ನಂಜನಗೂಡು: ನಗರೋತ್ಥಾನ ಯೋಜನೆಯಡಿ ನಂಜನಗೂಡು ನಗರದ ಅಭಿವೃದ್ಧಿಗಾಗಿ 30 ಕೋಟಿ ರೂ. ಮಂಜೂರಾಗಿದ್ದು, ಈ ಸಾಲಿನಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಬಹುದು ಎಂದು ನಗರಸಭಾ ಮುಖ್ಯಾಧಿಕಾರಿ ರಾಜಣ್ಣ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ನಗರಸಭೆಯ 2022ನೇ ಸಾಲಿನ ಮುಂಗಡ ಪತ್ರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಮುಂಗಡ ಪತ್ರದ 36 ಕೋಟಿ ರೂ.ಗಳಲ್ಲಿ ಈಗಾಗಲೆ 30 ಕೋಟಿ ರೂ.ಗಳನ್ನು ನಗರದ ಅಭಿವೃದ್ಧಿಗಾಗಿ ಖರ್ಚು ಮಾಡಿದ ಹೆಮ್ಮೆ ಇದೆ ಎಂದರು.
ನಗರಸಭೆ ಅಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ ಮಾತನಾಡಿ, ನಗರಸಭೆಗೆ ಇತ್ತೀಚಿಗೆ ಹಸ್ತಾಂತರವಾದ ದೇವೀರಮ್ಮನಹಳ್ಳಿ ಬಡಾವಣೆಯನ್ನು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ನಗರದ 4 ದಿಕ್ಕುಗಳಲ್ಲಿ ಕಮಾನುಗಳು ಹಾಗೂ ಆತ್ಯಾಧುನಿಕ ಚಿತಾಗಾರಗಳು ಟೆಂಡರ್ ಹಂತದಲ್ಲಿವೆ. ನಗರಕ್ಕೊಂದು ಶವವಾಹನ, ನಗರದ ಮಧ್ಯದಲ್ಲಿರುವ ಶ್ರೀಕಂಠೇಶ್ವರ ಕಲಾ ಮಂದಿರದ ಮುಂಭಾಗ ಉದ್ಯಾನವನ ಅಭಿವೃದ್ಧಿ ಈ ಸಾಲಿನ ಮುಖ್ಯ ಯೋಜನೆಗಳಾಗಿವೆ ಎಂದು ವಿವರಿಸಿದರು.
ನಗರದ ವಸತಿ, ರಸ್ತೆ, ಒಳಚರಂಡಿ, ಕುಡಿಯುವ ನೀರು, ಬೀದಿ ದೀಪಗಳ ಕುರಿತಂತೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸುರೇಶ್‌ಕುಮಾರ್ ಮತ್ತಿತರ ಸದಸ್ಯರು ಮನವಿ ಮಾಡಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ ಸ್ಥಾಯಿ ಸಮಿತಿ ಅಧ್ಯಕ್ಷೆ ಮಿನಾಕ್ಷಿ ನಾಗರಾಜು, ಸಹಾಯಕ ಅಭಿಯಂತರ ಶ್ರೀನಿವಾಸ್, ಮೈಥಿಲಿ ಸೇರಿದಂತೆ ಮತ್ತಿತರರು ಉಪಸ್ಥಿರಿದ್ದರು.
ತುರ್ತು ಕೆಲಸಗಳಿಗೆ 25 ಲಕ್ಷ ರೂ. ಮೀಸಲಿಡಲು ಆಗ್ರಹ :
ಸಭೆಯಲ್ಲಿ ಸದಸ್ಯರಾದ ಪ್ರದೀಪ್, ರಂಗಸ್ವಾಮಿ, ಜಯಲಕ್ಷ್ಮೀ, ಶ್ವೇತಲಕ್ಷ್ಮೀ, ಮಹದೇವಮ್ಮ, ರೇಹನಾ ಭಾನು, ಮಂಜುಳಾ, ಸಿದ್ದರಾಜು, ಮುರುಗೇಶ ಮತ್ತಿತರರು ಮಾತನಾಡಿ, ನಗರದಲ್ಲಿ ತುರ್ತು ಕೆಲಸಗಳಿಗಾಗಿ ಹಣ ವಿನಿಯೋಗಿಸಲು ಸಹ ನಗರಸಭೆಯಲ್ಲಿ ಪರದಾಡಬೇಕಿದೆ. ತುರ್ತು ಅಗತ್ಯಗಳಿಗಾಗಿ ಅಧ್ಯಕ್ಷರ ಸುಪರ್ದಿಯಲ್ಲಿ 25 ಲಕ್ಷ ರೂ.ಗಳನ್ನಾದರೂ ಮೀಸಲಿಡಬೇಕು. ಅದನ್ನು ಅವಶ್ಯ ಬಿದ್ದಲ್ಲಿ ತುರ್ತಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿ ಎಂದು ಆಗ್ರಹಿಸಿದರು.