Advertisement

Jackfruit; ಹಲಸಿನ ಹಣ್ಣಿನ ತೊಳೆಗಳ ಸಂರಕ್ಷಣೆಗೆ ತಂತ್ರಜ್ಞಾನ ಅಭಿವೃದ್ಧಿ

02:56 PM Jan 14, 2024 | Team Udayavani |

ಬೆಂಗಳೂರು: ಹಲಸಿನ ಹಣ್ಣು ಮತ್ತದರ ಉತ್ಪನ್ನಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ… ಆದರೆ ಅವುಗಳನ್ನು ಬಿಡಿಸುವ ಜಂಜಾಟಕ್ಕೆ ತುಸು ಕಿರಿಕಿರಿ ಎನಿಸಿ ಹಣ್ಣಿನಿಂದ ದೂರವುಳಿಯುತ್ತಾರೆ. ಈ ಸಮಸ್ಯೆಗೆ ಮುಕ್ತಿ ನೀಡಲು ನಗರದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) “ಬೇಯಿಸಲು ಸಿದ್ಧವಾದ ಹಸಿ ಹಲಸಿನ ತೊಳೆಗಳ ಶೇಖರಣಾ ತಂತ್ರ ಜ್ಞಾನ’ವನ್ನು ಇತ್ತೀಚೆಗೆ ಸಂಶೋಧನೆ ನಡೆಸಿದೆ.

Advertisement

ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಹಲಸಿನ ಕಾಯಿ ಮತ್ತು ಹಣ್ಣಿನ ಋತುವಿನಲ್ಲಿ ಚಿಪ್ಸ್‌, ಹಪ್ಪಳ, ಹೋಳಿಗೆ, ಕಡುಬು, ಐಸ್‌ಕ್ರೀಂ, ದೋಸೆ ಹೀಗೆ ಹಲವು ವಿಧದ ತಿನಿಸುಗಳನ್ನು ತಯಾರಿ ಸುತ್ತಾರೆ. ಅಲ್ಲದೇ, ಹಲಸನ್ನು ತರಕಾರಿಯಾಗಿಯೂ ಬಳಸುತ್ತಿದ್ದು, ದೀರ್ಘಾವಧಿ ಬಳಕೆಗಾಗಿ ಉಪ್ಪು ಹಾಕಿ ಇಡುತ್ತಾರೆ. ಆದರೆ, ಇದರ ಕಾಲಾವಧಿ 3 ರಿಂದ 4 ತಿಂಗಳು ಮಾತ್ರ. ಅಷ್ಟರಲ್ಲೇ ಆ ಹಣ್ಣು ಕಂದು ಬಣ್ಣಕ್ಕೆ ತಿರುಗುತ್ತದೆ. ನಂತರ ಬಳಕೆಗೆ ಸಾಧ್ಯ ಆಗುವುದಿಲ್ಲ.

ಕರ್ನಾಟಕದಲ್ಲಿ ಮಾತ್ರವಲ್ಲದೇ, ಹಸಿ ಹಲಸಿನ ಕಾಯಿಯನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮಾಂಸದ ಬದಲಿಯಾಗಿ (ಸಸ್ಯ ಮಾಂಸ) ಬಳಸುತ್ತಾರೆ. ಪ್ರಸ್ತುತ, 1.98 ಮಿಲಿಯನ್‌ ಟನ್‌ ನಷ್ಟು ದೇಶದಲ್ಲಿ ಉತ್ಪಾದಿಸಿದರೆ, ಕಳೆದ ವರ್ಷ ಕರ್ನಾಟಕವೊಂದರಿಂದಲೇ 800 ಟನ್‌ಗಳಷ್ಟು ತಾಜಾ ಹಸಿ ಹಲಸು ರಫ್ತು ಮಾಡಲಾಗಿದೆ. ಬಾಂಗ್ಲಾದೇಶ ಮತ್ತು ಥಾಯ್ಲೆಂಡ್‌ ದೇಶಗಳು ಪ್ರಮುಖ ಪಾಲುದಾರರು. ಆದ್ದರಿಂದ ಈ ಹಣ್ಣಿಗೆ ವಿದೇಶಿ ಮಾರುಕಟ್ಟೆಯಲ್ಲಿಯೂ ಬೇಡಿಕೆ ಹೆಚ್ಚಿದೆ. ಆದರೆ, ಹಸಿ ಹಲಸಿನ ಕಾಯಿ ಲಭ್ಯತೆಯು ಸೀಮಿತವಾಗಿದ್ದು, ಕೆಲವು ದಿನಗಳಲ್ಲಿ ಆ ಹಣ್ಣು ಕಂದು ಬಣ್ಣಕ್ಕೆ ತಿರುಗುವುದೇ ಬಳಕೆಯ ಪ್ರಮುಖ ಸಮಸ್ಯೆಯಾಗಿತ್ತು. ಇದನ್ನರಿತ ಐಐಎಚ್‌ಆರ್‌ ವಿಜ್ಞಾನಿಯೊಬ್ಬರು “ಬೇಯಿಸಲು ಸಿದ್ಧವಾದ ಹಸಿ ಹಲಸಿನ ತೊಳೆಗಳ ಶೇಖರಣಾ ತಂತ್ರಜ್ಞಾನ’ವನ್ನು ಅಭಿವೃದ್ಧಿಪಡಿಸಿದರು.

ಈ ತಂತ್ರಜ್ಞಾನದಿಂದ ಬೇಯಿಸಲು ಸಿದ್ಧವಾದ ಉತ್ಪನ್ನದಲ್ಲಿ ಯಾವುದೇ ಬದಲಾವಣೆಯಿಲ್ಲದೇ ಸುಮಾರು 18 ತಿಂಗಳುಗಳಿಗಿಂತ ಹೆಚ್ಚಿನ ಕಾಲ ಬಳಸಬಹುದಾಗಿದೆ. ಈ 18 ತಿಂಗಳುಗಳಲ್ಲಿ ಯಾವುದೇ ಸಮಯದಲ್ಲಿ ಅದನ್ನು ಹೊರ ತೆಗೆಯಬಹುದು, ಯಾವುದೇ ಉತ್ಪನ್ನಕ್ಕೆ ಅಡುಗೆ ಮಾಡಲು ಅಥವಾ ಸಂಸ್ಕರಿಸಲು ಬಳಸಬಹುದು. ಕಂದುಬಣ್ಣವನ್ನು ತಡೆಗಟ್ಟಲು. ಸಂಗ್ರಹಣೆ ಜೀವಿತಾವಧಿಯನ್ನು ವಿಸ್ತರಿಸಲು ಈ ಪ್ರಕ್ರಿಯೆ ಅಥವಾ ತಂತ್ರಜ್ಞಾನವು ರೈತರಿಗೆ ಮತ್ತು ವ್ಯಾಪಾರಿಗಳಿಗೆ ವರದಾನವಾಗಿದ್ದು, ಈ ತಂತ್ರಜ್ಞಾನವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರವು ಮೊದಲ, ದ್ವಿತೀಯ ಹಂತದಲ್ಲಿ ಸಂರಕ್ಷಣೆಯ ಅನುಮೋದನೆ ನೀಡಿದೆ. ಹಲಸಿನ ಹಣ್ಣಿನಿಂದ ತಿನಿಸು ಮಾತ್ರವಲ್ಲದೆ, ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಕೆಲ ಭಾಗಗಳಲ್ಲಿ ಹಲಸಿನ ಸಾಂಬಾರು ಸವಿಯಾದ ಪದಾರ್ಥ. ಕೋವಿಡ್‌ ನಂತರ ಬಹುತೇಕ ರಾಷ್ಟ್ರಗಳು ಸಿದ್ಧ ಆಹಾರ ಮತ್ತು ತ್ವರಿತ ಊಟದ ವ್ಯವಸ್ಥೆ ಅಳವಡಿಸಿಕೊಂಡಿವೆ.

ಈ ತಂತ್ರಜ್ಞಾನವು ಇನ್‌ ಸ್ಟೆಂಟ್‌ ಹಲಸಿನ ಪ್ಯಾಕ್‌ ಹೊಂದಿದ್ದು, ಸೇವಿಸುವ ಮೊದಲು, ಪ್ಯಾಕೆಟಿನ್ನು 5 ರಿಂದ 8 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಅದ್ದಿ ಮತ್ತು ನಂತರ ಅದನ್ನು ಕತ್ತರಿಸಿ ನೇರವಾಗಿ ಅನ್ನ ,ಚಪಾತಿ ಅಥವಾ ರೊಟ್ಟಿ ಜತೆ ಸೇವಿಸಬಹುದು. ಇದು ಮಾರುಕಟ್ಟೆಯಲ್ಲಿ ಬಹಳ ಸೀಮಿತ ಉಪಸ್ಥಿತಿಯನ್ನು ಹೊಂದಿರುವ ನವೀನ ಉತ್ಪನ್ನವಾಗಿದೆ.

Advertisement

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next