಿಲ್ಲುವ ಛಾತಿ ಬೆಳೆಸಿಕೊಳ್ಳಬೇಕು. ಪದವಿ ಪಕ್ವತೆ ಹಂತವಾಗಿದೆ. ಇಲ್ಲಿ ವಿದ್ಯಾರ್ಥಿಗಳು ಎಲ್ಲ ರೀತಿಯಿಂದ ಪ್ರಬುದ್ಧರಾಗುತ್ತಾರೆ. ಅವರಿಗೆ ಈ ಹಂತದಲ್ಲಿ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಸಂಘದ ಅಧ್ಯಕ್ಷ ಮಹಾದೇವ ವಡಗಾಂವ ಮಾತನಾಡಿ, ಈ ಭಾಗದ ಹೆಚ್ಚು ವಿದ್ಯಾರ್ಥಿಗಳು ಉನ್ನತ ಅಧ್ಯಯನ ಕೈಗೊಂಡು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕು ಎಂದು ಹೇಳಿದರು.
ಮಹಾವಿದ್ಯಾಲಯ ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಅಶೋಕ ರೆಡ್ಡಿ, ಎಂಎಆರ್‌ಜಿ ಕಾಲೇಜಿನ ಪ್ರಾಚಾರ್ಯ ಡಾ| ಅಪ್ಪಾಸಾಬ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಣಮಂತ ಶೇರಿ ಖಜೂರಿ ಮಾತನಾಡಿದರು.
ಹುಮನಾಬಾದ ಉದ್ಯಮಿ ಅರವಿಂದ ಕುಲಕರ್ಣಿ, ಶರಣು ನಿಂಬರ್ಗಿ, ಎಸ್ ಆರ್‌ಜಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕ ಜ್ಯೋತಿ ವಿಶಾಖ್, ವಿದ್ಯಾರ್ಥಿ ಪ್ರತಿನಿಧಿ ರಾಹುಲ್ ಗುತ್ತೇದಾರ ಇದ್ದರು. ಯಲ್ಲಾಲಿಂಗ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಸಿದ್ಧಮ್ಮ ಹೊನ್ನಳ್ಳಿ ಸ್ವಾಗತಿಸಿದರು, ಪ್ರಾಧ್ಯಾಪಕ ಖಂಡಪ್ಪ ವಗ್ಗಿ ನಿರೂಪಿಸಿದರು, ಎನ್‌ಎಸ್‌ಎಸ್ ಅಧಿಕಾರಿ ರಾಜಕುಮಾರ ಸುತಾರ ವಂದಿಸಿದರು.